ಬೆಂಗಳೂರು: ಉಪಚುನಾವಣಾ ಫಲಿತಾಂಶದಿಂದ ನಮ್ಮ ಮೇಲೆ, ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ಉಪಚುನಾವಣಾ ಫಲಿತಾಂಶದಿಂದ ನಮ್ಮ ಮೇಲೆ, ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗ 18 ಉಪಚುನಾವಣೆ ಗೆದ್ದಿದ್ದೆವು. ನಂತರ ಸಾರ್ವತ್ರಿಕ ಚುನಾವಣೆ ಸೋತೆವು. ಈ ಫಲಿತಾಂಶ ಕಾಂಗ್ರೆಸ್ ಅಕ್ರಮಗಳಿಗೆ ಕ್ಲೀನ್ ಚಿಟ್ ಅಲ್ಲ. ಅದೇ ಬೇರೆ ಇದೇ ಬೇರೆ. ಬೈಎಲೆಕ್ಷನ್ ಲೋಕಲ್ ವಿಚಾರಗಳ ಮೇಲೆ ನಡೆದಿದೆ. ಇದು ರಾಜ್ಯದ ತೀರ್ಪಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ ಎಂದಿದ್ದಾರೆ.
ಇನ್ನು ಮುಸ್ಲಿಂ ಮತಗಳು ಬರದೇ ಸೋಲಾಯ್ತು ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು ನಿಖಿಲ್ ಸತ್ಯವನ್ನೇ ಹೇಳಿದ್ದಾರೆ. ಬೂತ್ ಗಳಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಂ ಮತಗಳು ಜೆಡಿಎಸ್ ಗೆ ಬಂದಿದೆ. ಆ ಸಮುದಾಯ ನಿಖಿಲ್ ಸೋಲಿಸಲು ಮತ ಹಾಕಿಲ್ಲ. ಉಳಿದ ಸಮುದಾಯಗಳೂ ಒಟ್ಟಾಗಿ ಆಗಲಿಲ್ಲ.ಮಹಾರಾಷ್ಟ್ರದಲ್ಲಿ ಆದಂತೆ ಒಟ್ಟಾಗಿ ಆಗಲಿಲ್ಲ. ಇಲ್ಲಿ ಮುಸ್ಲಿಂ ಸಮುದಾಯ ಒಟ್ಟಾಯ್ತು, ಉಳಿದ ಸಮುದಾಯ ಒಟ್ಟಾಗಲಿಲ್ಲ.ಮುಸ್ಲಿಂ ಸಮುದಾಯದ ತರಹ ಉಳಿದ ಸಮುದಾಯಗಳೂ ನಿಖಿಲ್ ಪರ ಒಟ್ಟಾಗಿ ನಿಲ್ಲಬೇಕಿತ್ತು ಎಂದಿದ್ದಾರೆ.
ಜನ ಡಿ.ಕೆ. ಶಿವಕುಮಾರ್ ಗೆ ಒಕ್ಕಲಿಗ ನಾಯಕತ್ವ ಕೊಟ್ಟಿದ್ದಾರೆ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು ಹಣ, ಅಧಿಕಾರ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ. ನಮ್ಮ ಪಕ್ಷದಿಂದ ಅಭ್ಯರ್ಥಿ ತೆಗೆದುಕೊಂಡು ಹೋಗಿ ಒಕ್ಕಲಿಗ ನಾಯಕತ್ವ ಬಂದಿದೆ ಅಂದ್ರೆ ಏನರ್ಥ?. ಡಿ.ಕೆ. ಶಿವಕುಮಾರ್ ಗೆ ಒಕ್ಕಲಿಗ ನಾಯಕತ್ವ ಸಿಕ್ಕಿದ್ದಿದ್ದರೆ ಲೋಕಸಭೆಯಲ್ಲಿ ಯಾಕೆ ಸೋತರು?. ತಮ್ಮ ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಡಿ.ಕೆ. ಶಿವಕುಮಾರ್ ಗೆ. ಬೆಂಗಳೂರು ಗ್ರಾಮಾಂತರ ಒಕ್ಕಲಿಗ ಬೆಲ್ಟ್ ಆಗಿದ್ದರೂ ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಡಿ.ಕೆ. ಶಿವಕುಮಾರ್ ಯಾವಾಗಲೂ ಒಕ್ಕಲಿಗ ನಾಯಕ ಆಗಿಯೇ ಇಲ್ಲ, ಮುಂದೆಯೂ ಆಗಲ್ಲ. ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕ ಅಂದ್ರೆಯ ಯಾರೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರ; ನಾನು ಲೀಡರ್ ಅಲ್ಲ, ನಾನು ಯಾವತ್ತು ಲೀಡರ್ ಅಂದಿದ್ದೇನೆ ಎಂದ ಡಿಕೆಶಿ
ಬೆಂಗಳೂರು; ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾನು ಲೀಡರ್ ಅಲ್ಲ, ನಾನು ಯಾವತ್ತು ಲೀಡರ್ ಅಂದಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಹೌದು ತಮ್ಮನನ್ನು ನಾನು ಗೆಲ್ಲಿಸಲು ಆಗಿಲ್ಲ. ಆದರೆ ಅಶೋಕಣ್ಣ ಕನಕಪುರಕ್ಕೆ ಬಂದು ಎಷ್ಟು ವೋಟ್ ತೆಗೆದುಕೊಂಡರು?. ಕುಸ್ತಿ ಮಾಡ್ತೀನಿ, ಡಿಚ್ಚಿ ಹೊಡೆಯುತ್ತೇನೆ ಎಂದು ಬಂದು ಎಷ್ಟು ವೋಟ್ ಬಂತಯ್ಯ ನಿನಗೆ?. ತನ್ನ ತಮ್ಮ ಸೋತಿದ್ದು ನಿಜ, ಆದರೆ ಅದರ ಕೊಂಡಿಗಳು ಕಳೆದುಕೊಳ್ಳುತ್ತಿದೆಯಲ್ವಾ? .ರಾಜರಾಜೇಶ್ವರನಗರ, ಚನ್ನಪಟ್ಟಣದಲ್ಲಿ ಏನಾಯ್ತು? ಎಂದಿದ್ದಾರೆ.
ಜೆಡಿಎಸ್ ಇಬ್ಬಾಗದ ಕುರಿತು ಸಿ.ಪಿ. ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಜಿಟಿ ದೇವೇಗೌಡ ಹಿರಿಯ ನಾಯಕ. ಅವರು ಆ ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾವು ಈ ಹಿಂದೆ ಆಫರ್ ಮಾಡಿದ್ದೆವು . ಆದರೆ ದಳದಲ್ಲಿ ಇರುತ್ತೇವೆ ಎಂದಿದ್ದರು. ಆದರೆ ಇವಾಗ ಅವರಿಗೆ ಅಸಮಾಧಾನ ಆಗಿದೆ. ಆದರೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದಿದ್ದಾರೆ.











