ಬೆಂಗಳೂರು: ಕಾಂಗ್ರೆಸ್ ಮಾಡಿದ ಪಾಪದ ಕೆಲಸ, ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರದಿಂದ ಸಾಧನಾ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರ ಮೂರು ವರ್ಷ ಪೂರ್ಣ ಮಾಡುತ್ತಿದೆ. ಕಾಂಗ್ರೆಸ್ ಮಾಡಿದ ಪಾಪದ ಕೆಲಸ, ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸಂಬಳ ಕೊಡಲು ದುಡ್ಡು ಇಲ್ಲ. ದೀನ ದಲಿತರು, ಭಿಕ್ಷುಕರು, ಪಿಂಚಣಿ ಪಡೆಯುವರು ಸರ್ಕಾರದ ಸಹಾಯ ಧನದ ಮೇಲೆ ಅವಲಂಬಿತರಾಗಿರುತ್ತಾರೆ. ಸರ್ಕಾರ ಮೂರು ವರ್ಷಗಳಿಂದ ಮೋಸ ಮಾಡುತ್ತಿದೆ. ಅನ್ನಭಾಗ್ಯದಲ್ಲಿ 700 ಕೋಟಿ ರೂ. ವಂಚನೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ, ಅನಾಥರ ಮಕ್ಕಳಿಗೆ 73 ಕೋಟಿ ರೂ. ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ಸಮೀಕ್ಷೆ ಹೆಸರಲ್ಲಿ ಇನ್ನೂ ಮೋಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 12 ಪಿಂಚಣಿ ಕಳೆದ ಮೂರು ತಿಂಗಳಿಂದ ಕೊಟ್ಟಿಲ್ಲ. ಸುಮಾರು 81 ಲಕ್ಷ ಜನರಿಗೆ ಪಿಂಚಣಿ ಕೊಟ್ಟಿಲ್ಲ. ಸರ್ಕಾರದ ದಿವಾಳಿತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಬದುಕಿರುವವರನ್ನು ಸಾಯಿಸುವ ಪರಿಸ್ಥಿತಿ ತಂದೊಡ್ಡಿದ್ದಾರೆ. ಪಿಂಚಣಿ ಕೊಡಲೂ ಯೋಗ್ಯತೆ ಇಲ್ಲದಿರುವ ಸರ್ಕಾರ ಇದು ಎಂದ ಅವರು ನೀವು ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡುತ್ತಿದ್ದೀರಿ?. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಸೇರಿ ಸಚಿವರನ್ನು ಸಮಾವೇಶಕ್ಕೆ ಕರೆಯುತ್ತಿದ್ದಾರೆ. ಸಿದ್ಧರಾಮಯ್ಯ ನುಡಿದಂತೆ ನಡೆದ ಸರ್ಕಾರ ಅಂತಿಯಲ್ಲಪ್ಪಾ.ಸಿದ್ದರಾಮಯ್ಯ ನಿನ್ನ ಪ್ರಣಾಳಿಕೆ ಪ್ರಕಾರ ಕೊಟ್ಟಿದ್ದೀಯಾ? ಅಂಗನವಾಡಿ ಕಾರ್ಯಕರ್ತೆಯರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಸಾರಿಗೆ ನೌಕರರಿಗೆ ಕೊಟ್ಟ ಮಾತನ್ನೂ ತಪ್ಪಿದ್ದೀರಿ. ಸಾರಿಗೆ ನೌಕರರು ಕೂಡಾ ಪ್ರತಿಭಟನೆ ಮಾಡುತ್ತಿದ್ದಾರೆ.ಇವರ ಜೊತೆಗೆ ಒಂದು ಕೋಟಿ ಜನರಿಗೆ ಮೋಸ ಮಾಡಿದ್ದೀರಿ. ಸಾಧನ ಸಮಾವೇಶ ಮಾಡುವ ಮುಂಚೆ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ಕೊಡಿ.ಸಾರಿಗೆ ನೌಕರರ ಬೇಡಿಕೆಗಳನ್ನು ಬಗೆಹರಿಸಿ.ಒಂದು ಕೋಟಿ ಜನರಿಗೆ ಪಿಂಚಣಿ ಹಣವನ್ನು ಕೊಡಿ. ಜನ ದಾರಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡುವ ಸಂದರ್ಭ ಬಂದಿದೆ. ಔಟ್ ಗೋಯಿಂಗ್ ಸರ್ಕಾರ, ಖಜಾನೆ ಖಾಲಿ ಖಾಲಿ. ಲೂಟಿ ಕಮಿಷನ್ ಗೆ ಬ್ರೇಕ್ ಇಲ್ಲ, ಆದರೆ ಪಿಂಚಣಿದಾರರಿಗೆ ಮಾತ್ರ ಬ್ರೇಕ್ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಭರಪೂರ ಭರವಸೆ ನೀಡಿದ್ದರು. ಸಚಿವರು 15 ದಿನಕೊಮ್ಮೆ ಜನ ಸ್ಪಂದನೆ ಮಾಡಬೇಕು ಅಂತ ಹೇಳಿದ್ದರು. ಆದರೆ ಸಚಿವರು 15 ದಿನಕೊಮ್ಮೆ ಕಮಿಷನ್ ಕಲೆಕ್ಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಜನ ಸ್ಪಂದನಾ ಕಾರ್ಯಕ್ರಮ ಮಾಡುತ್ತಿಲ್ಲ. ಸಿಎಂ ಬೆಂಗಳೂರು ಪ್ರದಕ್ಷಿಣೆ ಅಂದರು, ಆದರೆ ಕಮಿಷನ್ ಪ್ರದಕ್ಷಿಣೆ ಮಾಡುತ್ತಿದ್ದಾರೆ . ಇ-ಖಾತೆ ಸತ್ತು ಹೋಗಿ ಆ ಖಾತೆ ಆಗಿದೆ. ಇ ಖಾತೆ, ಓ ಖಾತೆ , ಆ ಖಾತೆ ಎಲ್ಲಾ ಹೋಗಿದೆ. ಡಿ.ಕೆ. ಶಿವಕುಮಾರ್ ಪೊಲೀಸ್ ರೀತಿಯಲ್ಲಿ ಕೊನೆಯಲ್ಲಿ ಬರುತ್ತಾರೆ. ಇ-ಖಾತಾ ಕಾನೂನಾತ್ಮಕವಾದ ವ್ಯವಸ್ಥೆ ಇಲ್ಲ. ಸರ್ಕಾರ ಪಾಪರ್ ಆಗಿದೆ, ಡಿಸ್ಕೌಂಟ್ ಕೊಡುತ್ತೇನೆ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ದೀಪ ಇಲ್ಲದೇ ನಾಲ್ಕೈದು ಲಕ್ಷ ಮನೆಗಳು ಇವೆ. ಕ್ಯಾಂಡಲ್ ಇಟ್ಟುಕೊಂಡು ದಿನ ಕಳೆಯುತ್ತಿದ್ದಾರೆ ಎಂದಿದ್ದಾರೆ.
ಪೆಟ್ರೋಲ್, ಡೀಸೆಲ್ ಏರಿಕೆ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಇದು ಅಚ್ಚೇ ದಿನ್ ಅಲ್ಲ ಅಂತ ಹೇಳುತ್ತಿದ್ದಾರೆ. ಮೋದಿ ಸರ್ಕಾರ ಕಳೆದ 49 ತಿಂಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿಲ್ಲ. ಮಧ್ಯ ಪ್ರಾಚ್ಯ ಯುದ್ಧ ನಡೆಯುತ್ತಿರುವುದರಿಂದ ದರ ಏರಿಕೆ ಆಗಿದೆ. ಭಾರತದಲ್ಲಿ ಮಾತ್ರವೇ ದರ ಏರಿಕೆ ಆಗಿಲ್ಲ. ಬೇರೆ ದೇಶದಲ್ಲೂ ದರ ಏರಿಕೆ ಆಗಿದೆ. ಮಲೇಷ್ಯಾದಲ್ಲಿ 71%, ಪಾಕಿಸ್ತಾನದಲ್ಲಿ 44%, ಯುಎಇ ಯಲ್ಲಿ 88%_ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ನ್ಯೂಜಿಲೆಂಡ್ ನಲ್ಲಿ 88 % ದರ ಏರಿಕೆ ಆಗಿದೆ. ಭಾರತದಲ್ಲಿ 3.4% ಅಷ್ಟೇ ದರ ಏರಿಕೆ ಆಗಿದೆ. ಹೀಗಿದ್ದರೂ ಮೋದಿಯವರನ್ನು ತೇಜೋವಧೆ ಮಾಡುತ್ತಾರೆ. ಮೋದಿಯವರನ್ನು 56 ಇಂಚಿನ ಎದೆ ಅಂತ ಹೇಳುತ್ತಾರೆ. ಹಾಗಾದರೆ ಸಿದ್ಧರಾಮಯ್ಯ ಅವರದ್ದು 95 ಇಂಚಿನ ಎದೆನಾ?. ಸಿದ್ದರಾಮಯ್ಯ ಅವರದ್ದು ಹೊಟ್ಟೆಯೂ ಸೇರಿಸಿ 95 ಇಂಚಿನ ಎದೆನಾ?. ಬಸ್ ದರ, ನೀರಿನ ದರ, ಸೈಟ್ ಗೈಡೆನ್ಸ್ ವಾಲ್ಯೂ ಏರಿಕೆ ಮಾಡಿದ್ದಾರೆ. ಮೋದಿಗೆ ಹೇಳುವವರು ನೀವು ಯಾಕೆ ಇಲ್ಲಿ ದರ ಏರಿಕೆ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ.











