ಬೆಂಗಳೂರು: ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ನಾವು ಎಲ್ಲದರಲ್ಲೂ ಭಾಗಿಯಾಗುತ್ತೇವೆ ಎಂದು ಬೆಂಗಳೂರಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ತಾಪುರ ಮತ್ತು ಗುರುಮಿಠಕಲ್ ನಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ನಾವು ಎಲ್ಲದರಲ್ಲೂ ಭಾಗಿಯಾಗುತ್ತೇವೆ. ಇದು ಸ್ವತಂತ್ರ ದೇಶ, ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಇದೆ. ಯಾರ್ಯಾರು ಪಥಸಂಚಲನ, ಮೆರವಣಿಗೆ ಮಾಡಿದರೂ ಎಲ್ಲರಿಗೂ ಅವಕಾಶ ಇದೆ. ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವ ದೇಶ. ಎಲ್ಲಾ ಸಂಘಟನೆಗಳಿಗೂ ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೂ ಆಗ್ರಹಿಸುತ್ತೇವೆ. ಕೋರ್ಟ್ ಬಹಳ ಸರಿಯಾದ ನಡೆ ಮಾಡಿದೆ. ನವೆಂಬರ್ 2 ರಂದು ಪಥಸಂಚಲನ ಮಾಡಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೋರ್ಟ್ ಸರ್ಕಾರಕ್ಕೆ ಎಚ್ಚರಿಸಿದೆ. ಸರ್ಕಾರ ಅನಾವಶ್ಯಕವಾಗಿ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಆದೇಶ ಮಾಡಿದಾಗ ಈ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂದಿದ್ದಾರೆ.
ಪಥಸಂಚಲನ ಸಾಕಷ್ಟು ಕಡೆ ನಡೆದಿದೆ, ಎಲ್ಲಾದರೂ ಸಮಸ್ಯೆ ಆಗಿದೆ. ಇದು ಸಮಾಜದಲ್ಲಿ ಆರ್ ಎಸ್ ಎಸ್ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ. ಹಾಗಾದರೆ ಮೊಹರಂ ಹಬ್ಬದಲ್ಲಿ ಚಾಟಿಯಿಂದ ಹೊಡೆದುಕೊಳ್ಳುವುದು ಸರಿಯಾ?. ಸರ್ಕಾರಕ್ಕೆ ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸ ಇದೆ. ಸಾಕಷ್ಟು ಸಮಸ್ಯೆಗಳಿರುವಾಗ ಸಣ್ಣ ಪುಟ್ಟ ವಿಚಾರಗಳಿಗೆ ಮೂಗು ತೂರಿಸುವುದು ಸರ್ಕಾರದ ದಿವಾಳಿತನ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬರ್ಥದಲ್ಲಿ ಡಾ. ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯತೀಂದ್ರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸಿಎಂ ತಮ್ಮದೇ ಆದ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕೃಷ್ಣ ಬೈರೇಗೌಡ ಯಾವ ಕಾರಣಕ್ಕೆ ಸಚಿವ ಸ್ಥಾನ ತ್ಯಜಿಸುವ ಮಾತಾಡಿದ್ದಾರೆ ಗೊತ್ತಿಲ್ಲ. ಇಲ್ಲಿಯವರೆಗೂ ಕಾಂಗ್ರೆಸ್ ನಾಯಕರು ಎಲ್ಲವೂ ಹೈಕಮಾಂಡ್ ಅಂತಿಮ ಎನ್ನುತ್ತಿದ್ದರು . ಈಗ ಕಾಂಗ್ರೆಸ್ ಹೈಕಮಾಂಡ್ ಈಗ ದೆಹಲಿಯಲ್ಲಿದ್ಯಾ ಅಥವಾ ಕರ್ನಾಟಕದಲ್ಲಿದ್ಯಾ ಅಂತಾ ಕಾಂಗ್ರೆಸ್ ಗೇ ಸಂಶಯ ಬರುತ್ತಿದೆ. ಯಾವ ಹೈಕಮಾಂಡ್ ಅನ್ನು ಕಾಂಗ್ರೆಸ್ ನವರು ಪಾಲನೆ ಮಾಡಬೇಕು?. ಯತೀಂದ್ರ ಅವರ ಹೈಕಮಾಂಡ್ ಮಾತಿಗೆ ಮನ್ನಣೆ ಕೊಡಬೇಕೋ ಅಥವಾ ದೆಹಲಿ ಹೈಕಮಾಂಡ್ ಮಾತಿಗೆ ಮನ್ನಣೆ ಕೊಡಬೇಕೋ ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ ಎಂದು ತಿಳಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯಗೆ ಖಾಲಿ ಟ್ರಂಕ್ ಎಂದು ಡಿಸಿಎಂ ಟೀಕೆ ವಿಚಾರದ ಬಗ್ಗೆ ಮಾತನಾಡಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿಯ ಟೀಕೆ ಮಾಡುತ್ತಾರೆ. ನ್ಯಾಯಸಮ್ಮತವಾಗಿ ಬರಬೇಕಾದ ಹಣ ಕೇಂದ್ರ ದಿಂದ ಬಂದಿದೆ.ಕೋವಿಡ್ ಸಮಯದಲ್ಲಿ ಬರಬೇಕಿದ್ದ ಹಣ ಕೂಡಾ ಬಂದಿದೆ. ಸಂಸದರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುವುದಿಲ್ಲ ಹೇಳಿದ್ದಾರೆ,











