ಮನೆ Latest News ಬೆಂಗಳೂರಿನಲ್ಲಿ ಆರ್ ಎಸ್ ಎಸ್ ಕಚೇರಿ ಎದುರು ಇಂದು ಎನ್ ಎಸ್ ಯುಐ ಪ್ರತಿಭಟನೆ ;...

ಬೆಂಗಳೂರಿನಲ್ಲಿ ಆರ್ ಎಸ್ ಎಸ್ ಕಚೇರಿ ಎದುರು ಇಂದು ಎನ್ ಎಸ್ ಯುಐ ಪ್ರತಿಭಟನೆ ; ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು

0

ಬೆಂಗಳೂರಿನಲ್ಲಿ ಆರ್ ಎಸ್ ಎಸ್ ಕಚೇರಿ ಎದುರು ಇಂದು ಎನ್ ಎಸ್ ಯುಐ ಪ್ರತಿಭಟನೆಗೆ ಸಂಬಂಧಪಟ್ಟಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು ನೀಡಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ದೂರು ನೀಡಿದ್ದಾರೆ. ತಕ್ಷಣ ಪ್ರತಿಭಟನೆ ನಡೆಸಿದ ಎನ್ ಎಸ್ ಯುಐ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಬೇಕು ಇಲ್ಲದಿದ್ದರೆ ನಾಳೆಯಿಂದ ಎಲ್ಲಾ ಸಚಿವರ ಮನೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಆರ್ ಎಸ್ ಎಸ್ ಕೇಂದ್ರ ಕಚೇರಿ ಕೇಶವಕೃಪಾ ಮುಂದೆ ಕಾಂಗ್ರೆಸ್ ಕಿಡಿಗೇಡಿಗಳು ಅನುಮತಿ ಪಡೆಯದೇ ಏಕಾಏಕಿ ಗೂಂಡಾ ವರ್ತನೆ ತೋರಿಸಿದ್ದಾರೆ. ಸಂಘದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಪೊಲೀಸ್ ಅನುಮತಿಯೊಂದಿಗೆ ಎಲ್ಲಿ ಬೇಕೋ ಅಲ್ಲಿ ಪ್ರತಿಭಟನೆ ಮಾಡಲಿ. ಯಾವುದೇ ಅನುಮತಿ ಪಡೆಯದೇ ಕೇಶವಕೃಪಾದ ಮುಂದೆ ಕಿಡಿಗೇಡಿಗಳು ಹೇಗೆ ಪ್ರತಿಭಟನೆ ಮಾಡಿದರು. ಇದಕ್ಕೆ ಯಾರು ಅನುಮತಿ ಕೊಟ್ಟಿದ್ದಾರೆ?. ತಕ್ಷಣ ಪ್ರತಿಭಟನೆ ಮಾಡಿದವರ ಮೇಲೆ ಎಫ್ ಐಆರ್ ದಾಖಲಿಸಬೇಕು. ತಕ್ಷಣ ಆ ವ್ಯಾಪ್ತಿಯಲ್ಲಿರುವ ಅಧಿಕಾರಿಗಳನ್ನು ಅಮಾನತು ಮಾಡಿ. 24 ಗಂಟೆಯಲ್ಲಿ ಎಫ್ ಐಆರ್ ದಾಖಲಿಸದಿದ್ದರೆ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ನಂತರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಆಯಿತು ಅಂದರೆ ಅದಕ್ಕೆ ಪೊಲೀಸ್ ಇಲಾಖೆಯೇ ಹೊಣೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್ ಜಾಗ ನಿಗದಿ ಇದೆ. ಪೊಲೀಸ್ ಇಲಾಖೆ ಸುಮ್ಮನಿದ್ದು, ಸರ್ಕಾರದ ಕುಮ್ಮಕ್ಕಿನಿಂದ ಕೇಶವಕೃಪಾದ ಮುಂದೆ ಪ್ರತಿಭಟನೆ ನಡೆಯುತ್ತದೆ ಅಂತಾದರೆ ನಾಳೆಯಿಂದ ನಾವೂ ಕೂಡಾ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಮಾಡಿದರೆ ಏನಾಗಬಹುದು? ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಸರ್ಕಾರ, ಮಂತ್ರಿ ಮಂಡಲದ ದುರಂಹಕಾರದ ಪರಮಾವಧಿ ಯಾವ ರೀತಿ ಇದೆ ಎಂದರೆ ಇವರೇ ಮುಂದಿನ 50 ವರ್ಷ ಇರುವಂತೆ ಪಿತ್ತ‌ ನೆತ್ತಿಗೇರಿದಂತೆ ವರ್ತಿಸುತ್ತಿದ್ದಾರೆ. ಸಂಘದ ಕೇಂದ್ರೀಕೃತವಾಗಿ ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟರೆ ಕರ್ನಾಟಕದಲ್ಲಿ ಬಹಳ ದೊಡ್ಡ ಅನಾಹುತವನ್ನು ಅವರು ಎದುರಿಸಬೇಕಾಗುತ್ತದೆ. ನಾವು ಅಧಿಕೃತವಾಗಿ ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಗೃಹ ಸಚಿವರೇ ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿರಲು ಬುದ್ದಿ ಹೇಳಿ. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರ ಹೊಣೆಯಾಗಬೇಕಾಗುತ್ತದೆ. ಇಂದಿಗೆ ನಿಲ್ಲಿಸದಿದ್ದರೆ ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ನಿಮ್ಮ ವೈಚಾರಿಕ ಅಪ್ರಬುದ್ಧತೆ ಇದ್ದರೆ ವಿರೋಧ ಮಾಡಿ. ಬೆಂಗಳೂರಿನಲ್ಲಿ ಬೇರೆ ಸಂಘಟನೆಗಳು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಕೇಸ್ ಮಾಡುತ್ತೀರಿ, ಕೇಶವ ಕೃಪಾ ಮುಂದೆ ಪ್ರತಿಭಟನೆಗೆ ಹೇಗೆ ಬಿಟ್ಟರು? ಕಾಂಗ್ರೆಸ್ ಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಇದ್ಯಾ ಹಾಗಾದರೆ? ನಾವು ಪ್ರತಿಭಟನೆ ಮುಖಾಂತರವೇ ಸಂಘಟನೆಯಲ್ಲಿ ಬೆಳೆದವರು. ನಾವು 24 ಗಂಟೆ ಪ್ರತಿಭಟನೆ ಮಾಡಲು ನಮಗೆ ವಿರೋಧ ಇಲ್ಲ. ಮಂತ್ರಿ ಮಂಡಲ ಅವರ ಕಾರ್ಯಕರ್ತರಿಗೆ ನಿಯಂತ್ರಣದಲ್ಲಿರಲು ಹೇಳಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರನ್ನೂ ನಿಯಂತ್ರಣದಲ್ಲಿ ಇಡಲು ಸಾಧ್ಯವಿಲ್ಲ. ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಹಿಂದಿನ ಎಲ್ಲಾ ಸರ್ಕಾರಗಳೂ ಆರ್ ಎಸ್ ಎಸ್ ಕಚೇರಿಗೆ ಭದ್ರತೆ ಕೊಟ್ಟಿದ್ದವು. ಈಗ ಭದ್ರತೆ ವಾಪಸ್ ಪಡೆದಿರುವ ಉದ್ದೇಶ ಏನು? ಸರ್ಕಾರವೇ ಭದ್ರತೆ ವಾಪಸ್ ಪಡೆದು, ಸರ್ಕಾರವೇ ಕಾರ್ಯಕರ್ತರನ್ನು ಕಳಿಸಿ ಪ್ರತಿಭಟನೆ ಮಾಡಿಸಿ ಅನಾಹುತ ಮಾಡಿಸಲು ಸರ್ಕಾರವೇ ಮುಂದಾಗಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಸಂಜೆಯವರೆಗೆ ಕಾಯ್ದು ನಂತರ ರಾಜ್ಯಾಧ್ಯಕ್ಷರ ಅನುಮತಿ ಪಡೆದು ಮುಂದೇನು ಮಾಡಬೇಕು ಅಂತಾ ತೀರ್ಮಾನ ಮಾಡುತ್ತೇವೆ‌ ಎಂದಿದ್ದಾರೆ.