ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ವನ್ನ ನೀಡುವಂತೆ ವಿಪಕ್ಷ ನಾಯಕ ಆರ್ ಅಶೋಕ್ ಮನವಿ ಮಾಡಿದ್ದಾರೆ.ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಶೋಕ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವ್ರು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು. ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ. ಶಾಸಕ, ಸಚಿವ, ಸ್ಪೀಕರ್, ಮಾಜಿ ಡಿಸಿಎಂ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ.
ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಶ್ರೀ ಎಸ್.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ಎಕ್ಸ್ ಪೋಸ್ಟ್ ಮೂಲಕ ವಿಪಕ್ಷ ನಾಯಕ ಆರ್ ಅಶೋಕ್ ಮನವಿ ಮಾಡಿದ್ದಾರೆ.
ಎಸ್.ಎಂ. ಕೃಷ್ಣ ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ ; ಸದನದಲ್ಲಿ ಸಂತಾಪ ಸೂಚನಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು; ಮಾಜಿ ಮುಖ್ಯಮಂತ್ರಿ ಎಸ್.ಎಸ್. ಕೃಷ್ಣ ಅವರ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನಾ ಕಲಾಪ ನಡೆಯಿತು. ಸಂತಾಪ ಸೂಚನಾ ಕಲಾಪ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಎಸ್.ಎಂ.ಕೃಷ್ಣ ಅವರು ಮುತ್ಸದ್ದಿ, ದೂರದೃಷ್ಟಿ ಉಳ್ಳವರಾಗಿದ್ದರು. ದೀರ್ಘ ಕಾಲ ರಾಜಕಾರಣ ಮಾಡಿದ್ದರು. ನಾನು ವಿದ್ಯಾರ್ಥಿ ಆಗಿದ್ದಾಗ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಬಳಿಕ ನಾನು ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ. ಎಸ್.ಎಂ. ಕೃಷ್ಣ 1962 ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು ಎಂದರು.
ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಸೇರಿದ್ದು . ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದ್ದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು ಎಂದು ಆ ದಿನಗಳನ್ನು ನೆನಪಿಸಿಕೊಂಡ್ರು.
ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು.ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ .ಅವರ ಕಾಲದಲ್ಲೇ ಡಾ. ರಾಜ್ ಕುಮಾರ್ ಅವರ ಅಪಹರಣ ಆಗಿ ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಆ ಸನ್ನಿವೇಶವನ್ನು ಅವರು ನಿಭಾಯಿಸಿದ್ದರು. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಿಂಗಾಪುರದಂತೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಕೃಷ್ಣ ಅವರ ಕೊಡುಗೆ ಅಪಾರ. ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿ ಬಿಜೆಪಿ ಸೇರಿ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದರು. ಕೃಷ್ಣ ಅವರು ದಕ್ಷ ಆಡಳಿತಗಾರ, ಸಜ್ಜನ-ಮುತ್ಸದ್ದಿ ರಾಜಕಾರಣಿ ಆಗಿದ್ದರು ಎಂದರು,
ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ ವಿಧಾನಸೌಧದ ಆವರಣದಲ್ಲಿ ಎಸ್.ಎಂ. ಕೃಷ್ಣ ಅವರ ಪುತ್ಥಳಿ ಆಗಬೇಕು. ಆಲಮಟ್ಟಿ ಕೃಷ್ಣಾ ನೀರಾವರಿ ಯೋಜನೆ ಪ್ರದೇಶದಲ್ಲಿ ವಿಶೇಷ ಸ್ಮಾರಕ ಆಗಬೇಕು ಎಂದರು.











