ಬೆಂಗಳೂರು; ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಇಡಿಗೆ ಮಾಹಿತಿ ಇರುತ್ತದೆ, ಹೀಗಾಗಿ ಪ್ರಕರಣ ಬೆಳಕಿಗೆ ಬಂದಿರುತ್ತದೆ ಎಂದಿದ್ದಾರೆ.
ಇಡಿ ಮಾನದಂಡದ ಮೇಲೆ ದಾಳಿ ಮಾಡುತ್ತದೆ. ಇಡಿ ಒಂದು ಸ್ವಾಯತ್ತ ಸಂಸ್ಥೆ. ರಾಜಕೀಯ ಪಕ್ಷ ಸರ್ಕಾರ ಹೇಳುವಂತೆ ಮಾಡಲ್ಲ. ರಾಜ್ಯದಲ್ಲಿ ಹಲವಾರು ಜನರ ಮೇಲೆ ಎಸ್ಐಟಿ ರಚನೆ ಮಾಡಿದ್ದಾರೆ. ಆಗ ರಾಜ್ಯ ಸರ್ಕಾರದ ಪಾತ್ರ ಏನಿತ್ತು ಅಂತ ಹೇಳಿದ್ವಾ?. ಎಸ್ಐಟಿ ರಚನೆಯಾದಾಗ ಪಕ್ಷಪಾತ ಮಾಡದೇ ತನಿಖೆ ಆಗಲಿ ಅನ್ನೋದು ಆಶಯವಾಗಿತ್ತು. ಇಡಿಗೆ ಮಾಹಿತಿ ಇರುತ್ತದೆ, ಹೀಗಾಗಿ ಪ್ರಕರಣ ಬೆಳಕಿಗೆ ಬಂದಿರುತ್ತದೆ. ರಾಜಕೀಯ ಬಣ್ಣ ಕಟ್ಟಿ ದಿಕ್ಕು ತಪ್ಪಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮೋದಿ ಟೆರರಿಸ್ಟ್ ಎಂದು ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜಕೀಯದಲ್ಲಿ ಹಿರಿಯರು ಸಂಸ್ಕಾರದಿಂದ, ಸಂಯಮದಿಂದ ವರ್ತನೆ ಮಾಡಬೇಕು. ಇದು ಯುವಕರಿಗೆ ದಾರಿದೀಪ ಆಗುತ್ತದೆ. ವೈಯಕ್ತಿಕ ಹೇಳಿಕೆ, ನಿಂದನೆ ಮಾಡಿದ್ದಾರೆ. ಖರ್ಗೆಯವರು ರಾಜಕೀಯ ಅನುಭವಿಗಳಿದ್ದಾರೆ. ಹೈಕಮಾಂಡ್ ಗೆ ವೈಯಕ್ತಿಕವಾಗಿ ನಿಂದನೆ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಷಯಾಧಾರಿತ ಚರ್ಚೆಗೆ ಅವಕಾಶ ಇದೆ. ಈ ರೀತಿ ಹೇಳಿಕೆ ಕೊಡುವುದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದಿದ್ದಾರೆ.
ಆಗ್ನೇಯ ಕ್ಷೇತ್ರದ ಪರಿಷತ್ ಟಿಕೆಟ್ ಫೈಟ್ ವಿಚಾರ ಸಂಬಂಧ ಮಾತನಾಡಿ ಪದವೀಧರರ ಕ್ಷೇತ್ರಕ್ಕೆ ಈಗಾಗಲೇ ಮಿತ್ರ ಪಕ್ಷ ಟಿಕೆಟ್ ಘೋಷಿಸಿದೆ. ಈ ವಿಚಾರವಾಗಿ ಕುಮಾರಸ್ವಾಮಿಯವರು ನಿತಿನ್ ನಬಿನ್, ನಡ್ಡಾ ಭೇಟಿ ಮಾಡಿದ್ದಾರೆ. ವಾಸ್ತವಾಂಶದ ಬಗ್ಗೆ ಚರ್ಚೆ ಮಾಡಿದ್ದಾರೆ. ಅತೀ ಶೀಘ್ರವಾಗಿ ಇದಕ್ಕೆ ಉತ್ತರ ಸಿಗುತ್ತದೆ. ಕಾರ್ಯಕರ್ತರು, ನಾವು ಕಾಯುತ್ತಿದ್ದೇವೆ ಎಂದ ಅವರು ಜಿಬಿಎ ಚುನಾವಣೆ ವಿಳಂಬ ವಿಚಾರವಾಗಿ ಮಾತನಾಡಿ ಸುಪ್ರೀಂ ಕೋರ್ಟ್ ನಿಂದ ಸ್ಪಷ್ಟವಾದ ಆದೇಶ ಇದೆ. ಇವತ್ತು ನಾಳೆ ದಿನಾಂಕ ಘೋಷಣೆ ಆಗುತ್ತದೆ ಅಂತ ಬೆಂಗಳೂರು ಜನ ಕಾಯ್ತಿದ್ದಾರೆ. ನಾವು, ಬಿಜೆಪಿಯವರು ಕಾಯ್ತಿದ್ದೇವೆ. ಜಿಬಿಎ ಚುನಾವಣೆ ಮಾಡುವುದಕ್ಕೆ ಸರ್ಕಾರ ಯಾವುದೇ ಹೆಜ್ಜೆ ಇಟ್ಟಿಲ್ಲ. ರಾಜಕೀಯ ಹಿನ್ನೆಡೆಗೆ ಜಿಬಿಎ ಚುನಾವಣೆ ಕಾರಣ ಆಗತ್ತೆ ಅನ್ನೋ ಆತಂಕ ಇದೆ. 11 ವರ್ಷ ಆದ್ರೂ ಚುನಾವಣೆ ಆಗಿಲ್ಲ.ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ. ಯಾರನ್ನ ಕೂಡ ಪ್ರಶ್ನೆ ಮಾಡುವಂತಾಗ್ತಿಲ್ಲ ಎಂದಿದ್ದಾರೆ.











