ತುಮಕೂರು; ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ಹಿನ್ನಲೆ ಕೇಂದ್ರ ಸಚಿವ ವಿ. ಸೋಮಣ್ಣ ಬೆಂಗಾವಲು ಕಡಿತಗೊಳಿಸಿದ್ದಾರೆ. ಕೇವಲ ಸ್ಥಳೀಯ ಎಸ್ಕಾರ್ಟ್ ನಲ್ಲಿ ವಿ. ಸೋಮಣ್ಣ ತುಮಕೂರಿಗೆ ಆಗಮಿಸಿದ್ದಾರೆ. ತುಮಕೂರಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುತ್ತಿರುವ ದಿಶಾ ಸಭೆಗೆ ಆರ್ ಪಿಎಫ್ ಸೇರಿದಂತೆ ಭದ್ರತಾ ವಾಹನಗಳಿಲ್ಲದೇ ಸೋಮಣ್ಣ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮಿತವ್ಯಯವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಎಲ್ಲ ಮಂತ್ರಿಗಳೂ ಸಹ ಅದನ್ನು ಅನ್ವಯ ಮಾಡಿಕೊಂಡಿದ್ದೇವೆ. ಅದನ್ನು ವಿರೋಧ ಮಾಡುವವರು ವಿರೋಧ ಮಾಡುತ್ತಾರೆ. ಆದರೇ ಇದೊಂದು ಉಪಯುಕ್ತ ಸಲಹೆ. ಕಟ್ಟು ನಿಟ್ಟಾಗಿ ಪ್ರಧಾನಿ ಸಲಹೆಯನ್ನು ಜಾರಿ ಮಾಡಬೇಕು ಎನ್ನೋದು ಎಲ್ಲಾ ವಲಯದಲ್ಲೂ ನಡೆಯುತ್ತಿದೆ. ಇದರಿಂದ ಎಷ್ಟು ಉಳಿಯುತ್ತದೆ ಅನ್ನೊದಕ್ಕಿಂತ ಒಂದು ಸಂದೇಶ ರವಾನೆ ಆಗಬೇಕು. ದೇಶದ ಅಭಿವೃದ್ಧಿಗೆ ನಾವೆಲ್ಲಾ ಒಂದು ಸಂಕೇತವಾಗಿ ಕೆಲಸ ಮಾಡಬೇಕು. ನಾನು ಬೆಂಗಳೂರಿನಿಂದ ಕೇವಲ ನನ್ನ ಒಂದೇ ಕಾರಿನಲ್ಲಿ ಬಂದೆ. ಆರ್ ಪಿಎಫ್ ಮತ್ತೊಂದು ಮಗದೊಂದು ಎಲ್ಲವನ್ನು ನಿನ್ನೆಯೇ ಎಲ್ಲವನ್ನು ವಾಪಾಸ್ ಮಾಡಿದ್ದೇನೆ. ಸ್ಥಳೀಯವಾಗಿ ರಾಜ್ಯ ಸರ್ಕಾರ ಏನು ಕೊಡುತ್ತದೋ ಅದನ್ನು ಉಪಯೋಗಿಸಿಕೊಂಡಿದ್ದೇನೆ. ಪ್ರಧಾನ ಮಂತ್ರಿಗಳೇ ಈಗ ಅದನ್ನು ಅನ್ವಯ ಮಾಡಿಕೊಂಡಾಗ ನಾವು ಅವರಿಗಿಂತ ದೊಡ್ಡವರಲ್ಲ. ಪೆಟ್ರೋಲ್, ಡಿಸೆಲ್ ರೇಟ್ ಕೂಡ ಜಾಸ್ತಿ ಆಗ್ತಾಯಿದೆ. ಜಾಸ್ತಿ ಆಗೋದು ಅನಿವಾರ್ಯ ಕೂಡ. ನಾವು ಕೂಡ ಯಾವರೀತಿ ನಡೆದುಕೊಳ್ಳಬೇಕೆಂಬ ಮಾರ್ಗದರ್ಶನ ಇದೆ. ಕೋವಿಡ್ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದೇವೋ ಹಾಗೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಕಾಂಗ್ರೇಸ್ ಸರ್ಕಾರದ ಮೂರು ವರ್ಷದ ಸಾಧನ ಸಮಾವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ನಾವು ಕೂಡ ನಮ್ಮ ಸರ್ಕಾರ ಇದ್ದಾಗ ಸಾಧನಾ ಸಮಾವೇಶ ಮಾಡಿದ್ದೀವಿ. ನಾನು ಕೂಡ ಎರಡು ಮೂರು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದೆ. ಸಾಧನ ಸಮಾವೇಶಕ್ಕೂ ಮುಂದಿನ ಚುನಾವಣೆಗೂ ಸಂಬಂಧವಿಲ್ಲ. ಕಾಂಗ್ರೇಸ್ ಸರ್ಕಾರದ ಸಾಧನ ಸಮಾವೇಶ ನಡೆಯುತ್ತದೆ. ಆದರೇ ಒಬ್ಬೊಬ್ಬರದೊಂದು ದಿಕ್ಕಿರುತ್ತದೆ. ಆ ಎಲ್ಲಾ ದಿಕ್ಕುಗಳಿಗೂ ಉದಾಹರಣೆ ಐದು ವರ್ಷಕ್ಕೊಮ್ಮೆ ನಡೆಯೋ ಚುನಾವಣೆ ಎಂದಿದ್ದಾರೆ.











