ಬೆಳಗಾವಿ: ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಬಳಿಕ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ಮುಂದುವರೆಸಿದ್ರು. ಈ ವೇಳೆ ಮಾತನಾಡಿದ ಅವರು ಅನ್ವರ್ ಮಾಣಿಪ್ಪಾಡಿ ಪ್ರಧಾನಿಗೆ ಪತ್ರ ಬರೆದು, ವಕ್ಫ್ ನಲ್ಲಿ 2.3 ಲಕ್ಷ ಕೋಟಿ ಅಕ್ರಮ ಆಗಿದೆ, ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ, ಇದನ್ನು ಮುಚ್ಚಿ ಹಾಕಲು ಅಂದಿನ ಸಿಎಂ ಯಡಿಯೂರಪ್ಪ ಅವರ ಮಗ ವಿಜಯೇಂದ್ರರನ್ನು ಕಳಿಸಿ ನನಗೆ ಕೋಟ್ಯಾಂತರ ರೂ. ಆಫರ್ ಮಾಡಿದ್ದರು ಅಂತ ಹೇಳಿದ್ದಾರೆ. ವಕ್ಫ್ ಅಕ್ರಮ ಮುಚ್ಚಿ ಹಾಕಲು ಯಡಿಯೂರಪ್ಪ ತಮ್ಮ ಮಗನನ್ನು ಕಳಿಸಿದ್ದರು ಅಂತಾ ಮಾಣಿಪ್ಪಾಡಿ ಆರೋಪ ಮಾಡುತ್ತಾರೆ.
ಅಲ್ಲದೇ ನನ್ನ ಮನೆಗೆ ವಿಜಯೇಂದ್ರ ಗನ್ ಮ್ಯಾನ್ ಜತೆ ಬಂದು ವಕ್ಫ್ ಅಕ್ರಮ ಬಗ್ಗೆ ಮಾತಾಡದೇ ಕೈಬಿಟ್ಟರೆ 150 ಕೋಟಿ ರೂ. ಆಫರ್ ಮಾಡಿದ್ದರು, ವಕ್ಫ್ ವಿಚಾರ ಕೈಬಿಡಲು ಇಷ್ಟೊಂದು ಹಣ ಆಫರ್ ಮಾಡಿದ್ದರು ಅಂತ ಮಾಣಿಪ್ಪಾಡಿ ಹೇಳಿದ್ದಾರೆ.ಇದರ ವಿರುದ್ಧ ಬಿಜೆಪಿಯ ಯಾವ ಸಿಎಂ ಸಹ ಕ್ರಮ ಕೈಗೊಳ್ಳಲಿಲ್ಲ ಯಾಕೆ? ಈಗಿನ ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಹಿತಾಸಕ್ತಿ ಕಾಪಾಡಲು ಮಾಣಿಪ್ಪಾಡಿಗೆ ಹಣದ ಆಮಿಷ ಕೊಟ್ಟರು? ಎಂದು ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಗರಂ ಆದ ವಿಪಕ್ಷ ನಾಯಕ ಆರ್ ಅಶೋಕ್ ಹಿಂದೂಗಳ ಆಸ್ತಿಗಳನ್ನೇ ಹೊಡೆಯುತ್ತಿರುವುದು ನೀವು. ಅದಕ್ಕಾಗಿಯೇ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿರುಗೇಟು ಕೊಟ್ಟಿದ್ದಾರೆ. ಅಶೋಕ್ ಮಾತಿಗೆ ಸದನದಲ್ಲಿ ತೀವ್ರ ಗದ್ದಲ ಉಂಟಾಗಿದೆ.ಬಳಿಕ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್ ಬಿಜೆಪಿಯಿಂದ ಎರಡು ತಂಡಗಳಲ್ಲಿ ವಕ್ಪ್ ಪ್ರವಾಸ ಮಾಡಿದ್ದಾರೆ. ಒಂದು ಒರಿಜಿನಲ್ ಬಿಜೆಪಿ ಇನ್ನೊಂದು ರೆಬೆಲ್ ಬಿಜೆಪಿ. ರೆಬೆಲ್ ಬಿಜೆಪಿ ಎಂಬ ಶಾಸಕ ರಿಜ್ವಾನ್ ಮಾತಿಗೆ ಬಿಜೆಪಿ ಶಾಸಕರು ತೀವ್ರ ವಿರೋಧ ಹೊರ ಹಾಕಿದ್ದಾರೆ. ರಿಜ್ವಾನ್ ಅರ್ಷದ್ ತಪ್ಪು ಮಾಹಿತಿ ಕೊಡುತ್ತಿದ್ದಾರೆ ನಮಗೆ ಮಾತಾಡಲು ಅವಕಾಶ ಕೊಡಿ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಏರು ಧ್ವನಿಯಲ್ಲಿಯೇ ಒತ್ತಾಯ ಮಾಡಿದ್ದಾರೆ. ನಿಮ್ಮ ವಿಪ್ ಮೂಲಕ ಹೆಸರು ಕೊಡಿ, ಹಾಗೆಯೇ ಮಾತಾಡಲು ಬರುವುದಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.ಆದರೂ ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ ಚನ್ನಬಸಪ್ಪ. ನೀವು ಶಿವಮೊಗ್ಗದಲ್ಲಿ ಭಾಷಣ ಮಾಡಿದಂತೆ ಅಲ್ಲ ಇದು ಎಂದು ಸ್ಪೀಕರ್ ಖಾದರ್ ಇದೇ ವೇಳೆ ದಬಾಯಿಸಿದ್ದಾರೆ. ಕೊನೆಗೆ ಚನ್ನಬಸಪ್ಪ ಬಳಿ ಹೋಗಿ ಕೂರಿಸಿದ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮತ್ತು ಶಾಸಕ ಡಾ. ಅಶ್ವಥ್ ನಾರಾಯಣ ಸಮಾಧಾನ ಮಾಡಿದ್ದಾರೆ.











