ತುಮಕೂರಿನಲ್ಲಿ ಮಹಾತ್ಮಾ ಗಾಂಧಿ ಕ್ರೀಡಾಂಗಣ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಸಂಸದ ಡಾ. ಪರಮೇಶ್ವರ್ ಹೆಸರು ನಾಮಕರಣ ಮಾಡೋದು ಅಕ್ಷಮ್ಯ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಡಾ. ಪರಮೇಶ್ವರ್ ಹೆಸರು ನಾಮಕರಣ ಅಕ್ಷಮ್ಯ.ನಮ್ಮ ಅವಧಿಯಲ್ಲಿ ಕ್ರೀಡಾಂಗಣ ಕಾಮಗಾರಿ ಪೂರ್ಣ ಮಾಡಿ ನಾನೇ ಉದ್ಘಾಟಿಸಿದ್ದೆ. ಕಾಂಗ್ರೆಸ್ ನ ಒಂದು ಮುಖವಾಡ ಕಳಚಿ ಬಿದ್ದಿದೆ. ಮನರೇಗಾ ಹೆಸರು ಬದಲಿಸಿದ್ದಕ್ಕೆ ಗದ್ದಲ ಮಾಡಿದರು. ಪರಮೇಶ್ವರ್ ಹೆಸರು ಇಡುವುದು ಗಾಂಧಿಗೆ ಮಾಡುವ ಅಪಮಾನ. ಅವರು ಹಲವು ಶಿಕ್ಷಣ ಸಂಸ್ಥೆ ನಡೆಸುತ್ತಾರೆ, ಅದರಲ್ಲಿ ಯಾವುದಾದರೂ ಹೆಸರು ಇಡಬಹುದಿತ್ತು. ರಾಜೀವ್ ಗಾಂಧಿ ಆರೋಗ್ಯ ವಿವಿ ಹೆಸರನ್ನು ಮಹಾತ್ಮಾ ಗಾಂಧಿ ಹೆಸರು ಇಡಲಿ.ಸಂಜಯ್ ಗಾಂಧಿ ಆಸ್ಪತ್ರೆ ಹೆಸರು ಬದಲಿಸಲಿ, ಅವರೇನೂ ರಾಷ್ಟ್ರೀಯ ನಾಯಕರಲ್ಲ. ಕಾಂಗ್ರೆಸ್ ನವರಿಗೆ ನೆಹರು, ಗಾಂಧಿ ಹೆಸರು ಭಜನೆ ಅಷ್ಟೇ ಗೊತ್ತು. ಮಹಾತ್ಮಾ ಗಾಂಧಿಯವರೇ ಕಾಂಗ್ರೆಸ್ ಅನ್ನು ವಿಸರ್ಜಿಸಿ ಅಂದಿದ್ದರು. ಸ್ವಾತಂತ್ರ್ಯ ಹೋರಾಟ ಹಲವರು ಮಾಡಿದ್ದಾರೆ, ಕಾಂಗ್ರೆಸ್ ಅದರ ಲಾಭ ಪಡೆಯಿತು, ಗಾಂಧಿ ಹೆಸರೇ ಇರಲಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸಿಎಂ-ಡಿಸಿಎಂ ರಾಹುಲ್ ಗಾಂಧಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಹೈಕಮಾಂಡ್ ಅಸಮರ್ಪಕವಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದೇ ಕಾಂಗ್ರೆಸ್ ನೀತಿ. ರಾಹುಲ್ ಗಾಂಧಿಯನ್ನು ದೆಹಲಿಯಲ್ಲಾದರೂ ಭೇಟಿ ಮಾಡಲಿ, ಮೈಸೂರಿನಲ್ಲಾದರೂ ಭೇಟಿ ಮಾಡಲಿ. ಅದರಿಂದ ಕರ್ನಾಟಕಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದಿದ್ದಾರೆ. ಮೋದಿ ಸೋಮನಾಥ ದೇವಸ್ಥಾನ ಭೇಟಿಗೆ ಮಲ್ಲಿಕಾರ್ಜುನ ಖರ್ಗೆ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿಕಾರ ಕಳೆದುಕೊಂಡ ಹತಾಶೆಗೆ ಖರ್ಗೆ ಹೀಗೆ ಮಾತಾಡುತ್ತಿದ್ದಾರೆ. ಸೋಮನಾಥ ದೇವಸ್ಥಾನ ನಮ್ಮ ಇತಿಹಾಸ, ಧರ್ಮದ ಸಂಕೇತ. ದೇಶ ಇಂದು ಅಭಿವೃದ್ಧಿ ಅಗಿದ್ದರೆ ಅದಕ್ಕೆ ಮೋದಿ ಕಾರಣ. ಇಂದು ನವಭಾರತ ಎದ್ದು ನಿಂತಿದೆ .ಇದೆಲ್ಲಾ ಕಾಂಗ್ರೆಸ್ ನವರಿಗೆ ಅರ್ಥ ಆಗಲ್ಲ ಎಂದು ತಿಳಿಸಿದ್ದಾರೆ.
ಬಳ್ಳಾರಿ ಘರ್ಷಣೆ ವಿಚಾರವಾಗಿ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲಿ ರಾಜ್ಯ ನಾಯಕತ್ವದ ಪ್ರಶ್ನೆ ಇಲ್ಲ. ಹಂತ ಹಂತವಾಗಿ ಹೋರಾಟ ನಡೆಯಲಿದೆ. ಮೊದಲು ಅಲ್ಲಿ ನಡೆದಿರುವ ಸತ್ಯ ಜನರಿಗೆ ಗೊತ್ತಾಗಲಿ ಎಂದು ಮೊದಲು ಪ್ರತಿಭಟನೆ ಮಾಡುತ್ತಿದ್ದೇವೆ. ಪಾದಯಾತ್ರೆ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಅಂತಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಹಲವಾರು ಪಾದಯಾತ್ರೆಗಳು ಆಗುತ್ತವೆ ಎಂದಿದ್ದಾರೆ.











