ಮನೆ Latest News ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಲೆಗೆ ಮೊಟ್ಟೆ ಎಸೆದ ಕಿಡಿಗೇಡಿಗಳು

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಲೆಗೆ ಮೊಟ್ಟೆ ಎಸೆದ ಕಿಡಿಗೇಡಿಗಳು

0

 

ಬೆಂಗಳೂರು; ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಲೆಗೆ ಮೊಟ್ಟೆ ಎಸೆತ ಘಟನೆ ನಡೆದಿದೆ. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮಿದೇವಿ ನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುನಿರತ್ನ ಅವರು ತೆರಳುತ್ತಿದ್ದಾಗ ಕಿಡಿಗೇಡಿಗಳು ನಂದಿನಿ ಲೇ ಔಟ್ ಬಳಿ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮುನಿರತ್ನ ಬೆಂಬಲಿಗರಿಂದಲೂ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಮುನಿರತ್ನ ಬೆಂಬಲಿಗರು ಕಾರು ಜಖಂಗೊಳಿಸಿದ್ದಾರೆ ಎನ್ನಲಾಗಿದೆ.

ಘಟನೆ ನಡೆಯುತ್ತಿದ್ದಂತೆ ತಕ್ಷಣ ಕಾರಿನಲ್ಲಿ ಸ್ಥಳದಿಂದ ಮುನಿರತ್ನ ತೆರಳಿದ್ದಾರೆ. ನಂತರ ರಾಜ್ ಕುಮಾರ್ ಸಮಾಧಿ ಬಳಿ ಪ್ರತಿಭಟನೆ ಶಾಸಕ ಮುನಿರತ್ನ ನಡೆಸಿದ್ದಾರೆ.  ಮುನಿರತ್ನ ತೆರಳಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುನಿರತ್ನ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ನಾವು ಮೊಟ್ಟೆ ಹೊಡೆದಿಲ್ಲ, ಮುನಿರತ್ನ ಬೆಂಬಲಿಗರೇ ಬಂದು ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಬಂದ ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರತಿಭಟನೆ, ಗಲಾಟೆ ನಡೆಸಿದವರನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ವಿಶ್ವ ಮೂರ್ತಿ ಮೇಲೆ ರೌಡಿಶೀಟರ್ ಗಳಾದ ಧಮ್ ಕುಮಾರ-ವಸಂತ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ ಇದು ಡಿಸಿಎಂ ಡಿಕೆ ಶಿವಕುಮಾರ್​, ಡಿಕೆ ಸುರೇಶ್​, ಹನುಮಂತರಾಯಪ್ಪ, ಕುಸುಮಾ ಅವರ ಕೈವಾಡ ಎಂದಿದ್ದಾರೆ. ನನ್ನ ಶರ್ಟ್​ ಹರಿದು ಹಾಕಿದರೆ 20 ಲಕ್ಷ ರೂ., ಮಸಿ ಬಳಿದರೆ 10 ಲಕ್ಷ ರೂ. ಹೀಗೆ ಒಂದೊಂದು ರೀತಿ ರೇಟ್​ ಫಿಕ್ಸ್ ಮಾಡಿದ್ದಾರೆ ಎಂದು ಮುನಿರತ್ನ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು  ಅಧಿಕಾರ ಇದೆ ಅಂತ ಒಬ್ಬ ಜನಪ್ರತಿನಿಧಿಯನ್ನು ಅವಮಾನಿಸಬಾರದು. ಇದು ಕೇವಲ ಮುನಿರತ್ನ ಅವರಿಗೆ ಮಾಡಿದ ಅವಮಾನ ಅಲ್ಲ. ಇದು ಇಡೀ ಕ್ಷೇತ್ರದ ಜನಕ್ಕೆ ಮಾಡಿದ ಅವಮಾನ.ಇದನ್ನು ಯಾರೂ ಕೂಡಾ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಮುನಿರತ್ನ ಅವರ ಮೇಲೆ ಆರೋಪಗಳಿರಬಹುದು. ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗಬಾರದಾ?. ಅವರ ಮೇಲೆ ಈ ರೀತಿಯ ಮೊಟ್ಟೆ ಎಸೆತ ಆಗಿದೆ. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಆಗಬಾರದು. ಯಾರೂ ಕೂಡಾ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದರು.