ಬೆಂಗಳೂರು; ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಸೋಲಿನ ಕಾರಣ ತಿದ್ದಿಕೊಂಡು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೇ 10 ರಂದು ಚುನಾವಣಾ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಗಳೂರಿನ ಜನತೆ ಪರವಾಗಿ ಅಭಿನಂದನೆ ಮಾಡುತ್ತೇವೆ. ಬೆಂಗಳೂರಿನ ಜನರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಯಶಸ್ವಿ ಆಗಲು ಸಭೆ ನಡೆಸಿದ್ದೇವೆ. ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯದ ಕೇಂದ್ರ ಸಚಿವರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಬೆಂಗಳೂರಿನ ಹತ್ತು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಎರಡು ಉಪಚುನಾವಣೆಯಲ್ಲಿ ಸೋಲು ದೇಶ ಸುದ್ದಿ ಮಾಡುವ ವಿಚಾರ ಅಲ್ಲ. ಆಡಳಿತ ಪಕ್ಷ ಯಾವುದು ಇರುತ್ತದೋ ಅದೇ ಪಕ್ಷ ಗೆಲ್ಲುತ್ತದೆ. ಪಶ್ಚಿಮ ಬಂಗಾಳ ಗೆಲುವು ದೊಡ್ಡ ಜಯ. ಕರ್ನಾಟಕದಲ್ಲಿ ಎಷ್ಟು ಇನ್ನು ಉಪಚುನಾವಣೆ ನಡೆಯುತ್ತದೋ ಗೊತ್ತಿಲ್ಲ. ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಸೋಲಿನ ಕಾರಣ ತಿದ್ದಿಕೊಂಡು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ. ಮಮತಾ ಬ್ಯಾನರ್ಜಿ ಮಾನ, ಮರ್ಯಾದೆ ಎಲ್ಲಾ ಬಿಟ್ಟಿರುವ ಕಾರಣ ರಾಜೀನಾಮೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಆ ತಾಯಿಗೆ ಕಾನೂನು, ಕಟ್ಟಳೆ ಏನೂ ಗೊತ್ತಿಲ್ಲ. ಇನ್ನು ಮುಂದೆ ಫೆವಿಕಾಲ್ ಬ್ರಾಂಡ್ ಅಂಬಾಸಿಡರ್ ಯಾರು ಅಂದರೆ ಮಮತಾ ಬ್ಯಾನರ್ಜಿ. ವಜಾ ಮಾಡಿದರೆ ಅನುಕಂಪ ಪಡೆಯಬಹುದು ಎಂಬ ಲೆಕ್ಕಾಚಾರ ಅವರದ್ದು. ಮಮತಾ ಬ್ಯಾನರ್ಜಿ ಗೆದ್ದೂ ಇಲ್ಲ, ನಾಟಕ ಅಷ್ಟೇ. ಅಧಿಕಾರದ ದುರಾಸೆ, ಮದ ಅವರಿಗೆ. 15 ವರ್ಷ ಮುಖ್ಯಮಂತ್ರಿ ಆಗಿದ್ದರೂ ಕಾಮನ್ ಸೆನ್ಸ್ ಇಲ್ಲ. ಅಂದು ಬುದ್ದದೇವ ಭಟ್ಟಾಚಾರ್ಯ ಹೀಗೆ ಮಾಡಿರುತ್ತಿದ್ದರೆ ಇವರ ಕಥೆ ಏನಾಗಿರುತ್ತಿತ್ತು. 30 ವರ್ಷ ಎಡಪಕ್ಷಗಳು ಹಾಕಿಕೊಂಡಿದ್ದ ಫೆವಿಕಾಲ್ ಅನ್ನೇ ಜನ ಕಿತ್ತು ಹಾಕಿದ್ದಾರೆ. ಇನ್ನು ಈ ಫೆವಿಕಾಲ್ ಅನ್ನು ಬಿಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.











