ಬೆಂಗಳೂರು; ಬಿಜೆಪಿ ರಾಜ್ಯ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು.ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ಬೆಂಗಳೂರಿನ ಬಿಜೆಪಿ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಂತರಿಕ ಭದ್ರತೆ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ತೆಗೆದುಕೊಂಡ ನಿರ್ಧಾರದಿಂದ ನಾವೆಲ್ಲಾ ಇಂದು ನಿರ್ಭೀತರಾಗಿದ್ದೇವೆ.ಆದರೆ ನಮಗೆ ಬಾಹ್ಯ ಶಕ್ತಿಗಳಿಂದಲೇ ಹೆಚ್ಚು ಆತಂಕ ಇದೆ.ನಾವು ಯಾರಿಗೆ ಸ್ವತಂತ್ರ ರಾಷ್ಟ್ರ ಆಗಲು ಸಹಾಯ ಮಾಡಿದೆವೋ ಅವರೇ ನಮ್ಮ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ದೇಶದ ಜನ ಪ್ರಧಾನಮಂತ್ರಿಗಳ ಜೊತೆ ಹೆಜ್ಜೆ ಹಾಕಬೇಕು ಎಂದರು.
ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ಹಣ ಲೂಟಿ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿ ಇಲ್ಲಿ ಹಣ ಸಂಗ್ರಹಿಸಿ ಬೇರೆ ಬೇರೆ ಕಳುಹಿಸುವುದು ನೋಡಿದ್ದೇವೆ. ಕರ್ನಾಟಕದಿಂದ ಹಣ ಸಂಗ್ರಹಿಸಿ ಬೇರೆ ರಾಜ್ಯಗಳಿಗೆ ಕಳುಹಿಸಿರುವುದನ್ನು ನೋಡಿದ್ದೇವೆ. ಬಹುಶಃ ಇದು ಆ ಸಮಯದಲ್ಲಿ ಸಂಗ್ರಹಿಸಿದ್ದು ಈಗ ಹೀಗೆ ಆಯಿತೋ ಏನೋ ಗೊತ್ತಿಲ್ಲ ಎಂದ ಅವರು ಶಿಡ್ಲಘಟ್ಟ ರಾಜೀವ್ ಗೌಡ ಬಂಧನ ಆಗದಿರುವ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಗೂಂಡಾಗಿರಿಯನ್ನು ಪ್ರಚೋದಿಸುವುದನ್ನು ನೋಡಿದ್ದೇವೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಮೇಲೆಯೇ ಹಲ್ಲೆ ಮಾಡುವ ರೀತಿ ವರ್ತನೆ ಮಾಡಿದವರು ಅವರ ಶಿಷ್ಯಂದಿರನ್ನು ರಸ್ತೆಯಲ್ಲಿ ಬೆಳೆಸಿಯೇ ಬೆಳೆಸುತ್ತಾರೆ. ಇಂತಹ ಸರ್ಕಾರಗಳು ಆದಷ್ಟು ಬೇಗ ಹೋಗಬೇಕು ಎಂದು ಆಗ್ರಹಿಸಿದ್ದಾರೆ.











