ಮನೆ Latest News ಜಾತಿ ಗಣತಿಯ ಮಾಹಿತಿ ಸೋರಿಕೆ ಆಗಿದೆ; ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ

ಜಾತಿ ಗಣತಿಯ ಮಾಹಿತಿ ಸೋರಿಕೆ ಆಗಿದೆ; ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ

0

ಬೆಂಗಳೂರು; ಜಾತಿ ಗಣತಿಯ ಮಾಹಿತಿ ಸೋರಿಕೆ ಆಗಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಜಾತಿಗಣತಿ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಲೋಪ ದೋಷಗಳನ್ನು ಮುಚ್ಚಿಡಲು ಮುಂದಾಗಿದೆ. ಜಾತಿ ಗಣತಿಯ ಮಾಹಿತಿ ಸೋರಿಕೆ ಆಗಿದೆ. ಇದು ಎಲ್ಲಿಂದ, ಹೇಗೆ,  ಯಾವಾಗ ಆಯಿತು ಎನ್ನುವುದು ತಿಳಿಯಬೇಕಿದೆ. ಇದಕ್ಕಾಗಿ ಈಗ ವಿಷಯಾಂತರ ಮಾಡಲು ಸರ್ಕಾರ ಮುಂದಾಗಿದೆ. ಸಮೀಕ್ಷೆಗೆ ನಾವು ಪಕ್ಷದ ವತಿಯಿಂದ ಎಂದೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯಾವ ಯಾವ ಉಪ ಪಂಗಡಗಳಿಗೆ ಗಣತಿ ಮಾಡಿದ್ದೀರೋ ಗೊತ್ತಿಲ್ಲ. ಜಾತಿ ಗಣತಿಗೆ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಸಿದ್ದರಾಮಣ್ಣ ಅವರೇ ನೀವು ಇತಿಹಾಸದ ಪುಟಗಳಲ್ಲಿ ಯಾವ ರೀತಿ ಉಳಿದುಕೊಳ್ಳಬೇಕು ಅಂತಾ ಇದ್ದೀರೋ ನಿಮಗೇ ಬಿಡುತ್ತೇವೆ. ನಿಮ್ಮ ನವದೆಹಲಿಯ ಡಮ್ಮಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಯಾಕೆ ಇದನ್ನು ಮುಂದೆ ತಂದಿದ್ದೀರಿ ಅಂತಾ ಗೊತ್ತಿಲ್ಲ. ನಿಮ್ಮ ವಕೀಲ ವೃತ್ತಿಗೆ ನೀವು ಪಾಲಿಸಬೇಕಿದ್ದ ತತ್ವಾದರ್ಶಗಳನ್ನು ನೀವು ಕಡೆಗಣಿಸಿದ್ದೀರಿ ಎಂದರು.

ನೀವು ಎಷ್ಟು ದಿನಗಳ ಕಾಲ ಸಿಎಂ ಆಗಿ ಮುಂದುವರಿಯಬೇಕು ಅಂತಾ ನಿಮ್ಮ ಪಕ್ಷದ ಚೌಕಟ್ಟಿನಲ್ಲಿ ನಿಮಗೆ ಬಿಟ್ಟಿದ್ದು. ಗಣತಿ ಎಚ್ಟರ ಮಟ್ಟಿಗೆ ವೈಜ್ಞಾನಿಕವಾಗಿ ಆಗಿದೆ ಎಂದು ಪಕ್ಷಾತೀತವಾಗಿ ಚರ್ಚೆಯಾಗುತ್ತಿದೆ. ಸಮೀಕ್ಷೆಗೆ ತೆರಳಿದ್ದ ಶಿಕ್ಷಕರು ಹೇಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನುವುದನ್ನು ಬಹಿರಂಗ ಮಾಡಬೇಕಿದೆ. 54 ಪ್ರಶ್ನಾವಳಿಗಳಲ್ಲಿ ಎಷ್ಟಕ್ಕೆ ಜನ ನೇರ ಉತ್ತರ ಕೊಟ್ಟಿದ್ದಾರೆ? . ಇದು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಗೊಳಪಟ್ಟಿದೆಯೋ ಅಥವಾ ಸಮೀಕ್ಷಕರ ವಿವೇಚನೆಯಿಂದ ರಚನೆಯಾದ ವರದಿಯೋ ಎನ್ನುವುದು ಬಹಿರಂಗವಾಗಬೇಕಿದೆ. ಕಾಂತರಾಜ್ ಅವರೂ ಈ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಹಿಂದುಳಿದ ಆಯೋಗದ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಈ ವಿಚಾರದಲ್ಲಿ ಕೊಟ್ಟ ಹೇಳಿಕೆ ವರದಿ ನೈಜತೆ ಬಗ್ಗೆ ಪ್ರಶ್ನೆ ಹುಟ್ಟಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದರು.

ಜನರ ತೆರಿಗೆ ಹಣದ ಬಳಕೆಗೆ ಸಮರ್ಪಕ ಉತ್ತರ ಸಿಗಬೇಕು. ಸೀಲ್ ಆಗಿದ್ದ ಪೆಟ್ಟಿಗೆಯಲ್ಲಿದ್ದ ದಾಖಲೆ ಏನಾಯ್ತು? . ಅದಕ್ಕೆ ರೆಕ್ಕೆ ಬಂದು ಹಾರಿ ಹೋಯಿತಾ?. ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾಡಿದ್ದಾರೆ. ಆದರೆ ಜಾತಿ ಜನಗಣತಿ ಮೂಲಕ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಇದಕ್ಕೆ ರಾಹುಲ್ ಗಾಂಧಿ ಪಶ್ಚಾತ್ತಾಪ ಯಾತ್ರೆ ‌ಮಾಡಬೇಕಾಗುತ್ತದೆ. ಯಾವುದೇ ಜಾತಿ, ಧರ್ಮದ ಬಗ್ಗೆ ಚರ್ಚೆ ಮಾಡಿದರೆ ಯಾರ ಹೊಟ್ಟೆಯೂ ತುಂಬಲ್ಲ. ನೀವು ಕೇವಲ ಮೂರು ವರ್ಷಗಳ ಕಾಲ ಮಾತ್ರ ಸಿಎಂ ಆಗಿರಲು ಸಾಧ್ಯ. ಮುಂದೇನು ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ.

ಜಾತಿಗಣತಿ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಸಮುದಾಯಗಳ ಸ್ವಾಮೀಜಿಗಳನ್ನು ಕೂರಿಸಿ ಅಂಕಿ ಅಂಶ ಬಿಡುಗಡೆ ಮಾಡಬೇಕಿತ್ತು. ಈ ಜಾತಿಗಣತಿ ಮೂಲಕ ಏನು ಮಾಡಲು ಹೊರಟ್ಟಿದ್ದೀರಾ ಸಿದ್ದರಾಮಯ್ಯ ಅವರೇ. ಈಗ ಬಿಡುಗಡೆ ಮಾಡಿರುವ ಬುಕ್ ನೋಡಿದರೆ ಪಾಪಾ ಸಚಿವರಿಗೂ ಮಾತಾಡಲು ಆಗಲ್ಲ. ಬಡವರನ್ನು ಗುರುತಿಸಿ ಸರ್ಕಾರದ ಸೌಲಭ್ಯ ಕೊಡಿ ಅಬ್ಬಬ್ಬಾ ಅಂದರೆ 3 ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರಬಹುದು‌ ಅಷ್ಟೇ. ಮುಂದೆ ಏನು ಆಗಬಹುದು ಹೇಳಿ .ಸಿದ್ದರಾಮಯ್ಯ ಅವರೇ ಮಾಡಿರುವ ಜನಪರ ಸಾಧನೆ ತೋರಿಸಿ. 16 ಬಜೆಟ್ ಮಂಡನೆ ಮಾಡಿದ್ದು ನಿಮ್ಮ ಸಾಧನೆಯೇ?. ಸಾಲ ಮಾಡಿ ದೊಡ್ಡ ಗಾತ್ರದ ಬಜೆಟ್ ಅಂತ ಹೇಳಲು ನೀವೇ ಬೇಕಾ?. ನಿಮ್ಮ ಮಕ್ಕಳು, ನಮ್ಮ ಮಕ್ಕಳು, ಕಾಕಾ ಪಾಟೀಲ್, ಮಹದೇವಪ್ಪನ ಮಕ್ಕಳ ತಲೆ ಮೇಲೆ ಮೇಲೂ ಸಾಲ ಇದೆ‌. ನಿಮಗೆ ಬುದ್ದಿ ಹೇಳುವಷ್ಟು ದೊಡ್ಡವರು ನಾವಲ್ಲ. ಯುವಕರಿಗೆ ಅವಕಾಶ ಸಿಕ್ಕಾಗ ನಾವು ಮಾತಾಡುತ್ತೇವೆ. ಜಾತಿಗಣತಿ ವರದಿ ಉದ್ದೇಶ ಏನು?. ಇದರ ಹಿಡನ್ ಅಜೆಂಡಾ ಏನು? . ಎಷ್ಟು ವ್ಯವಸ್ಥಿತವಾಗಿ ಸಂಚು ಮಾಡಿದ್ದೀರಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನೆಸಿದ್ದಾರೆ.

ಜಾತಿ ಗಣತಿ ಮೇ 2ರ ಕ್ಯಾಬಿನೆಟ್ ನಲ್ಲೂ ತೀರ್ಮಾನ ಆಗುವುದು ಡೌಟ್. ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲು ಆಗಿಲ್ಲ ಅಂದರೆ ಹೇಗೆ?. ಯಾರೋ ಅಮಾಯಕರ ಕೈಯಲ್ಲಿ ಪೆನ್, ಪೇಪರ್ ಕೊಟ್ಟು ವರದಿ ಬರೆಸಿದ್ದೀರಾ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಪೆನ್, ಪೇಪರ್ ಕೇಳಿದ್ದೀರಿ, ಕೊಟ್ಟಿದ್ದಾರೆ.ನೀವು ಯಾವುದಕ್ಕೆ ಉಪಯೋಗ ಮಾಡುತ್ತಿದ್ದೀರಾ. ನಿಮ್ಮ ಆತ್ಮಸಾಕ್ಷಿಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ. ಶಿವಕುಮಾರ್ ಅವರೇ. ಸಮಾಜದ ಪರವಾಗಿ ಪೆನ್, ಪೇಪರ್ ಇಟ್ಟುಕೊಳ್ಳಿ. ಕೊಟ್ಟಿರುವ ಪೆನ್, ಪೇಪರ್  ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ ಡಿ.ಕೆ. ಶಿವಕುಮಾರ್ ಅವರೇ. ಮೊನ್ನೆ ಖಾಲಿ‌ ಸಿಲಿಂಡರ್ ಎತ್ತಿಕೊಂಡು ಫೋಸ್ ಕೊಡ್ತೀರಾ. ಖಾಲಿ ಸಿಲಿಂಡರ್ ಎತ್ತಲು ನೀವೇ ಬೇಕಾ?.ಭಾರವನ್ನು ಜನರ ಮೇಲೆ ಹಾಕಿರುವುದು ನೀವು.ಒಳ್ಳೆಯ ಪರ್ಫಾಮೆನ್ಸ್  ಕಣ್ರೀ ನಿಮ್ದು. ಈ ಸರ್ವೆ ಯಾವ ಆಧಾರದಲ್ಲಿ ಮಾಡಿದ್ದಾರೆ ಅಂತಾ ಅಧ್ಯಯನ ಆಗಬೇಕು. ವರದಿ ಪುನರ್ ಪರಿಶೀಲನೆ ಆಗಬೇಕು. ರಾಜ್ಯದಲ್ಲಿ ಬುದ್ದಿವಂತರು ಇದ್ದಾರೆ, ಸಾರ್ವಜನಿಕವಾಗಿ ವರದಿ ಬಿಡುಗಡೆ ಮಾಡಿ. ಜಾತಿಗಣತಿ ವರದಿ ಬಿಡುಗಡೆ ಮಾಡಿ ಟೆಸ್ಟ್ ರನ್ ಮಾಡಿದರು. ಬೆಂಕಿ ಹತ್ತಿಕೊಂಡಿದ್ದಕ್ಕೆ ಈಗ ಹಿಂದೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.