ಬೆಂಗಳೂರು; ಸಿಎಂ ಹಾಗೂ ಡಿಸಿಎಂ ನಡುವಿನ ಸಂಘರ್ಷ ಈಗ ಫೈನಲ್ ಹಂತಕ್ಕೆ ಬಂದಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಗೊಂದಲದ ವಾತಾವರಣ ಇದೆ. ಸರ್ಕಾರ ಸತ್ತು ಹೋಗಿರುವ ರೀತಿ ಇದೆ. ಸಿಎಂ ಮತ್ತು ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿಎಂ ನಾನೇ ಐದು ವರ್ಷ ಅಂತಾರೆ, ಡಿಸಿಎಂ ದೇವರು ಒಳ್ಳೆಯದು ಮಾಡಲಿ ಅಂತಾರೆ. ಸಂಘರ್ಷ ಈಗ ಫೈನಲ್ ಹಂತಕ್ಕೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅಂತಿಮ ನಿರ್ಧಾರ ಕೊಟ್ಟಿಲ್ಲ ಎಂದರೆ ರಾಜ್ಯದಲ್ಲಿ ಗೊಂದಲ ಆಗುತ್ತದೆ. 7 ಕೋಟಿ ದರೋಡೆ ನಡೆದು 78 ಗಂಟೆ ಆದರೂ ಬಂಧಿಸಿಲ್ಲ. ಸಿಎಂ ಮತ್ತು ಡಿಸಿಎಂ ನಡುವಿನ ಕಿತ್ತಾಟ ಹೊಡೆದಾಟದ ಹಂತಕ್ಕೆ ಹೋಗಿದೆ. ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು ಆಗಿದೆ ಎಂದರು.
ಸಿದ್ದರಾಮಯ್ಯ ಉಳಿಸಿಕೊಳ್ಳಲು ಒಂದು ಗ್ಯಾಂಗ್, ಇಳಿಸಲು ಒಂದು ಗ್ಯಾಂಗ್. ಡಿ.ಕೆ. ಶಿವಕುಮಾರ್ ಸಿಎಂ ಆಗಬಾರದು ಅಂತಾ ಇನ್ನೊಂದು ಗ್ಯಾಂಗ್. ಕಾಣೆಯಾಗಿರುವ ಹೋಮ್ ಮಿನಿಸ್ಟರ್ ಕೂಡಾ ಸಿಎಂ ರೇಸ್ ನಲ್ಲಿದ್ದಾರೆ. ಕರ್ನಾಟಕದ ರಾಜಕೀಯ ಕಲಸು ಮೇಲೋಗರ ಆಗಿದೆ . ಕಾಂಗ್ರೆಸ್ ನ ದುರ್ಬಲ ನಾಯಕತ್ವ ಇದಕ್ಕೆ ಕಾರಣ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರದ್ದೇ ಗೇಮ್ ಆಡುತ್ತಿದ್ದಾರೆ. ಯಾರು ಸಿಎಂ ಅಂತಾ ಧೈರ್ಯ ಮಾಡಿ ಘೋಷಣೆ ಮಾಡಿದರೆ ಇದು ಅಂತ್ಯ ಆಗುತ್ತದೆ. ಇಲ್ಲದಿದ್ದರೆ ಪ್ರತಿ ದಿನ ಇದೇ ಗೋಳು ಆಗುತ್ತದೆ. ರಾಹುಲ್ ಗಾಂಧಿಗೆ ಯೋಗ್ಯತೆ, ಮಾನ, ಮರ್ಯಾದೆ ಇದ್ದರೆ ಏನಾದರೂ ಒಂದು ತೀರ್ಮಾನ ಮಾಡಿ.ಕಾಂಗ್ರೆಸ್ ನಾಯಕತ್ವ ಎರಡು ದಿನಗಳಲ್ಲಿ ತೀರ್ಮಾನ ಕೊಡದೇ ಇದ್ದರೆ ರಾಜ್ಯದಲ್ಲಿ ಪ್ರತಿಭಟನೆ ಶತ ಸಿದ್ಧ ಎಂದು ಎಚ್ಚರಿಸಿದರು.
ಡಿಸಿಎಂ ಜೈಲಿಗೆ ಹೋಗಿ ಬೆಂಬಲ ಕೇಳುವುದು ನಾಚಿಕೆಗೇಡು. ಕಾಂಗ್ರೆಸ್ ಗೆ ಇಂತಹ ಪರಿಸ್ಥಿತಿ ಬಂದಿರುವುದು ಶೋಚನೀಯ. ಎಲ್ಲದಕ್ಕೂ ಶನಿದೇವರ ಕಾಟ ಎಂದಂತೆ ನಮ್ಮ ಮೇಲೆ ಯಾಕೆ ಹೇಳುತ್ತೀರಿ?. ವಿಪಕ್ಷ ಗಟ್ಟಿಯಾಗಿದೆ, ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸುರ್ಜೇವಾಲಾ ಹೇಳುತ್ತಿದ್ದಾರೆ. ವಿಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಅವರ ಶಾಸಕರನ್ನು ನಿಯಂತ್ರಿಸಲು ಯೋಗ್ಯತೆ ಇಲ್ಲ ಅಂದರೆ ಬಿಜೆಪಿ ಮೇಲೆ ಯಾಕೆ ಹೇಳುತ್ತೀರಿ?. ಸುರ್ಜೇವಾಲಾ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ, ಅಷ್ಟು ಮರ್ಯಾದೆ ಕಳೆದುಕೊಂಡಿದ್ದಾರೆ. ಗೊಂದಲ ಮುಂದುವರಿದರೆ ನಾವು ರಾಜ್ಯಪಾಲರ ಮೊರೆ ಹೋಗುತ್ತೇವೆ. ಎರಡು ಮೂರು ದಿನ ಕಾದು ನೋಡುತ್ತೇವೆ. ಕಾಂಗ್ರೆಸ್ ಗೆ ಇದು ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ನಾನು ಕಷ್ಟ ಬಿದ್ದಿದ್ದೇನೆ, ಕೂಲಿ ಕೊಡಿ ಎಂದು ಡಿ.ಕೆ. ಶಿವಕುಮಾರ್ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಓಸಿ ಗಿರಾಕಿ, ನಾನು ಒರಿಜಿನಲ್ ಅಂತಾ ಹೇಳುತ್ತಿದ್ದಾರೆ. ನಾನು ಹುತ್ತ ಕಟ್ಟಿದ್ದು, ಹಾವು ಬಂದು ನೀನು ಸೇರಿಕೊಂಡಿದ್ದೀಯಾ ಅಂತಾ ಹೇಳುತ್ತಿದ್ದಾರೆ. ಅವರ ಮಾತುಗಳಲ್ಲಿ ಎಷ್ಟು ಹತಾಶೆ ಇದೆ ಅಂತಾ ಗೊತ್ತಾಗುತ್ತದೆ. ಸಿದ್ದರಾಮಯ್ಯ ವಚನ ಭ್ರಷ್ಟ ಅಂತಾ ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.











