ಬೆಂಗಳೂರು : ರಸ್ತೆ ಬದಿ ಶೆಡ್ ನಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಪಾಪಿಗಳ ಕೊಯ್ದು ವಿಕೃತಿ ಮೆರೆದಿರುವ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ. ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ರಕ್ಕಸರು ಕೊಯ್ದಿದ್ದಾರೆ. ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಘಟನಾ ಸ್ಥಳದಲ್ಲಿ ಆಗಮಿಸಿದ್ದರು. ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದ್ದು, ಕಾಟನ್ ಪೇಟೆ ಠಾಣೆ ಪೊಲೀಸ್ ಸಿಬ್ಬಂದಿ, ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಭೇಟಿ ಕೊಟ್ಟಿದ್ದಾರೆ.
ಘಟನೆಯನ್ನು ಶಾಸಕ ಡಾ. ಅಶ್ವಥ್ ನಾರಾಯಣ ಖಂಡಿಸಿದ್ದಾರೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳು ಇರ್ತಾರೆ. ಈ ಕೃತ್ಯ ಮಾಡಿದಂತಹ ವ್ಯಕ್ತಿಗೆ ಒಳ್ಳೆಯದಾಗಲ್ಲ.ಸಮಾಜಕ್ಕೂ ಒಳ್ಳೆಯದಲ್ಲ. ಇದನ್ನು ಖಂಡಿಸುತ್ತೇವೆ, ಇದು ಕ್ರೂರತನ. ಹಾಲು ಕೊಡುವ ಕಾಮಧೇನು ಹಸು. ಗೋಮಾಂಸ ನಿರ್ಬಂಧ ಮಾಡಬೇಕು.ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಸಿ ಟಿ ರವಿಗೆ ಬೆದರಿಕೆ ಪತ್ರ ಬಂದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಬೆದರಿಕೆ ಪತ್ರ ಬರೆದ ವ್ಯಕ್ತಿಯನ್ನು ಸರ್ಕಾರ ಮೊದಲು ಬಂಧಿಸಬೇಕು. ಸರ್ಕಾರ ಬದುಕಿದ್ರೆ ಆ ವ್ಯಕ್ತಿ ಬಂಧಿಸಲಿ. ಸರ್ಕಾರ ಸಿಟಿ ರವಿ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಮಾಡಿರುವ ತಪ್ಪೇ ಸರಿ ಅಂತಿರೋ ಈ ಸರ್ಕಾರ ರಾಜ್ಯದಲ್ಲಿ ಇರೋದು ದುರಂತ.ಪತ್ರ ಬರೆದ ಈಡಿಯಟ್ ನ ತಕ್ಷಣ ಬಂಧಿಸಲಿ. ಅವನು ಯಾರ ಅಭಿಮಾನಿಯೇ ಆಗಿರಲಿ, ಮೊದಲು ಬಂಧಿಸಲಿ ಎಂದು ಒತ್ತಾಯಿಸಿದ್ದಾರೆ.
ಡಿಕೆಶಿ ಟೆಂಪಲ್ ರನ್‌ಗೆ ಬಗ್ಗೆ ಮಾತನಾಡಿದ ಅಶ್ವತ್ಥ್ ನಾರಾಯಣ್ ಜನರ ಪೂಜೆಯನ್ನು ಮಾಡಿ, ದೇವರ ಪೂಜೆಯನ್ನೂ ಮಾಡಿ. ಜನರೇ ಭಗವಂತ. ಸಿದ್ದರಾಮಯ್ಯ ಸಹ ದೇವಸ್ಥಾನಗಳಿಗೆ ಭೇಟಿ ಕೊಡ್ತಿದ್ದಾರೆ. ಪರಮೇಶ್ವರ್, ಡಿಕೆಶಿ ಸಹ ದೇವಸ್ಥಾನಕ್ಕೆ ಭೇಟಿ ಕೊಡ್ತಿದ್ದಾರೆ. ಒಂದು ಕಡೆ ಸನಾತನ ಧರ್ಮ ವಿರೋಧಿಸ್ತಾರೆ, ನಾಡಿನ ಸಂಸ್ಕೃತಿ ವಿರೋಧಿಸ್ತಾರೆ.ಆದ್ರೆ ಇವರ ಸ್ವಾರ್ಥಕ್ಕೆ ಕಾಂಗ್ರೆಸ್ ನಾಯಕರಿಗೆ ದೇವರು ನೆನಪಾಗ್ತಾರೆ. ಜನ ಅಧಿಕಾರ ಕೊಟ್ರು, ಆ ಜನರ ರಕ್ತ ಹೀರ್ತಿದ್ದಾರೆ. ಇವರಿಗೆ ಭಗವಂತ ಕ್ಷಮಿಸಲ್ಲ, ಆಶೀರ್ವದಿಸಲ್ಲ. ಲೋಕ ಕಲ್ಯಾಣ ಮಾಡಿ ಅಂದ್ರೆ ರಾಜಕಾರಣ ಮಾಡ್ತಾರೆ ಎಂದಿದ್ದಾರೆ.











