ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಹೀನಾಯ ಪರಿಸ್ಥಿತಿಗೆ ತಲುಪಿದೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಾಸ ಮಾಡುವ ಜನರಿಗೆ ಮನೆ ನೀಡಿದೆ. ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಸರ್ಕಾರ ಮನೆ ನೀಡಿದೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಾಮಾವಧಿ. ಸಿದ್ದರಾಮಯ್ಯ ಅವರು ತಮ್ಮದೇ ವರ್ಚಸ್ಸಿನಲ್ಲಿ ರಾಜಕೀಯ ಮಾಡುತ್ತೇನೆ ಎಂದಿದ್ದರು. ಎರಡನೇ ಅವಧಿಗೆ ಸಿಎಂ ಆದ ಬಳಿಕ ಅವರು ಬಹಳ ಬದಲಾವಣೆಯಾಗಿದ್ದಾರೆ. ಕೇರಳದ ಒತ್ತಡಕ್ಕೆ ಮಂಡಿಯೂರಿರುವುದು ಖಂಡನೀಯ. ಹೊರ ರಾಜ್ಯದ ವಲಸೆ ಜನರಿಗೆ ಕೂಡಲೇ ಮನೆ ನೀಡಲು ಸಕಾರಣಗಳೇನು?. ಅತಿಕ್ರಮಣ ತೆರವು ಮಾಡಿದ ಬಳಿಕ ತೆರವು ಮಾಡಿದ ಸ್ಥಳದಲ್ಲಿ ವಾಸ ಮಾಡಲು ಅವಕಾಶ ನೀಡಿದೆಯ. ಇದರಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತದೆ ಅಂದರೆ ಆ ಜನರು ಎಷ್ಟು ಪ್ರಭಾವಶಾಲಿಗಳು. ನಮ್ಮ ರಾಜ್ಯದ ಸರ್ಕಾರದ ವಿರುದ್ಧ ಮಾತನಾಡಲು ಕೇರಳ ಸರ್ಕಾರದ ನೈತಿಕತೆ ಏನು? ಎಂದು ಪ್ರಶ್ನಿಸಿದ್ದಾರೆ.
ಕೆ.ಸಿ ವೇಣುಗೋಪಾಲ್ ಹಸ್ತಕ್ಷೇಪದ ಬಳಿಕ ಎರಡೇ ದಿನದಲ್ಲಿ ನಿರ್ಧಾರ ಕೈಗೊಂಡಿದ್ದು ಹೇಗೆ? ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಈವರೆಗೂ ನೀಡಿಲ್ಲ, ಅಲ್ಲಿಯ ಜನರ ಪರಿಸ್ಥಿತಿಯನ್ನು ಸರ್ಕಾರ ನೋಡಿಲ್ಲ?. ಪ್ರಕೃತಿ ವಿಕೋಪದಿಂದ ರೈತರಿಗೆ ನಷ್ಟವಾಗಿದೆ, ರೈತರಿಗೆ ಸರ್ಕಾರ ಸ್ಪಂದಿಸಿದಿಯೇ? ಹೊರ ರಾಜ್ಯದ ಜನರಿಗೆ ಮಣೆ ಹಾಕುವುದಾದರೆ ರಾಜ್ಯದ ಜನರ ಪರಿಸ್ಥಿತಿ ಏನು?. ಕರ್ನಾಟಕ ಜನರಿಗೆ ಅನ್ಯಾಯ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರಿಗೆ ಅನಿಸುತ್ತಿಲ್ವ?. ಕೆಲವೇ ಕೆಲವು ವ್ಯಕ್ತಿಗಳನ್ನು ಓಲೈಕೆ ಮಾಡಲು, ಒಂದು ಧರ್ಮವನ್ನು ಓಲೈಕೆ ಮಾಡಲು ಸಿದ್ದರಾಮಯ್ಯ ಅಂತಹ ನಾಯಕರು ಮುಂದಾದ್ರೆ ಹೇಗೆ? ಎಂದಿದ್ದಾರೆ.
ಕೇರಳದಲ್ಲಿ ಚುನಾವಣೆ ಇದೆ ಅಂತಾ ಹಿಂಗೇಲ್ಲ ಮಾಡಬಾರದು. ಸಿದ್ದರಾಮಯ್ಯ ಅವರ ಅನುಭವ ಎಲ್ಲಿ ಹೋಯ್ತು. ವೇಣುಗೋಪಾಲ್ ಅಥಾವ ಪಿಣರಾಯಿ ವಿಜಯನ್ ಮನೆಗೆ ಹೋಯ್ತ ಅನುಭವ. ಮೊದಲಿನ ಸಿದ್ದರಾಮಯ್ಯ ಇಲ್ಲ, ಈಗ ಅವರು ಬದಲಾಗಿದ್ದಾರೆ.ಕುರ್ಚಿಗಾಗಿ ಬದಲಾಗಿದ್ದಾರೆ, ಅದಕ್ಕಾಗಿ ಕರ್ನಾಟಕವನ್ನು ಕತ್ತಲಿಗೆ ತಳ್ಳುತ್ತಿದ್ದಾರೆ. ಇಂತಹ ತಿರ್ಮಾನ ಒಳ್ಳೆದಲ್ಲ ಎಂದು ತಿಳಿಸಿದ್ದಾರೆ.
ಮನರೇಗಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದವು. ಹೊಸ ಮಸೂದೆಯನ್ನು ಓದಿಕೊಳ್ಳಲಿ.ಸಾಧಕ ಬಾಧಕ ಚರ್ಚೆ ಮಾಡಲಿ. ಬೇರೆ ಬೇರೆ ರೂಪದಲ್ಲಿ ಕೇಂದ್ರದ ಹಣ ದುರ್ಬಳಕೆಯಾಗುತ್ತಿದೆ. ಬಡವರಿಗೆ ಅನುಕೂಲವಾಗಲು ೧೦೦ ದಿನದಿಂದ ೧೨೫ ಕ್ಕೆ ಉದ್ಯೋಗ ದಿನ ಹೆಚ್ಚಿಸಿದೆ. ಮನರೇಗಾ ಕಾಯ್ದೆಯನ್ನು ಬಂದ್ ಮಾಡಿಲ್ಲ. ಕೇಂದ್ರದ ಜೊತೆಗೆ ರಾಜ್ಯಗಳು ಕೈ ಜೋಡಿಸಬೇಕು ಎನ್ನುವುದು ನರೇಂದ್ರ ಮೋದಿ ಅವರ ಆಶಯ. ಕುಡಿಯುವ ನೀರಿನ ಯೋಜನೆಗಳನ್ನು ಸರಿಯಾಗಿ ಸರ್ಕಾರ ಮಾಡಿಲ್ಲ. ಕೆಲಸದ ಬಳಕೆಯ ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.ಕೇಂದ್ರ ಸರ್ಕಾರದ ಹಣ ಅಂದರೆ ಅಸಡ್ಡೆಯಾಗಬಾರದು. ಪರಿಶೀಲನೆ ಸಭೆ ನಡೆಸುತ್ತಿದ್ದೇವೆ, ಬಿಡುಗಡೆ ಮಾಡುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೆಲಸಗಳ ನಡೆಯುತ್ತಿದೆ. ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕೇಂದ್ರದ ಮಟ್ಟದಲ್ಲಿ ನಾನು ಮಾತುಕತೆ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ದರ ಬಹಳ ಕಡಿಮೆ ಮಟ್ಟದಲ್ಲಿ ಏರಿಕೆ ಮಾಡಿದೆ. ನಮ್ಮ ಸೇವೆಗಳನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಕೋವಿಡ್ ಸಮಯದಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಿದ್ದೆವು. ಈಗಿನ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಹೊರೆಯಾಗಲಾರದು ಎಂದು ಅವರು ಹೇಳಿದ್ದಾರೆ.











