ಮನೆ Latest News ಫಲಿತಾಂಶ ಘೋಷಣೆಗೆ ಒಂದು ದಿನ ತಡ ಮಾಡಿದ್ದೇಕೆ? ಈ ಕುರಿತು ಸಿಬಿಐ ತನಿಖೆ ನಡೆಯಬೇಕಿದೆ: ಪ್ರತಿಪಕ್ಷ...

ಫಲಿತಾಂಶ ಘೋಷಣೆಗೆ ಒಂದು ದಿನ ತಡ ಮಾಡಿದ್ದೇಕೆ? ಈ ಕುರಿತು ಸಿಬಿಐ ತನಿಖೆ ನಡೆಯಬೇಕಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

0

ಬೆಂಗಳೂರು; ಡಿ.ಎನ್‌.ಜೀವರಾಜ್‌ ಅವರ ಶಾಸಕ ಸ್ಥಾನದ ಫಲಿತಾಂಶ ಬಂದ ನಂತರವೂ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಲು ಒಂದು ದಿನ ತಡ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ತಿಳಿಯಲು ಸಿಬಿಐ ತನಿಖೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಬಳಿಕ ಶಾಸಕರಾಗಿ ಆಯ್ಕೆಯಾದ ಡಿ.ಎನ್.ಜೀವರಾಜ್ ಅವರಿಗೆ ಸ್ಪೀಕರ್‌ ಯು.ಟಿ.ಖಾದರ್ ವಿಧಾನಸೌಧದಲ್ಲಿ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಅಶೋಕ, ಶೃಂಗೇರಿ ಶಾಸಕರಾದ ಡಿ.ಎನ್‌.ಜೀವರಾಜ್‌ ಅಧಿಕೃತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ನಾಯಕರು ವೋಟ್‌ ಚೋರಿ ಬಗ್ಗೆ ಮಾತಾಡುತ್ತಾರೆ. ಶೃಂಗೇರಿಯಲ್ಲಿ ಕೊನೆಯಲ್ಲಿ ಅಂಚೆ ಮತಗಳನ್ನು ಎಣಿಸಲಾಗಿದೆ. ಇಲ್ಲಿ ಚುನಾವಣಾಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಒತ್ತಡ ಹಾಕಿದವರು ಯಾರು ಎಂಬುದು ಸಿಬಿಐ ತನಿಖೆಯಿಂದ ಬಯಲಾಗಬೇಕಿದೆ. ಮರು ಎಣಿಕೆಯಲ್ಲಿ ಫಲಿತಾಂಶ ಗೊತ್ತಾದ ಕೂಡಲೇ ಚುನಾವಣಾ ಆಯೋಗದಿಂದ ಪ್ರಮಾಣಪತ್ರ ನೀಡಬೇಕೆಂದು ಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ. ಆದರೂ ಒಂದು ದಿನ ತಡವಾಗಿ ಪ್ರಮಾಣಪತ್ರ ನೀಡಲಾಗಿದೆ. ಇಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ಗೊತ್ತಾಗಬೇಕಿದೆ ಎಂದರು.

 

ಕಳೆದ ಮೂರು ವರ್ಷದಲ್ಲಿ ಎರಡು ಕ್ಷೇತ್ರಗಳಲ್ಲಿ ವೋಟ್‌ ಚೋರಿ ಆಗಿರುವುದು ತಿಳಿದುಬಂದಿದೆ. ಅದನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್‌ ಆರೋಪಗಳನ್ನು ಮಾಡುತ್ತಿದೆ. ಸ್ಟ್ರಾಂಗ್‌ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮರಾ ಇದ್ದು, ಅಲ್ಲಿ ಪೊಲೀಸರು ಕೂಡ ಇರುತ್ತಾರೆ. ಅವರ ಕಣ್ಣು ತಪ್ಪಿಸಿ ತಿದ್ದುಪಡಿ ಮಾಡಲು ಬಿಜೆಪಿಗೆ ಸಾಧ್ಯವಿಲ್ಲ. ಈ ರೀತಿ ಆರೋಪ ಮಾಡುವುದು ಕಾಂಗ್ರೆಸ್‌ನ ಹೇಡಿತನದ ಪರಮಾವಧಿ. ಜೀವರಾಜ್‌ ಅವರು ಪ್ರಕರಣದ ದಾಖಲಿಸಿ ವರ್ಷ ಕಳೆದಿದೆ. ಕೋರ್ಟ್‌ ನೀಡುವ ಆದೇಶವನ್ನು ನಾವು ಒಪ್ಪುತ್ತೇವೆಯೇ ಹೊರತು ವಿರೋಧ ಮಾಡುವುದಿಲ್ಲ ಎಂದರು.

ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಸೋತ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಉಪಚುನಾವಣೆ ಗೆದ್ದಿದ್ದೆವು. ಈ ಎರಡು ಕ್ಷೇತ್ರಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. 2028 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಯ ಆಧಾರದಲ್ಲಿ ಗೆದ್ದಿದೆ. ಆದರೆ ಜನರಿಗೆ ಈಗ ಗ್ಯಾರಂಟಿಯ ವಾಸ್ತವ ಗೊತ್ತಾಗಿದೆ. ನಾವು ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎಂದರು.

ನಾನು ಗ್ಯಾರಂಟಿಗಳ ವಿರೋಧಿಯಲ್ಲ. ಇನ್ನೂ 25 ಗ್ಯಾರಂಟಿಗಳನ್ನು ಕೊಟ್ಟರೂ ನಾನು ವಿರೋಧಿಸುವುದಿಲ್ಲ. ಆದರೆ ಅವೈಜ್ಞಾನಿಕ ಗ್ಯಾರಂಟಿಗಳನ್ನು ನಾನು ವಿರೋಧಿಸುತ್ತೇನೆ. ತಮಿಳುನಾಡಲ್ಲಿ ನಟ ವಿಜಯ್‌ ಚಿನ್ನ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಈ ರೀತಿ ಮಾಡಿದರೆ ಅದು ಅವೈಜ್ಞಾನಿಕವಾಗುತ್ತದೆ. ಅಲ್ಲಿ ಡಿಎಂಕೆಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌ ನಂತರ ಉಲ್ಟಾ ಹೊಡೆದಿದೆ. ಬಿಜೆಪಿ ಎಂದಿಗೂ ವಿಜಯ್‌ ಅವರಿಗೆ ಬೆಂಬಲ ನೀಡಿಲ್ಲ. ಅವರ ಸಿದ್ಧಾಂತ ಮತ್ತು ಬಿಜೆಪಿಯ ಸಿದ್ಧಾಂತಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದರು.

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಮೇ 10 ರಂದು ಬೆಂಗಳೂರಿಗೆ ಬರಲಿದ್ದು, ಎಚ್‌ಎಎಲ್‌ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ಎಲ್ಲ ಕಾರ್ಯಕರ್ತರ ಜೊತೆಗೆ ಅಭಿನಂದನೆ ಸಲ್ಲಿಸಲಿದ್ದೇವೆ. ಸುಮಾರು 15 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಅರ್ಧ ಗಂಟೆ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.