ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಸರ್ಕಾರದಲ್ಲೇ ಈಗ ಗುಂಡಿ ಬಿದ್ದಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಸರ್ಕಾರದಲ್ಲೇ ಈಗ ಗುಂಡಿ ಬಿದ್ದಿದೆ. ಸಿಎಂ ಮಗ ಯತೀಂದ್ರ, ಖರ್ಗೆ ಮಗ ಪ್ರಿಯಾಂಕ್ ಇಬ್ಬರೂ ಸೇರಿ ಕಾಂಗ್ರೆಸ್ ಗೆ ಗುಂಡಿ ಹೊಡೆಯುತ್ತಿದ್ದಾರೆ. ಅವರ ತಂದೆಯನ್ನು ಅವರೇ ಅಪಮಾನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ನೂರಾರು ಬಾರಿ ಹೇಳಿದರೂ ಕೂಡಾ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹೆಣ್ಣು ಮಗಳ ರೇಪ್ ಬೆಂಗಳೂರಿನಲ್ಲಿ ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ. ದಲಿತರು, ಅಲೆಮಾರಿ ಸಮುದಾಯಗಳನ್ನು ಕೇಳುವ ಹಾಗಿಲ್ಲ. ರೇಪ್, ಮರ್ಡರ್ ಬಗ್ಗೆ ಕೇಳಿದರೆ ಆರ್ ಎಸ್ ಎಸ್ ಬಗ್ಗೆ ಮಾತಾಡುತ್ತಾರೆ. ಜನರ ಸಮಸ್ಯೆ ಬಗೆ ಹರಿಸಲು ಬಂದಿದ್ದೀರೋ ಅಥವಾ ಮತ್ತಷ್ಟು ಸಮಸ್ಯೆ ಉದ್ಭವ ಮಾಡಲು ಬಂದಿದ್ದೀರೋ. ರಾಜ್ಯದ ಜನರು ನಿಮಗೆ ಶಾಪ ಹಾಕುತ್ತಿದ್ದಾರೆ. ಕಾಲಹರಣ ಮಾಡುವುದು ಬಿಟ್ಟು ರೈತರ ಕಷ್ಟಗಳನ್ನು ಕೇಳಿ.ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಮಾರಕವಾಗಿದೆ ಎಂದಿದ್ದಾರೆ.
ಗೊಂದಲಗಳನ್ನು ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಮುಂಚೂಣಿಯಲ್ಲಿದ್ದಾರೆ. ಯತೀಂದ್ರ ಅವರ ಹೇಳಿಕೆ ಗಮನಿಸಿದ್ದೇನೆ. ನನ್ನ ತಂದೆಗೆ ವಯಸ್ಸಾಗಿದೆ, ಅವರ ರಾಜಕೀಯ ನಾಯಕತ್ವ ಅಂತ್ಯದ ದಿನಗಳಲ್ಲಿದೆ ಎಂದಿದ್ದಾರೆ. ನಮ್ಮ ತಂದೆ ಜೊತೆಯಲ್ಲಿದ್ದ ಸತೀಶ್ ಜಾರಕಿಹೊಳಿ ಅವರು ಸಕ್ಸಸ್ ಆಗಬೇಕು ಅಂತ ಹೇಳಿದ್ದಾರೆ. ಇದು ಪಕ್ಷದ ತೀರ್ಮಾನವೇ?. ಯತೀಂದ್ರ ಅವರು ತನ್ನ ತಂದೆಗೆ ಕೊನೆಯ ಮೊಳೆ ಹೊಡೆಯಲು ಶುರು ಮಾಡಿದ್ದಾರೆ, ಅವರ ಅಧಿಕಾರಕ್ಕೆ ಅವರೇ ಕೊನೆಯ ಮೊಳೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುತ್ತಾರೆ ಅಂತ ಅವರೇ ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತೀಚೆಗೆ ಅವರು ಯಾಕೆ ಇಷ್ಟೊಂದು ಆರ್ಭಟ ಮಾಡುತ್ತಿದ್ದರು ಅಂತ ಗೊತ್ತಾಗುತ್ತಿದೆ. ಅವರ ಇಲಾಖೆ ಕೆಲಸ ಮಾಡದೇ ಬೇರೆ ಇಲಾಖೆ ವಿಚಾರದಲ್ಲಿ ಯಾಕೆ ರಂಪ ಮಾಡುತ್ತಿದ್ದರು ಅಂತ ಈಗ ಉತ್ತರ ಸಿಗುತ್ತಿದೆ. ಅವರು 2014-15ರಲ್ಲಿ ಯಾಕೆ ಮಂತ್ರಿ ಆದರು ಅಂತ ಗೊತ್ತಿಲ್ಲ. ಸಿಎಂ ಆಗಬೇಕು ಅಂತ ಹೆಸರು ಓಡಾಡುತ್ತಿದ್ದಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು. ಖರ್ಗೆ ಸಿಎಂ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ, ಮಹದೇವಪ್ಪ ಇಬ್ಬರು ಪಿತೂರಿ ಮಾಡಿ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು. ಶ್ರೀನಿವಾಸ್ ಪ್ರಸಾದ್ ರನ್ನು ಕ್ಯಾಬಿನೆಟ್ ನಿಂದ ತೆಗೆದು ಇವರನ್ನು ಸೇರಿಸಿದರು. ಒಂದೇ ಏಟಿಗೆ ಕಾಂಗ್ರೆಸ್ ಇಬ್ಬರನ್ನೂ ಮುಗಿಸಿದ ಹಾಗೆ ಆಯಿತು. ದಲಿತ ಸಮುದಾಯದ ಅನೇಕ ನಾಯಕರು ಸಚಿವರಾಗದೇ ಪರಿತಪಿಸಲು ಕಾರಣ ಪ್ರಿಯಾಂಕ್ ಖರ್ಗೆಎಂದು ಆರೋಪಿಸಿದ್ದಾರೆ.
ಪರಮೇಶ್ವರ್, ಮಹದೇವಪ್ಪ ಈಗಾಗಲೇ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಆದರೆ ಪರಮೇಶ್ವರ್ ಹಾಗೂ ಮಹದೇವಪ್ಪರನ್ನು ಬಲಿ ತೆಗೆದುಕೊಳ್ಳಲು ನಾನು ಡಿಸಿಎಂ ಆಗುತ್ತೇನೆ ಅಂತ ಟವಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಏನಾದರೂ ಡಿಸಿಎಂ ಆದರೆ ಪರಮೇಶ್ವರ್ ಗೆ, ಮಹದೇವಪ್ಪ ಗೆ ಕೊನೆ ಮೊಳೆ ಹೊಡೆದ ಹಾಗೆ. ಇವರು ದಲಿತರ ಉದ್ಧಾರಕ್ಕಾಗಿ ಬಂದಿಲ್ಲ, ದಲಿತರ ಸಂಹಾರಕ್ಕೆ ಬಂದಿದ್ದಾರೆ ಎಂದಿದ್ದಾರೆ.











