ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ- 2024 ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಅಂಗವಿಕಲರ ಹಕ್ಕುಗಳ ಅಧಿನಿಯಮ ರಾಜ್ಯ ನಿಯಮಾವಳಿ ಕನ್ನಡ ಅವತರಣಿಕೆ ಪುಸ್ತಕ ಮತ್ತು ಬ್ರೈಲ್ ಕ್ಯಾಲೆಂಡರ್- 2025 ಅನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇಂದು ಇಡೀ ವಿಶ್ವದಲ್ಲಿ ವಿಕಲಚೇತನರ, ಹಿರಿಯ ನಾಗರಿಕ ದಿನ ಆಚರಿಸಲಾಗುತ್ತಿದೆ. ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ರಾಜ್ಯದ ವಿಕಲಚೇತನರಿಗೆ ವಿಶ್ವ ವಿಕಲಚೇತನರ ದಿನದ ಶುಭಾಶಯಗಳು.ನಮ್ಮಲ್ಲಿ ಅಂದಾಜು 15 ಲಕ್ಷ ವಿಕಲಚೇತನರು ಇರಬಹುದು. 2011ನೇ ಜನಗಣತಿ ಪ್ರಕಾರ 13 ಲಕ್ಷಕ್ಕೂ ಹೆಚ್ಚು ವಿಕಲಚೇತನರಿದ್ದರು.ಇವರೆಲ್ಲರ ಆರೈಕೆ ಮಾಡುವುದು, ವಿಶೇಷ ಸವಲತ್ತು ಒದಗಿಸುವುದು ಯಾವುದೇ ಸರ್ಕಾರದ ಕರ್ತವ್ಯ. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ, ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸುವ ಉದ್ಯೋಗ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ. ವಿಕಲಚೇತನರಾದ ಕೂಡಲೇ ಸಮಾಜಕ್ಕೆ ಹೊರೆಯಲ್ಲ, ಅವರೆಲ್ಲ ಸಮಾಜದ ಆಸ್ತಿಗಳು. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ, ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಒಲಂಪಿಕ್ ಕ್ರೀಡೆಯಲ್ಲಿ ಹೆಚ್ಚು ಪದಕಬರದಿದ್ದರೂ ಪ್ಯಾರಾ ಒಲಂಪಿಕ್ ನಲ್ಲಿ ಹೆಚ್ಚು ಪದಕ ಪಡೆದಿದ್ದೇವೆ.ಅಂಗವಿಕಲ ಅಂದರೆ ಅಶಕ್ತರು, ಶಕ್ತಿ ಇಲ್ಲ ಅಂದರೆ ದೊಡ್ಡ ತಪ್ಪಾಗುತ್ತದೆ. ವಿಕಲಚೇತನರ ದಿನಾಚರಣೆ ಅಂಗವಾಗಿ ಸಮಗ್ರ ಮತ್ತು ಸುಸ್ತಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ ಎಂಬ ಘೋಷ ವಾಖ್ಯದೊಡನೆ ಈ ವಿಶ್ವದಿನಾಚರಣೆ ಆಚರಿಸುತ್ತಿದ್ದೇವೆ. ವಿಕಲಚೇತನ ಆರೈಕೆದಿನವನ್ನೂ ಆಚರಣೆ ಮಾಡುತ್ತಿದ್ದೇವೆ. 4 ವಿಕಲಚೇತನ ಆರೈಕೆದಾರರಿಗೆ ತಿಂಗಳಿಗೆ 1 ಸಾವಿರ ಕೊಡುವ ತೀರ್ಮಾನ ಮಾಡಿದ್ದೇವೆ. ಇದು ಇಡೀ ದೇಶದಲ್ಲೇ ಕರ್ನಾಟಕ ಮೊದಲ ರಾಜ್ಯ . ನೀವು ಸಮಾಜಕ್ಕೆ ಭಾರವಲ್ಲ, ಯಾವುದೇ ಹುದ್ದೆ ಅನರ್ಹರು ಅಲ್ಲ. ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು ಸಮಿತಿ ಮಾಡಿದ್ದೇವೆ ಎಂದರು.ವಿಕಲಚೇತನ ವಾಹನ ಕೊಡಿ ಅಂತ ಹೇಳಿದ್ದೇನೆ. ನಮ್ಮ ಸರ್ಕಾರ ವಿಕಲಚೇತನ ಸಹಾಯ, ಸಹಕಾರ, ಆರೈಕೆಯನ್ನ ಕಡಿಮೆ ಮಾಡೊಲ್ಲ.ಸಮಾಜದಲ್ಲಿ ಇವರು ಶಕ್ತಿಹೀನರಲ್ಲ, ಶಕ್ತಿವಂತರು ಎಂದರು.
ಇನ್ನು 1 ಗಂಟೆ ಕಾಲ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಮೇಷ್ಟ್ರಾದ್ರು. ಶಿಕ್ಷಕರಾಗಿ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ರು.’ಸಂವಿಧಾನ ಓದು’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಿಎಂ ಬಹುಮಾನ ವಿತರಣೆ ಮಾಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಸಿಎಂ ಪಾಠ ಮಾಡಿದರು. ಮುಖ್ಯಮಂತ್ರಿಗಳ ಪಾಠವನ್ನು ತದೇಕಚಿತ್ತದಿಂದ ವಿದ್ಯಾರ್ಥಿಗಳು ಆಲಿಸಿದ್ರು. ಹಲವಾರು ಪ್ರಶ್ನೆಗಳ ಮೂಲಕ ಸಂವಿಧಾನದ ಬಗ್ಗೆ ಇನ್ನಷ್ಟು ವಿದ್ಯಾರ್ಥಿಗಳು ತಿಳಿದುಕೊಂಡ್ರು.
ಸಂವಿಧಾನದ ಕುರಿತು ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ರು. ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿದೆ .ಎನ್ನುವವರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಮತ್ತು ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸಿ ಪಾಠ ಮುಂದುವರೆಸಿದರು .ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ಹೋದರೆ, ಎಷ್ಟೇ ಒಳ್ಳೆ ಸಂವಿಧಾನ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ ಎಂದರು.
ಸಂವಿಧಾನದ ಪೀಠಿಕೆಯಲ್ಲೇ ಇಡೀ ಸಂವಿಧಾನದ ಸಾರಾಂಶ ಇದೆ.ಜಾತ್ಯತೀತತೆ, ಸಾಮಾಜಿಕ ನ್ಯಾಯ ಎರಡೂ ಮೂಲ ಸಂವಿಧನದಲ್ಲಿ ಇರಲಿಲ್ಲ, ಬಳಿಕ ಸೇರ್ಪಡೆಯಾಯಿತು . ಇದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂಕೋರ್ಟ್ ಗೆ ಹೋಗಿದ್ದರು.ಆದರೆ ಸುಪ್ರೀಂಕೋರ್ಟ್ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು ಎಂದರು.ಭಾರತ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾಗಿ ನಡೆಸಿಕೊಳ್ಳುವುದು ನಮ್ಮ ದೇಶದ ಗುಣ ಇದೇ ಸಂವಿಧಾನದ ಮೌಲ್ಯ.ಭಾರತದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ. ವಿದ್ಯೆ ಮತ್ತು ಸಂಪತ್ತು ಗಳಿಸುವ ಅವಕಾಶ ಶೂದ್ರರಿಗೆ ಮತ್ತು ಮಹಿಳೆಯರಿಗೆ ಇರಲಿಲ್ಲ,ಹೀಗಾಗಿ ಅಸಮಾನತೆ ಸೃಷ್ಟಿಯಾಯಿತು.ಅಪ್ಪ ಅಮ್ಮ ವಿದ್ಯಾವಂತರಾದರೆ ಮಾತ್ರ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುತ್ತಾರೆ ಎನ್ನುತ್ತಾ ತಾವು ವಿದ್ಯಾಭ್ಯಾಸದಿಂದ ವಂಚಿತರಾಗಿ ಬಳಿಕ ವಿದ್ಯೆ ಕಲಿತು ವಕೀಲರಾದ ಪ್ರಸಂಗವನ್ನು ವಿವರಿಸಿದರು.











