ಕೊಪ್ಪಳ: ನನ್ನನ್ನು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ, ನನ್ನ ಗಟ್ಟಿ ಧ್ವನಿ ಇರಬಾರದೆಂದು ಕೆಲವು ದುಷ್ಟಶಕ್ತಿಗಳು ನನ್ನ ಸೋಲಿಸಿವೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು ಹಣ ನೀಡಿ, ಹಣ ಚೆಲ್ಲಿ ನನ್ನನ್ನು ಎಲ್ಲರೂ ಸೇರಿ ಸೋಲಿಸಿದ್ದಾರೆ. ನನ್ನ ಸೋಲಿನಲ್ಲಿ ಸ್ವಪಕ್ಷದವರು ಇದ್ದಾರೆ ಬೇರೆಯವರೂ ಇದ್ದಾರೆ. ಏನೇನೋ ಇದೆ ಅದನ್ನು ಹೇಳಲು ಹೋಗುವುದಿಲ್ಲ. ಯಾರು ಸಂವಿಧಾನ, ಸಾಮಾಜಿಕ ನ್ಯಾಯದ ಪರ ಇರುತ್ತಾರೋ ಅಂತವರನ್ನ ಕೆಲ ಸಮುದಾಯಗಳು ಹಿಡಿಸುವುದಿಲ್ಲ. ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದರು. ನಾನು ಶಾಸಕ, ಮಂತ್ರಿ ಆಗುವುದು ಮುಖ್ಯವಲ್ಲ. ನಾನು ಜೀವ ಇರುವವರೆಗೂ ಸಮುದಾಯದ ಪರ ಹೋರಾಟ ಮುಂದುವರೆಸುತ್ತೇನೆ. ನನ್ನದು ಹುಚ್ಚು ಸ್ವಾಭಿಮಾನ, ಹಠ ಎಂದಿದ್ದಾರೆ.
ನಾಲ್ಕಾರು ಜನ ಇದ್ದರು ಅವರನ್ನು ಭೇಟಿಯಾಗಬೇಕಿತ್ತು. ಆದರೆ ನಾನು ಭೇಟಿ ಆಗಲಿಲ್ಲ. ನನ್ನ ಸ್ವಯಂ ಕೃತ ಅಪರಾಧನೂ ಇದೆ,ಸ್ವಾಭಿಮಾನ ಇರಬಾರದು. ಇಲ್ಲದ್ದನ್ನೂ ಬಿಟ್ಟು,ಕೈಕಾಲು ಹಿಡಿದು ಸಲಾಂ ಹೊಡೆದು ಗೆದ್ದು ಬರಬೇಕು. ಅವರೇ ಕರೆದು ಕಳುಹಿಸಿದ್ದರು,ಹಣ ಕೋಡ್ತೀವಿ ಅಂದರು. ಆದರೆ ನಾನು ಹೋಗಲಿಲ್ಲ ಎಂದ ಆಂಜನೇಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಖರ್ಗೆ ಸಿಎಂ ಆಗಲಿ ಎಂದು ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ನನಗೆ ಗೋತ್ತಿಲ್ಲ,ಅದನ್ನ ರಾಯರೆಡ್ಡಿ ಅವರನ್ನೇ ಕೇಳಬೇಕು. ರಾಜ್ಯಸಭಾ ಸ್ಥಾನದ ಆಕಾಂಕ್ಷಿ ನಾನಲ್ಲ. ಪಕ್ಷ ನನಗೆ ಅವಕಾಶ ಕೊಟ್ಟಿದೆ. ಪಕ್ಷದವರು ನನಗೆ ಸ್ಪರ್ಧೆ ಮಾಡಬೇಡ ಅಂದರು. ಕಾರ್ಯಾಧ್ಯಕ್ಷನನ್ನಾಗಿ ಮಾಡುತ್ತೇವೆ ಎಲ್ಲ ಕಡೆಗೂ ಪ್ರಚಾರಕ್ಕೆ ಹೋಗಿ ಅಂದರು. ಸಿಎಂ ಜೊತೆಗೆ ಮಂತ್ರಿ ಆಗ್ತೀರಾ, ಆಮೇಲೆ ಎಂ ಎಲ್ ಸಿ ಮಾಡ್ತೀವಿ ಅಂದರು. ನಾನು ಅದನ್ನು ಕೇಳಲಿಲ್ಲ. ಜನರಿಂದ ಎದ್ದು ಬರಬೇಕು ಎಂದು ಹೋದೆ. ಇನ್ನು ಒಂದು ವರ್ಷ ಇದ್ದಾಗ ಸ್ಪರ್ಧೆ ಮಾಡಬೇಕೋ ಬೇಡವೋ ಎನ್ನುವುದರ ಬಗ್ಗೆ ತೀರ್ಮಾನ ಮಾಡುತ್ತೇನೆ. ಕನಕಗಿರಿ ಕ್ಷೇತ್ರದಲ್ಲಿ ಸಮಾಜಕ್ಕೆ ಟಿಕೆಟ್ ಕೊಡಿ ಎಂದು ಕೇಳುತ್ತೇವೆ ಎಂದಿದ್ದಾರೆ.











