ಬೆಳಗಾವಿ: ನನಗೆ ಶಾರೀರಿಕವಾಗಿ ನಿಶ್ಯಕ್ತಿ ಇದೆ, ಆದರೆ ರಾಜಕೀಯ ನಿಶ್ಯಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ಸಿಎಂ ಸುದೀರ್ಘ ಭಾಷಣದ ವೇಳೆ ಬಿಜೆಪಿ ಶಾಸಕರು ಮಧ್ಯ ಪ್ರವೇಶ ಮಾಡಿ ಪೀಠಿಕೆಯನ್ನೇ ಇಷ್ಟು ಹೊತ್ತು ಹಾಕಿದ್ರೆ ಹೇಗೆ ವಿಷಯಕ್ಕೆ ಬನ್ನಿ ಎಂದು ವಿಪಕ್ಷ ನಾಯಕ ಅಶೋಕ್ ಮತ್ತು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ. 25 ಪೇಜ್ ಆಯಿತು ಅಂದರೆ ಶಾರೀರಿಕವಾಗಿ ನಿಶಕ್ತಿಯೂ ಇಲ್ಲದಂತೆ ಆಯಿತು ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಶಾರೀರಿಕವಾಗಿ ನಿಶ್ಯಕ್ತಿ ಇದೆ, ಆದರೆ ರಾಜಕೀಯ ನಿಶ್ಯಕ್ತಿ ಇಲ್ಲ ಎಂದಿದ್ದಾರೆ.
ಐದು ವರ್ಷ ಮುಗಿಸಿದ್ದೇನೆ, ಎರಡನೇ ಬಾರಿ ನಾನು ಸಿಎಂ ಇದ್ದೇನೆ. ಹೈಕಮಾಂಡ್ ನವರು ನನ್ನ ಪ್ರಕಾರ ನನ್ನ ಪರವಾಗಿಯೇ ಇರುವುದು. ಹೀಗಾಗಿ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವವನು. ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ.ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿಯೇ ಇದೆ . ಹೀಗಾಗಿ ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದು ನಮ್ಮ ಪಾರ್ಟಿ ವಿಷಯ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ನಾನು ಮುಖ್ಯಮಂತ್ರಿ ಆಗಿದ್ದೇನೆ, ಮುಂದೆಯೂ ನಾನೇ ಇರುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈಗ ಉ.ಕ. ಭಾಗಕ್ಕೆ ಘೋಷಣೆ ಮಾಡುತ್ತೀರಲ್ಲಾ ಅದನ್ನು ಜಾರಿ ಮಾಡಲು ನೀವೇ ಇರಬೇಕು ಎಂದ ಸುನೀಲ್ ಕುಮಾರ್ ಮಾತಿಗೆ ನಾನೇ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ತೋಳು ತಟ್ಟಿ ನಾನೇ ಐದು ವರ್ಷ ಅಂತಾ ಹೇಳಿ ಎಂದು ಬಿಜೆಪಿ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ. ಹಿಂದೆ ಅದೇ ಜಾಗದಲ್ಲಿ ಕುಳಿತು ಮೇಜು ತಟ್ಟಿ ಹೇಳುತ್ತಿದ್ರಲ್ಲಾ. ಹಾಗೇ ಈಗ ಒಂದು ಸಲ ತೋಳು ತಟ್ಟಿ ಹೇಳಿ ನಾನೇ ಐದು ವರ್ಷ ಅಂತಾ ಮುನಿರತ್ನ ಎಂದಿದ್ದಾರೆ. ಈ ವೇಳೆ ಅಶೋಕ ನೀನು ಹೇಳು ಐದು ವರ್ಷ ನಾನೇ ವಿರೋಧ ಪಕ್ಷದ ನಾಯಕ ಅಂತಾ ತಿರುಗೇಟು ನೀಡಿದ್ದಾರೆ ಸಿಎಂ.
ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಮ್ಮನ್ನು ಆಯ್ಕೆ ಮಾಡಿದ್ದು ಐದು ವರ್ಷಕ್ಕೆ . ನಿಮ್ಮನ್ನು ಆಯ್ಕೆ ಮಾಡಿರುವುದು ಐದು ವರ್ಷಕ್ಕೋ ಅಥವಾ ಎರಡೂವರೆ ವರ್ಷಕ್ಕೋ ಕರೆಕ್ಟ್ ಆಗಿ ಹೇಳಿ ಎಂದು ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದ್ದಾರೆ.ಎರಡೂವರೆ ವರ್ಷ ಅಂತ ಹೇಳಿಯೇ ಇಲ್ಲ ಎಂದು ಎರಡು ಬಾರಿ ಸಿದ್ದರಾಮಯ್ಯ ಹೇಳಿದ್ದಾರೆ. ನಂತರ ಎರಡೂವರೆ ವರ್ಷ ಅಂತ ತೀರ್ಮಾನ ಆಗಿಯೇ ಇಲ್ಲ ಎಂದಿದ್ದಾರೆ ಸಿದ್ದರಾಮಯ್ಯ.











