ಚಿತ್ರದುರ್ಗ; ಸಿಎಂ ಆಗಲು ಹಲವರು ಈಗ ಟವಲ್ ಹಾಕಿ ಕೂತಿದ್ದಾರೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಆಂತರಿಕ ಕಚ್ಚಾಟ ಉಲ್ಬಣಗೊಳ್ಳುತ್ತಿದೆ. ಸಿಎಂ ಆಗಲು ಹಲವರು ಈಗ ಟವಲ್ ಹಾಕಿ ಕೂತಿದ್ದಾರೆ. ಹೈಕಮಾಂಡ್ ಅವಕಾಶ ಕೊಟ್ಟರೆ 5 ವರ್ಷ ನಾನೇ ಸಿಎಂ ಎಂದಿದ್ದಾರೆ. ತಿಂಗಳ ಹಿಂದೆ ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ದರು. ಕಾಂಗ್ರೆಸ್ ಬಣ ಕದನದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿತವಾಗಿದೆ ಎಂದಿದ್ದಾರೆ.
ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಸಿಎಂ ಸಿದ್ಧರಾಮಯ್ಯ. ಬಡವರು, ರೈತರು, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರವಿದು. ಜನ ಛೀ ಥೂ ಎಂದು ಉಗಿದು ಶಾಪ ಹಾಕ್ತಿದ್ದಾರೆ. ಸಿಎಂ ಯಾರಾಗಿರ್ಬೆಕು, ಯಾರನ್ನ ಉಳಿಸಬೇಕು ನಮ್ಮ ಕೆಲಸ ಅಲ್ಲ. ಕಚ್ಚಾಟದಲ್ಲಿ ನಿರತ ಸರ್ಕಾರ ಇದ್ದರೆಷ್ಟು ಬಿದ್ದರೆಷ್ಟೆಂದು ಜನ ಮಾತಾಡ್ತಿದ್ದಾರೆ. ಸಚಿವರು, ಶಾಸಕರೇ ಪ್ರತಿದಿನ ಬಡಿದಾಡ್ತಿದ್ದಾರೆ. ನವೆಂಬರ್ ಅಂತ್ಯಕ್ಕೆ ತಾರ್ಕಿಕ ಅಂತ್ಯದ ಮುನ್ಸೂಚನೆ ಸಿಗ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗ್ಯಾರಂಟಿ ಯೋಜನೆಯಿಂದ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ. ತೆಲಂಗಾಣ ಸಿಎಂ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ನಮ್ಮ ರಾಜ್ಯದ ಪರಿಸ್ಥಿತಿ ಏನೂ ಭಿನ್ನವಾಗಿ ಉಳಿದಿಲ್ಲ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗ್ತಿಲ್ಲ. ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಿದೆ. ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹೆಣ್ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಿದೆ. ಸರ್ಕಾರ, ಗೃಹ ಸಚಿವರು ಕಾಳಜಿ ತೋರಿಸುತ್ತಿಲ್ಲ. ಸಿಎಂ ಕುರ್ಚಿ ಕಾಳಗ ಶುರುವಾಗಿದ್ದು ವೀಕೋಪಕ್ಕೆ ಹೋಗುತ್ತಿದೆ. ರಾಜ್ಯದಲ್ಲಿ ಏನು ಬೇಕಾದರು ಆಗಬಹುದು. ಸಿಎಂ ಹೇಳಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಿಲ್ಲ. ನವೆಂಬರ್ ನಂತರ ಸಿಎಂ ಆಗಿರುವ ಬಗ್ಗೆ ಸಿಎಂಗೆ ವಿಶ್ವಾಸ ಇಲ್ಲ.ಈ ಮೊದಲು ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದರು.ಈಗ ಹೈಕಮಾಂಡ್ ಸೂಚಿಸಿದರೆ ಐದು ವರ್ಷ ಇರುತ್ತೇನೆ ಅಂದಿದ್ದಾರೆ. ಕೆಲ ಶಾಸಕರು ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕಡೆಗಣನೆಯಾಗಿದೆ. ಅತಿವೃಷ್ಠಿಗೆ ಪರಿಹಾರ ಕೊಡುವ ಯೋಗ್ಯತೆಯೂ ಸರ್ಕಾರಕ್ಕಿಲ್ಲ. ಮುಖ್ಯಮಂತ್ರಿ ಇದ್ದರೇನು ಬಿದ್ದರೇನು ಎಂದು ಅಸಮಾಧಾನ ಹೊರ ಹಾಕಿದ್ದಾರೆ.











