ಮನೆ Latest News ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ: ಬಿ.ವೈ.ವಿಜಯೇಂದ್ರ ಹೇಳಿಕೆ

ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ: ಬಿ.ವೈ.ವಿಜಯೇಂದ್ರ ಹೇಳಿಕೆ

0

ಚಿತ್ರದುರ್ಗ: ಚಿತ್ರದುರ್ಗದ ಪುಣ್ಯಭೂಮಿಯಲ್ಲಿ ಮಾಜಿ ಮುಖ್ಯಮಂತ್ರಿ, ರೈತ ನೇತಾರ, ಛಲದಂಕ ಮಲ್ಲ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವು ಮೇ 9 ರಂದು ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ಪೆಂಡಾಲ್, ಟೆಂಟ್ ನಿರ್ಮಾಣ ಸೇರಿ ಪೂರ್ವತಯಾರಿ ಸಂಬಂಧ ಇಂದು ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಶುಭಸಂದರ್ಭದಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸುತ್ತಿರುವುದಾಗಿ ಹೇಳಿದರು.

ಕರ್ನಾಟಕದಲ್ಲಿ ಹೋರಾಟಕ್ಕೆ ಮತ್ತೊಂದು ಹೆಸರು ಅದು ಬಿ.ಎಸ್.ಯಡಿಯೂರಪ್ಪ. ಛಲಕ್ಕೆ ಮತ್ತೊಂದು ಹೆಸರು ಅದು ಬಿ.ಎಸ್.ಯಡಿಯೂರಪ್ಪ. ಜನಸೇವೆಗೆ ಮತ್ತೊಂದು ಹೆಸರು ಅದು ಬಿ.ಎಸ್.ಯಡಿಯೂರಪ್ಪ. ಕಳೆದ 50 ವರ್ಷಗಳಿಂದ ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟು ರಾಜ್ಯದ ಬಡವರು, ದೀನದಲಿತರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ್ದಾರೆ. ರಾಜ್ಯದ ಬಡವರ ಧ್ವನಿಯಾಗಿ ತನ್ನೆಲ್ಲವನ್ನು ಸಮರ್ಪಿಸಿದ ಏಕೈಕ ನಾಯಕ ಬಿ.ಎಸ್.ಯಡಿಯೂರಪ್ಪ ಎಂದು ವಿಶ್ಲೇಷಿಸಿದರು.

ಯಡಿಯೂರಪ್ಪ ಅವರು ಅಧಿಕಾರಕ್ಕೋಸ್ಕರ ಜೀವನದಲ್ಲಿ ಹೋರಾಟ ಮಾಡಲಿಲ್ಲ. ಪ್ರಾಮಾಣಿಕವಾಗಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದರು. ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡಿದರು. ರಾಜ್ಯದ ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರಕ್ಕೆ ಬರಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ನಾಯಕ ಯಡಿಯೂರಪ್ಪ ಅವರು ಎಂದು ವಿವರಿಸಿದರು.

ಯಾವತ್ತೂ ಅವರು ಜೀವನದಲ್ಲಿ ತನ್ನ ಕುಟುಂಬದ ಬಗ್ಗೆ ಯೋಚನೆ ಮಾಡಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು, ವರ್ಷ ಪೂರ್ತಿ ಪ್ರವಾಸ ಮಾಡಿಕೊಂಡವರು. ಗಣಪತಿ ಹಬ್ಬಕ್ಕೂ ಮನೆಗೆ ಹೋಗಲಿಲ್ಲ. ದೀಪಾವಳಿ ಆಚರಣೆ ಮನೆಯಲ್ಲಿ ಮಾಡಲಿಲ್ಲ ಎಂದು ಹೇಳಿದರು. ಹಬ್ಬ ಹರಿದಿನಗಳಲ್ಲೂ ರಾಜ್ಯವನ್ನು ಸುತ್ತಾಡಿ ಜನರ ಸಂಕಷ್ಟಕ್ಕೆ ಧ್ವನಿಯಾದವರು ಯಡಿಯೂರಪ್ಪನವರು ಎಂದು ತಿಳಿಸಿದರು.

ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ ಎಂಬಂತೆ ಬೆಳೆಸಿದರು.ಆ ಕಾರಣಕ್ಕೋಸ್ಕರ ನಗರಕ್ಕೆ ಸೀಮಿತವಾದ ಪಕ್ಷ ಎನಿಸಿಕೊಂಡಿದ್ದ ಬಿಜೆಪಿ, ಮುಂದುವರೆದ ಸಮಾಜಗಳಿಗೆ ಸೀಮಿತವಾದ ಪಕ್ಷ ಎನಿಸಿಕೊಂಡಿದ್ದ ಪಕ್ಷವನ್ನು ಬಡವರ, ರೈತರ, ಕೃಷಿ ಕಾರ್ಮಿಕರ, ಶೋಷಿತ ವರ್ಗಗಳ ಧ್ವನಿಯಾಗಿ ಹೋರಾಟ ಮಾಡುವ ಮುಖೇನ ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ ಎಂದು ಇಡೀ ದೇಶಕ್ಕೆ ಸಾರುವ ಕೆಲಸವನ್ನು ಸನ್ಮಾನ್ಯ ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು.

ಅಂಥ ಹೋರಾಟಗಾರರ ಸೇವೆಯನ್ನು ಸ್ಮರಿಸಬೇಕು. ಅಂಥ ಒಬ್ಬ ಛಲಗಾರ ಯಡಿಯೂರಪ್ಪನವರು ಎಂದು ವಿಶ್ಲೇಷಣೆ ಮಾಡಿದರು. ಜೀವನದ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ರಾಜಕೀಯ ಏಳುಬೀಳುಗಳ ನಡುವೆಯೂ ಬೆನ್ನು ತೋರಿಸದೇ, ಓಡಿ ಹೋಗದೇ, ಈ ಗಂಡುಮೆಟ್ಟಿನ ನೆಲದಲ್ಲಿ ಗಟ್ಟಿಯಾಗಿ ರಾಜಕಾರಣ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

9ರಂದು ಊಟದ ವ್ಯವಸ್ಥೆ, ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಇದೆ. ಬಿಸಿಲು ತಾಪ ಇರುವ ಕಾರಣ ಶಾಮಿಯಾನ ಹಾಕಿ ಟೆಂಟ್ ನಿರ್ಮಾಣ ಮಾಡಲಾಗುತ್ತದೆ. 1.5 ಲಕ್ಷ ಜನರು ಕುಳಿತು ಊಟ ಮಾಡುವ ಊಟದ ಸಭಾಂಗಣವನ್ನೂ ನಿರ್ಮಿಸಲಾಗುತ್ತದೆ ಎಂದು ವಿವರ ನೀಡಿದರು. ಉರಿ ಬಿಸಿಲನ್ನು ಲೆಕ್ಕಿಸದೇ ನಮ್ಮ ಯಡಿಯೂರಪ್ಪನವರ ಈ ಸಂಭ್ರಮೋತ್ಸವದಲ್ಲಿ ನಾವೆಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದರಾದ ಗೋವಿಂದ ಕಾರಜೋಳ ಅವರು ಮಾತನಾಡಿ, ಅಭಿಮಾನೋತ್ಸವ ಕಾರ್ಯಕ್ರಮವನ್ನು ಅಭೂತಪೂರ್ವ ಹಾಗೂ ಐತಿಹಾಸಿಕವಾಗಿ ಆಯೋಜಿಸಲಾಗುತ್ತದೆ. ಇದನ್ನು ಯಶಸ್ವಿಗೊಳಿಸಲು ಎಲ್ಲ ಹಿರಿಯರು ಒಮ್ಮತದ ನಿರ್ಧಾರ ಮಾಡಿದ್ದೇವೆ. ಮೇ 9ರಂದು ಆಗಮಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು. ಯಡಿಯೂರಪ್ಪ ಅವರು ನಾಡಿನ ಜನರ ಪರವಾಗಿ ಏಕಾಂಗಿ ಹೋರಾಟ ಮಾಡಿದವರು. ರೈತರ, ದೀನದಲಿತರ, ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

50 ವರ್ಷಗಳ ಕಾಲದ ರಾಜಕೀಯ ಜೀವನದಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದವರು. ಅವರು ನಾಡಿನ ಅಭಿವೃದ್ಧಿಗೆ, ಪಕ್ಷದ ಬೆಳವಣಿಗೆ ನೀಡಿದ ಕೊಡುಗೆ ಪರಿಗಣಿಸಿ ಅಭಿಮಾನೋತ್ಸವ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ. ರಾಜ್ಯದ 29 ಸಾವಿರ ಹಳ್ಳಿಗಳಿಂದ ಎಲ್ಲ ವರ್ಗದ ಜನರೂ ಭಾಗವಹಿಸಲಿದ್ದಾರೆ ಎಂದರು

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಲಕ್ಷಾಂತರ ಜನರು ಅಭಿಮಾನೋತ್ಸವಕ್ಕೆ ಬರಲಿದ್ದಾರೆ. ಆಗಮಿಸುವವರಿಗೆ ಊಟೋಪಚಾರ ಸೇರಿ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಒಳ್ಳೆಯ ಕಾರ್ಯಕ್ರಮಕ್ಕೆ ಬಂದೆವು ಎಂದುಕೊಳ್ಳುವಂತಿರಬೇಕು. ಯಡಿಯೂರಪ್ಪ ಅವರ ಸಾಧನೆಗಳು ಜನರಿಗೆ ತಿಳಿಯಬೇಕು ಎಂದರು.

ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಓಬವ್ವನ ನಾಡಿನಲ್ಲಿ, ಮದಕರಿ ನಾಯಕರ ಬೀಡಿನಲ್ಲಿ ಬಿಎಸ್‍ವೈ ಅಭಿಮಾನೋತ್ಸವ ನಡೆಯುತ್ತಿದೆ. ಬಿಜೆಪಿಗೆ ಬಿಎಸ್‍ವೈ ಅವರು ದೈವಸಂಕಲ್ಪದ ಕೊಡುಗೆ. ಅವರ ನಾಯಕತ್ವದಲ್ಲಿ ಅನೇಕ ಜನರು ಬೆಳೆದಿದ್ದಾರೆ. ಅಧಿಕಾರ ಅನುಭವಿಸಿದ್ದಾರೆ, ನಾಯಕತ್ವ ಕೊಟ್ಟಿದ್ದಾರೆ. ಬಿಜೆಪಿಗೆ ಶಕ್ತಿ ನೀಡಿದ ಯಡಿಯೂರಪ್ಪ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.

ಈಗಾಗಲೇ ಎಲ್ಲಾ ಸಿದ್ಧತೆಗಳು ಆರಂಭವಾಗಿವೆ. ಎಲ್ಲಾ ಮುಖಂಡರು ಬಹಳ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಅಭಿಮಾನೋತ್ಸವವು ಬಿಜೆಪಿ ಅಧಿಕಾರ ಹಿಡಿಯುವವರೆಗೆ ಸಾಗಬೇಕು. ಒಗ್ಗಟ್ಟಿನಿಂದ, ಒಮ್ಮತದಿಂದ ನಾವೆಲ್ಲ ಕೆಲಸ ಮಾಡೋಣ ಎಂದರು.

ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಬಿಎಸ್‍ವೈ ಅವರ ಅಭಿಮಾನೋತ್ಸವಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನರು ಬರಲಿದ್ದಾರೆ. ಯಡಿಯೂರಪ್ಪ ಅವರಿಗೆ ಜನರು ಅಭಿಮಾನದ ಮಹಾಪೂರ ಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಯಡಿಯೂರಪ್ಪ ಅವರು ಐವತ್ತು ವರ್ಷಗಳ ಕಾಲ ಸಮಾಜಸೇವೆ ಮಾಡಿದವರು. ಪಕ್ಷ ಸಂಘಟನೆಗೆ ದುಡಿದವರು. ಇದಕ್ಕೆಲ್ಲ ಅವರು ಪಟ್ಟ ಕಷ್ಟ ಸಾಕಷ್ಟು. ರಾಜ್ಯದಲ್ಲಿ ಬಿಜೆಪಿಯನ್ನು ಚಿರಪರಿಚಿತ ಮಾಡಿದವರು. ಬಿಎಸ್‍ವೈ ಅವರು ಸಾಕಷ್ಟು ಹೋರಾಟದಲ್ಲಿ ಭಾಗವಹಿಸಿದವರು. ಕಾರ್ಯಕರ್ತರಿಗೆ ಶಕ್ತಿ ತುಂಬಿದವರು ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ಅಭಿಮಾನೋತ್ಸವವು ಐತಿಹಾಸಿಕ ಕಾರ್ಯಕ್ರಮವಾಗಬೇಕು. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಜನರು ಆಗಮಿಸಬೇಕು. ಬಿಎಸ್‍ವೈ ಇಡೀ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪಕ್ಷ ಮತ್ತು ಸರ್ಕಾರದಲ್ಲಿ ಹಲವು ಹುದ್ದೆ ನಿರ್ವಹಿಸಿದವರು. ನಾವೆಲ್ಲ ಈ ಅಭಿಮಾನೋತ್ಸವದ ಯಶಸ್ಸಿಗೆ ದುಡಿಯೋಣ ಎಂದರು.

ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಪಕ್ಷದ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.