ಹಾಸನ; 2028 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪರ್ಧಿಸುವಂತೆ ಜೆಡಿಎಸ್ ಮುಖಂಡರ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹಮಂಡಳಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ಕೊಟ್ಟಿದ್ದಾರೆ.ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಶಿವಲಿಂಗೇ ಗೌಡ ಪಂಥಾಹ್ವಾನ ನೀಡಿದ್ದಾರೆ.
ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದಲ್ಲಿ ಶ್ರೀ ಭಕ್ತ ಕನಕದಾಸ, ಶ್ರೀ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಆಚರಣ ಸಮಿತಿ ವತಿಯಿಂದ ದೇವರಾಜು ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ನಾಲ್ಕು ಬಾರಿ ಎಂಎಲ್ಎ ಆಗಿದ್ದೀನಿ. ನಮ್ಮ ಅಪ್ಪ ಹೆಬ್ಬೆಟ್ಟು, ನಮ್ಮ ಅಪ್ಪ ನೀಟಾಗಿ ಹೊಲದಲ್ಲಿ ಸಾಲು ಹೊಡೆಯೊರೋ.ಅಂತವರ ಹೊಟ್ಟೆಯಲ್ಲಿ ಹುಟ್ಟಿದವನು ನಾನು, ಇತಿಹಾಸ ನನಗೂ ಗೊತ್ತಿದೆ, ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಐವತ್ತು ಜನ ಹಿಂದೆ ಕರೆದುಕೊಂಡು ಅರಸೀಕೆರೆಗೆ ಬಂದಿದ್ದೀರಾ.ಅರಸೀಕೆರೆಯಲ್ಲಿ ಇದು ನಡೆಯೋದಿಲ್ಲ. ಅರಸೀಕೆರೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿ, ಪುಸ್ತಕ ಬಿಡುಗಡೆ ಮಾಡ್ತಿನಿ ಎಂದು ಸವಾಲು ಹಾಕಿದ್ದಾರೆ. ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದರೆ ಮಾರನೇ ದಿನ ಮೊಸಳೆಹೊಸಳ್ಳಿಗೆ ತೆಗೆದುಕೊಂಡು ಹೋದ್ರಿ. ಅಶ್ವಥ್ ನಾರಾಯಣಗೌಡ್ರು ಮಂಜೂರು ಮಾಡಿಕೊಟ್ಟರು. ಅರಸೀಕೆರೆಗೆ ಏನು ಮಾಡಿದ್ದೀರಿ, ನಿಮ್ಮದು ಏನಿದೆ ಇಲ್ಲಿ ನೆಲೆ. ಬನ್ನಿ ನಿಂತ್ಕೊಳಿ, ಅರಸೀಕೆರೆ ಜನ ತೋರಿಸುತ್ತಾರೆ. ಸುಮ್ಮಸುಮ್ಮನೆ ಭಾಷಣ ಮಾಡಬೇಡಿ, ಅರಸೀಕೆರೆ ನೆಮ್ಮದಿಯಾಗಿದೆ. ಅರಸೀಕೆರೆ ಪ್ರಗತಿಗಾಗಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದೇನೆ. ಅವರಿಗೆ ಹತ್ತು ಕೋಟಿ ಕೊಡಿ ಎಂದು ಯಡಿಯೂರಪ್ಪ ಅವರಿಂದ ಕೊಡಿಸಿದ್ದೇನೆ. ನನಗೆ ಅವತ್ತಿನ ಕಾಲದಲ್ಲಿ ಟಿಕೆಟ್ ಕೊಟ್ರಿ, ಹದಿನಾಲ್ಕು ಓಟಿನಲ್ಲಿ ಸೋತೆ. ನಾನು ಸೋತ ಮೇಲೆ ಅರಸೀಕೆರೆ ಕ್ಷೇತ್ರದಲ್ಲಿ ನಿಮ್ಮದು ಏನು ಇಲ್ಲ. ಅಲ್ಲಿಂದ ನಾನು ನನ್ನ ವೈಯುಕ್ತಿಕವಾಗಿ ಗೆದ್ದಿದ್ದೀನಿ. ಜನ ಏಕೆ ನನ್ನ ಮೇಲೆ ವಿಶ್ವಾಸ ಇಟ್ಟರೋ ಗೊತ್ತಿಲ್ಲ. ಎತ್ತಿನಹೊಳೆ ಯೋಜನೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದೀರಿ. ಬನ್ನಿ ಮುಂದಿನ ಜೂನ್ ತಿಂಗಳಿಗೆ, ಕೆರೆಗಳು ತುಂಬುತ್ತವೆ. ನೀವು ಹೊಳೆನರಸೀಪುರವನ್ನೇ ನೋಡಿಕೊಂಡು ಕೂತ್ಕೊಂಡ್ರಿ ಎಂದಿದ್ದಾರೆ.
ಎಲ್ಲಾ ರಾಜಕೀಯ ನನಗೆ ಗೊತ್ತಿದೆ.ಎಲೆಕ್ಷನ್ಗೆ ಬನ್ನಿ, ಹೈಕಮಾಂಡ್ ಏಕೆ, ಬನ್ನಿ ನಿಂತ್ಕಳಿ, ಅರಸೀಕೆರೆ ಜನ ತೀರ್ಮಾನ ಮಾಡ್ತಾರೆ.ಈ ಕ್ಷೇತ್ರದ ಜನ ಪ್ರಬುದ್ಧರಾಗಿದ್ದಾರೆ, ರಾಜಕಾರಣ ಕಲಿತಿದ್ದಾರೆ.ಹಿಂದಿನ ರೀತಿ ಓಟು ಹಾಕಲ್ಲ. ನಾನು ಕಾಂಗ್ರೆಸ್ಗೆ ಕದ್ದುಮುಚ್ಚಿ ಹೋಗಿಲ್ಲ. ಬರೀ ನೀವು, ನಿಮ್ಮ ಮನೆ, ನಿಮ್ಮ ಮನೆತನ, ನೀವೇ ಮಾಡಿಕೊಂಡು ಹೋದ್ರಿ. ಹಾಸನ ಜಿಲ್ಲೆಯಲ್ಲಿ ಬೇರೆ ಯಾರು ಬೆಳೆಯೋದು ಬೇಡವೇ. ನಾನು ಬಂದು ಅರಸೀಕೆರೆ ಶಾಸಕನಾದಾಗ ಈ ಪಕ್ಷಕ್ಕೆ 85 ಸಾವಿರ ಮತಗಳನ್ನು ಹಾಕಿಸಿದ್ದೇನೆ. ನೀವು ಅರಸೀಕರೆಗೆ ಏನು ಮಾಡಿದ್ದೀರಿ ಎಂಬುದು ಜನರಿಗೆ ಗೊತ್ತಿದೆ.ಏನು ನಿಮ್ಮಿಂದ ಮತಗಳು ಬಂದವಾ, ನನ್ನಿಂದ ನಿಮ್ಮ ಪಕ್ಷಕ್ಕೆ ಬಂದಿವೆ. ಪುಣ್ಯಾತ್ಮರೇ ನೀವು ಬಂದು ಇಲ್ಲಿ ಸಭೆ ಮಾಡಿ. ನನ್ನ ಹೆಸರು ಹೇಳಬೇಡಿ ನನಗೂ ಏನಾದರೂ ಆಗಿ ಬಿಡುತ್ತೆ, ಹಾಗಾಗಿ ನನ್ನ ಹೆಸರು ಹೇಳಬೇಡಿ. ನಾವು ಹೆಂಡತಿ, ಮಕ್ಕಳು ಕಟ್ಕಂಡು ರಾಜಕಾರಣ ಮಾಡಲ್ಲ.ಅರಸೀಕೆರೆಯಲ್ಲಿ ಬದುಕುತ್ತೀನಿ, ಇಲ್ಲೇ ಸಾಯ್ತಿನಿ. ಈ ಜನುಮದಲ್ಲಿ ನಾನು ಇರುವವರೆಗೂ ನಿಮಗೆ ಸಾಧ್ಯವಿಲ್ಲ.ಈ ಅರಸೀಕೆರೆ ಕನಸಿನಲ್ಲಿ ಇಟ್ಟು ಕರೆದುಕೊಂಡು ಬಂದಿದ್ದೀರಲ್ಲಾ, ಪುಣ್ಯಾತ್ಮರೇ ಕರೆದುಕೊಂಡು ಬನ್ನಿ. ನಾವು ಏನು ಅಂಥ ತೋರಿಸುತ್ತೇನೆ.ಒಕ್ಕಲಿಗರು ದೇವೇಗೌಡರನ್ನ ಬಿಟ್ಟು ಮತ ಹಾಕಲ್ಲ ಅಂತಿದ್ದರು, ನನಗೆ ಏಕೆ ಮತ ಹಾಕಿದ್ರು ನೋಡೋಣ ಇದು ರಣರಂಗ, ಮಹಾಭಾರತ ಇವತ್ತೇ ಘೋಷಣೆ ಮಾಡಿದ್ದೀನಿ, ತಾಕತ್ ಇದ್ದರೆ ಬರಲಿ ಎಂದು ಶಿವಲಿಂಗೇಗೌಡ ಗುಡುಗಿದ್ದಾರೆ.











