ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಜನ ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಆ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 7 ಜನ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪು ಕಾನೂನಿನ ಮುಂದೆ ಯಾರೂ ಕೂಡ ದೊಡ್ಡವರಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ಎ1 ಆರೋಪಿ ಪವಿತ್ರ ಗೌಡ, ಎ2 ಆರೋಪಿ ದರ್ಶನ್, ಪ್ರದೋಷ್, ಅನುಕುಮಾರ್ , ಜಗದೀಶ್, ಲಕ್ಷ್ಮಣ್, ನಾಗರಾಜ್ ಜಾಮೀನು ರದ್ದಾಗಿದೆ. ಇನ್ನು ತೀರ್ಪು ದೇಶದ ಇತಿಹಾಸದಲ್ಲೇ ಮಹತ್ವದ ತೀರ್ಪಾಗಿದೆ. ಅಲ್ಲದೇ ಈ ತೀರ್ಪಿನ ಪ್ರತಿಯನ್ನು ದೇಶದ ಎಲ್ಲಾ ಕೋರ್ಟ್ ಗಳಿಗೂ ಕಳುಹಿಸಲು ಸುಪ್ರೀಂ ಕೋರ್ಟ್ ತಿಳಿಸಿದೆ.
ಇನ್ನು ದರ್ಶನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ಹೊರ ಹಾಕಿದೆ. ಅಲ್ಲದೇ ಜೈಲಾಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ತಿಳಿಸಿದೆ. ಇನ್ನು ಮುಂದೆ ಜೈಲಿನಲ್ಲಿ ದರ್ಶನ್ ಗೆ ಈ ರೀತಿ ಆತಿಥ್ಯ ನೀಡದಂತೆ ಎಚ್ಚರಿಕೆ ಕೊಟ್ಟಿದೆ. ಅಲ್ಲದೇ ಹೈಕೋರ್ಟ್ ಗೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಡಿ ಗ್ಯಾಂಗ್ ಅಷ್ಟೊಂದು ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದೆ . ಹೀಗಿದ್ದರೂ ಹೇಗೆ ಜಾಮೀನು ನೀಡಿದ್ದೀರಿ ಎಂದು ಪ್ರಶ್ನಿಸಿದೆ. ಮೊನ್ನೆ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ದರ್ಶನ್ ಗೂ ಇದೇ ರೀತಿ ತೀರ್ಪು ಬಂದಿರೋದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ.
ತೀರ್ಪು ಪ್ರಕಟಿಸಿದ ಬೆನ್ನಲ್ಲೇ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ ನಟ ದರ್ಶನ್ ಅವರನ್ನು ಅರ ರಾಜರಾಜೇಶ್ವರಿ ನಗರದ ನಿವಾಸದಿಂದ, ಪವಿತ್ರ ಗೌಡರನ್ನು ಆರ್ ಆರ್ ನಗರದ ನಿವಾಸದಿಂದ ಅರೆಸ್ಟ್ ಮಾಡಿ ಕೋರಮಂಗಲದಲ್ಲಿರುವ ಜಡ್ಜ್ ನಿವಾಸದಲ್ಲಿ ಅವರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸುವ ಸಾಧ್ಯತೆಯಿದೆ,.











