ಬೆಂಗಳೂರು: ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷ ಒಂದು ಸಲ ಘೋಷಣೆ ಮಾಡಿದ ಮೇಲೆ ಆ ತೀರ್ಮಾನ ನಾವು ಒಪ್ಪಿಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರದ ಬಗ್ಗೆ ಮಾತನಾಡಿದ ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಒಂದು ಸಲ ಘೋಷಣೆ ಮಾಡಿದ ಮೇಲೆ ಆ ತೀರ್ಮಾನ ನಾವು ಒಪ್ಪಿಕೊಳ್ಳಬೇಕು. ಅಭ್ಯರ್ಥಿ ಘೋಷಣೆಗೂ ಮೊದಲೇ ನಾವು ಬಿ.ಜಿ. ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂದಿದ್ದೆವು. ಅವರು ಯುವಕ, ಮಾಜಿ ಮೇಯರ್, 2023 ರಲ್ಲಿ ಟಿಕೆಟ್ ಕೊಟ್ಟಿದ್ದರು, ಸೋಲಾಗಿತ್ತು. ಅಜಯ್ ಕುಮಾರ್ ನಮ್ಮವರು, ಲಿಂಗಾಯತರು ಅಂತ ನಾವು ಟಿಕೆಟ್ ಕೇಳಿರಲಿಲ್ಲ. ಸೋತಿರುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಅಂತಾ ಕೇಳಿದ್ದೆವು. ಕೋರ್ ಕಮಿಟಿಯಲ್ಲೂ ಬೇಡಿಕೆ ಇಟ್ಟಿದ್ದೆವು. ದೆಹಲಿಗೆ ಹೋಗಿ ರಾಧಾಮೋಹನ ದಾಸ್ ಅಗರವಾಲ್, ಜೋಷಿ, ಬೊಮ್ಮಾಯಿ, ಶೆಟ್ಟರ್ ಗೆ ಮನವಿ ಸಲ್ಲಿಸಿದ್ದೆವು. ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂತ ನಾವು ಕೇಳಿದ್ದು ಸತ್ಯ. ಮಾನವೀಯತೆ ಆಧಾರದಲ್ಲಿ ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂದಿದ್ದೆವು. ಹೈಕಮಾಂಡ್ ಈಗ ಶ್ರೀನಿವಾಸ್ ದಾಸ್ ಕರಿಯಪ್ಪ ಗೆ ಟಿಕೆಟ್ ಕೊಟ್ಟಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ನಾವು ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ತೋಳ್ಬಲ, ಹಣಬಲ ಪ್ರಯೋಗ ಮಾಡುತ್ತದೆ. ಆದರೂ ನಾವು ಎರಡೂ ಕಡೆಯೂ ಗೆಲ್ಲುತ್ತೇವೆ. ಮುಂದೆ 2028 ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಅಜಯ್ ಕುಮಾರ್ ನಮ್ಮ ಹುಡುಗ. ಅಜಯ್ ಕುಮಾರ್ ಇದರಿಂದ ಬೇಸರವಾಗಿಲ್ಲ. ಟಿಕೆಟ್ ಘೋಷಣೆ ಬಳಿಕ ನಮಗೇ ಅಜಯ್ ಕುಮಾರ್ ಧೈರ್ಯ ಹೇಳಿದರು. ಶ್ರೀನಿವಾಸ ದಾಸ್ ಕರಿಯಪ್ಪ ಕೂಡಾ ನಮ್ಮ ಹುಡುಗ. ನಮ್ಮಲ್ಲಿ ಬಣ ಮುಖ್ಯ ಅಲ್ಲ. ಇಲ್ಲಿ ಬಿಜೆಪಿಯ ಕಮಲದ ಚಿಹ್ನೆ ಮುಖ್ಯ. ನಮಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಕಹಿ ಕೊಟ್ಟರೂ ರಸ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗೆ ಇದೆ. ಕ್ಷೇತ್ರದಲ್ಲಿ ಎಂಟು ಜನ ಆಕಾಂಕ್ಷಿಗಳಿದ್ದಾರೆ, ಎಲ್ಲರೂ ಕೆಲಸ ಮಾಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.









