ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಕಲ್ಬುರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪ್ರಿಯಾಂಕ್ ಖರ್ಗೆ ಆಪ್ತ ಡ್ರಗ್ ಪೆಡ್ಲರ್ ಬೇರೆ ರಾಜ್ಯದಲ್ಲಿ ಬಂಧನ ಆಗಿದ್ದಾನೆ. ಹಾಗಾದರೆ ನಮ್ಮ ರಾಜ್ಯದಲ್ಲಿ ಯಾಕೆ ಆಗಲಿಲ್ಲ?.ಅವನು ಡ್ರಗ್ ಪೆಡ್ಲಿಂಗ್ ಮಾಡುವುದು ಉಸ್ತುವಾರಿ ಸಚಿವರ ಗಮನಕ್ಕೆ ಇದ್ದೇ ಇರುತ್ತದೆ. ಅಲ್ಲಿಯ ಸ್ಥಳೀಯ ಶಾಸಕರಿಗೆ ಮಾಹಿತಿ ಇದ್ದೇ ಇರುತ್ತದೆ. ನಾಳೆ ಡ್ರಗ್ಸ್ ಯಾರ ಮನೆಗೂ ಸಹ ಬರಬಹುದು.ಮಕ್ಕಳಿಗೆ ಐಸ್ ಕ್ರೀಂನಲ್ಲಿ ಡ್ರಗ್ಸ್ ಹಾಕುತ್ತಾರೆ. ಸ್ಕೂಲ್, ಕಾಲೇಜು ಪಾರ್ಟಿಯಲ್ಲಿ ಡ್ರಗ್ಸ್ ಯಾಕೆ ಇರುತ್ತದೆ ಎಂದರೆ ಚೈನ್ ಲಿಂಕ್. ಪ್ರಿಯಾಂಕ್ ಖರ್ಗೆ ಲಿಂಗರಾಜ್ ಕಣ್ಣಿ ಬೆನ್ನಿಗೆ ನಿಂತಿದ್ದಾರೆ.ಅಂತಹವರು ಅನೇಕರು ಕಾಂಗ್ರೆಸ್ ಆಡಳಿತದಲ್ಲಿ ಇದ್ದಾರೆ ಎಂದರು.
ಕರ್ನಾಟಕದಲ್ಲಿ ಡ್ರಗ್ಸ್ ಜಾಲ ಬಹಳಷ್ಟು ವ್ಯಾಪಕವಾಗಿ ವಿಸ್ತಾರವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಡ್ರಗ್ಸ್ ದಂಧೆ ನಡೆಯುತ್ತಿದೆ. ಸ್ಮಗ್ಲಿಂಗ್ ಮಾಡುವವರು ಹಾಗೂ ಪೆಡ್ಲರ್ಗಳು ರಾಜಕಾರಣಿಗಳು ಹಾಗೂ ಪೊಲೀಸರ ಬೆಂಬಲ ಇಲ್ಲದೇ ನಡೆಸಲು ಸಾಧ್ಯವಿಲ್ಲ. ಸಿಂಥೆಟಿಕ್ ಡ್ರಗ್ ಮೊದಲು ಬಾಂಗ್ಲಾ ನುಸುಳುಕೋರರ ಜೊತೆ, ನೈಜೀರಿಯಾದವರ ಜೊತೆ ಬರುತ್ತಿತ್ತು. ಈಗ ಕರ್ನಾಟಕದಲ್ಲೇ ತಯಾರಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರ ಡ್ರಗ್ ಮಾಡುವವರಿಗೆ ಅವಕಾಶ ಕೊಡುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಈವರೆಗೂ ಕ್ಷಮೆ ಯಾಚಿಸಿಲ್ಲ ಎಂದು ಹೇಳಿದರು.
ಶಾಸಕ ಭೈರತಿ ಬಸವರಾಜ ವಿರುದ್ಧ ಎಫ್ ಐಆರ್ ವಿಚಾರದ ಬಗ್ಗೆ ಮಾತನಾಡಿ ಭೈರತಿ ಬಸವರಾಜ ಅವರಿಗೆ ಈ ಘಟನೆ ಏನು ನಡೆದಿದೆ ಎಂಬ ಅರಿವು ಕೂಡಾ ಇಲ್ಲ. ಕೇವಲ ಫೋಟೋದಲ್ಲಿ ಮಾತ್ರ ಇದೆ ಎಂಬ ಕಾರಣಕ್ಕೆ ಪ್ರಕರಣ ದಾಖಲಾಗಿದೆ. ತನಿಖಾ ಸಂಸ್ಥೆಗಳು ಜನಸಾಮಾನ್ಯರ ವಿಶ್ವಾಸ ಕಳೆದುಕೊಳ್ಳಬಾರದು. ತನಿಖಾ ಸಂಸ್ಥೆಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ದುರುಪಯೋಗ ಮಾಡಿಕೊಂಡ ಆರೋಪ ಕಾಂಗ್ರೆಸ್ ಮೇಲೆ ಇದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಲ್ಲಿಕಾರ್ಜುನ ಖರ್ಗೆ ಕುರಿತ ಹೇಳಿಕೆಗೆ ಸಿಎಂ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ?. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಅಭ್ಯರ್ಥಿ ಮಾಡುತ್ತೀರಾ ಎಂದು ವಿಜಯೇಂದ್ರ ಕೇಳಿದ್ದಾರೆ. ಇದರಲ್ಲಿ ತಾರ್ಕಿಕ ವಿಚಾರ ಇದೆ. ಯಾರಿಗೆ ಯಾವ ಸ್ಥಾನ ಮಾನ ನೀಡಬೇಕು ಎನ್ನುವುದನ್ನು ಕಾಂಗ್ರೆಸ್ ನಿಂದ ಬಿಜೆಪಿ ಕಲಿಯಬೇಕಿಲ್ಲ. ಕಾಂಗ್ರೆಸ್ ನಲ್ಲಿ ಹಿಂಬಾಲಕರಿಗೆ ಮಾತ್ರ ಸ್ಥಾನ ಮಾನ. ಆದರೆ ಬಿಜೆಪಿಯಲ್ಲಿ ಹಾಗೆ ಇಲ್ಲ. ರಾಜ್ಯಸಭೆಯಿಂದ ಹಿಡಿದು ಪದ್ಮ ಪ್ರಶಸ್ತಿ ತನಕ ಬಿಜೆಪಿ ಮಾಡಿದ ಆಯ್ಕೆ ಕಣ್ಮುಂದೆ ಇದೆ ಎಂದು ಹೇಳಿದರು.











