ಬೆಂಗಳೂರು: ಕರ್ನಾಟಕದಲ್ಲಿರುವ ಕಾಂಗ್ರೆಸ್ ಪಾರ್ಟಿ ದೆಹಲಿಗೆ ಶಿಫ್ಟ್ ಆಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಇದ್ದಾಗಲೇ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಇಲ್ಲದೇ ಇದ್ದಾಗಲೇ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ಮಾಡುತ್ತಾರೆ ಅಂದರೆ ಏನರ್ಥ?. ಹಾಗಾದರೆ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಶುರುವಾಗಿದೆ. ಕರ್ನಾಟಕದಲ್ಲಿ ಸತ್ತ ಸರ್ಕಾರ ಇದೆ. ಬರಗಾಲ ಬಂದಿದೆ, ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಇವರೆಲ್ಲಾ ದೆಹಲಿಗೆ ಹೋಗುತ್ತಾರೆ. ಕುಡಿಯುವ ನೀರಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ನೀವು ದೆಹಲಿಯಲ್ಲೇ ಟೂರ್ ಮಾಡಿಕೊಂಡೇ ಇರಿ. ಇಲ್ಲಿಗೆ ಬರಬೇಡಿ, ದೆಹಲಿಯಲ್ಲೇ ಇರಿ. ಇರುವುದು ಎರಡೇ ವರ್ಷ, ಎರಡೂ ವರ್ಷ ದೆಹಲಿಯಲ್ಲೇ ಕಳೆಯಿರಿ. ದುರಂಧರ್ ಸಿನಿಮಾ ತರಹ ಪಾರ್ಟ್ 2 ಆರಂಭ ಆಗಿದೆ ಎಂದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಉಗ್ರನಿಗೆ ಶಿಕ್ಷೆ ಪ್ರಕಟ ವಿಚಾರದ ಬಗ್ಗೆ ಮಾತನಾಡಿದ ಅವರು ಕುಕ್ಕರ್ ಬಾಂಬ್ ಉಗ್ರನಿಗೆ ಗಲ್ಲು ಶಿಕ್ಷೆ ಕೊಡಬೇಕಿತ್ತು. ಈಗ ಕೋರ್ಟ್ ಕೊಟ್ಟಿರುವ ಆದೇಶಕ್ಕೆ ಸ್ವಾಗತ. ಆದರೆ ಗಲ್ಲು ಶಿಕ್ಷೆ ಕೊಡಬೇಕು. ಹೈಕೋರ್ಟ್ ಗೆ ಸರ್ಕಾರ ಗಲ್ಲು ಶಿಕ್ಷೆಗೆ ಮನವಿ ಮಾಡಲಿ. ಜನರನ್ನು ಸಾಯಿಸಲು ಬಂದವನು ಆತ, ಗಲ್ಲು ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಜನಿವಾರ ತೆಗೆಸುವ ಪ್ರಕರಣಗಳು ಪದೇ ಪದೇ ನಡೆಯುತ್ತಿದೆ. ಮೊದಲ ಸಲ ಅದಾಗಲೇ ಕ್ರಮ ವಹಿಸದೇ ಬೆಂಬಲ ಕೊಟ್ಟರು. ಈಗ ಜನಿವಾರ ಪ್ರಕರಣಗಳು ನಡೆಯುತ್ತಲೇ ಇವೆ. ಸರ್ಕಾರ ಇದಕ್ಕೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದೆ. ಜನಿವಾರ ತೆಗೆಸುವ ಪ್ರಕರಣಗಳಲ್ಲಿ ಸರಿಯಾದ ಕ್ರಮ ಆಗಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದಕ್ಕೊಂದು ನೀತಿ ತರುತ್ತೇವೆ, ನಿಯಮ ಮಾಡುತ್ತೇವೆ. ಜನಿವಾರ ತೆಗೆಸಿದವರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕದ ಬಗ್ಗೆ ಕಾರ್ಯಕ್ರಮದ ಬಗ್ಗೆ ಮಾತವನಾಡಿ ಉಮರ್ ಖಾಲಿದ್ ಒಬ್ಬ ದೇಶದ್ರೋಹಿ, ಇನ್ನೂ ಆತ ಜೈಲಿನಲ್ಲಿದ್ದಾನೆ. ಅಂತಹವನನ್ನು ಕಾಂಗ್ರೆಸ್ ವೈಭವೀಕರಿಸಲು ಹೊರಟಿದೆ. ಈ ಸರ್ಕಾರ ಯಾರ ಪರ ಅಂತ ಇದರಲ್ಲೇ ಗೊತ್ತಾಗುತ್ತದೆ. ಪೊಲೀಸರು ಕೂಡಲೇ ಅನುಮತಿ ವಾಪಸ್ ತೆಗೆದುಕೊಳ್ಳಬೇಕು. ಪೊಲೀಸರು ಅಂತಹವನ ಕಾರ್ಯಕ್ರಮಕ್ಕೆ ಭದ್ರತೆ ಕೊಡುತ್ತಾರೆ ಅಂದರೆ ಅದು ಇಲಾಖೆ ವೈಫಲ್ಯ. ಪೊಲೀಸರು ಈಗ ಅನುಮತಿ ಕೊಟ್ಟರೆ ಮುಂದೆ ಪೊಲೀಸರಿಗೆ ಸಮಸ್ಯೆ ಆಗುತ್ತದೆ ಎಂದು ತಿಳಿಸಿದ್ದಾರೆ.











