ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಜೆಪಿ 27 ವರ್ಷಗಳ ಬಳಿಕ ಐತಿಹಾಸಿಕ ಜಯ ಗಳಿಸಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಗೆ ಶೂನ್ಯ ಸಂಪಾದನೆ.ಕಾಂಗ್ರೆಸ್ ಖಾತೆ ತೆರೆದಿಲ್ಲ.ಆದರೆ ಕಾಂಗ್ರೆಸ್ ಕ್ಯಾತೆ ತೆಗೆಯದೇ ಬಿಡಲ್ಲ.ಕಾಂಗ್ರೆಸ್ ಇನ್ನು ಮುಂದೆ ಇವಿಎಂಗಳ ಮೇಲೆ ಮಾತಾಡುವುದು ಬಿಡಬೇಕು.ರಾಹುಲ್ ಗಾಂಧಿಗೆ ಬರ್ಮುಡಾ ಬಿಟ್ಟು ಬೇರೇನೂ ಉಳಿದಿಲ್ಲ.ರಾಹುಲ್ ಗಾಂಧಿ ನಿವೃತ್ತಿ ತೆಗೆದುಕೊಳ್ಳಲಿ.ರಾಹುಲ್ ಗಾಂಧಿ ನಿವೃತ್ತಿ ತೆಗೆದುಕೊಂಡರೆ ಎಲ್ಲವೂ ಚೆನ್ನಾಗಿ ಆಗುತ್ತದೆ ಎಂದಿದ್ದಾರೆ.
ವಿಧಾನ ಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ದೆಹಲಿ ಫಲಿತಾಂಶ ಇಡೀ ದೇಶಕ್ಕೇ ಒಂದು ಸಂದೇಶ.ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳು.ಈ ಬಾರಿಯ ಕೇಂದ್ರ ಬಜೆಟ್ ದೆಹಲಿ ಜನರು ಮೆಚ್ಚಿದ್ದಾರೆ.ಕೇಜ್ರಿವಾಲ್ ವ್ಯಾಗನಾರ್ ನಲ್ಲಿ ಬಂದಿದ್ದರು. ಈಗ ಅವರ ಬಳಿ ವ್ಯಾಗನಾರ್ ಇಲ್ಲ, ಅವರಿಗೆ ಕೆಮ್ಮೂ ಇಲ್ಲ.ಡಿ.ಕೆ. ಶಿವಕುಮಾರ್ ಗ್ಯಾರಂಟಿ ದೆಹಲಿಯಲ್ಲಿ ತೋಪಾಗಿದೆ.ತಾವು ಗ್ಯಾರಂಟಿಯ ಚಾಂಪಿಯನ್, ಗ್ಯಾರಂಟಿಯ ಅಂಬಾಸಡರ್ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದರು.ಯಾವ ದೇಶಕ್ಕೆ ಈಗ ಡಿ.ಕೆ. ಶಿವಕುಮಾರ್ ಬ್ರಾಂಡ್ ಅಂಬಾಸಡರ್ ಆಗಿ ಹೋಗುತ್ತಾರೋ ಗೊತ್ತಿಲ್ಲ.ಕೇಜ್ರಿವಾಲ್ ರನ್ನೇ ಗೆಲ್ಲಿಸಲು ಗ್ಯಾರಂಟಿ ಗಳಿಂದ ಆಗಿಲ್ಲ.ಗ್ಯಾರಂಟಿಗಳು ಕಾಂಗ್ರೆಸ್ ಗೆ ರಾಜ್ಯದಲ್ಲಿ ಯಾವ ಗತಿ ತರುತ್ತದೋ ಗೊತ್ತಿಲ್ಲ ಎಂದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಮಹಾರಾಷ್ಟ್ರ, ಹರಿಯಾಣಗಳ ಫಲಿತಾಂಶ ಬಿಜೆಪಿ ಪರ ಬಂತು.ಈಗ ದೆಹಲಿ ಫಲಿತಾಂಶದಲ್ಲಿ 27 ವರ್ಷಗಳ ದೆಹಲಿ ಗದ್ದುಗೆ ಏರಿದೆ.ಗೆಲುವು ಸ್ವಾಭಾವಿಕ ಪ್ರೇರಣೆ ಕೊಡುತ್ತದೆ, ಇದೂ ಕೊಟ್ಟಿದೆ.ಮುಂದೆ ಬಿಹಾರದಲ್ಲೂ ಎನ್ಡಿಎ ಗೆಲ್ಲುವ ವಿಶ್ವಾಸ ಮೂಡಿದೆ.ಕೇಜ್ರಿವಾಲ್ ಸುಳ್ಳಿನ ಮುಖವಾಡ ಕಳಚಿ ಬಿದ್ದಿದೆ.ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳುವ ಅಗತ್ಯ ಇದೆ.ಕಾಂಗ್ರೆಸ್ ಗೆ ಜನ ಒಪ್ಪುವ ನಾಯಕತ್ವ ಇಲ್ಲ.ಅವರಿಗೆ ಯಾರ ಬಗ್ಗೆ ನಿಯತ್ತಿದೆ?.ವಿದೇಶಗಳಲ್ಲಿ ದೇಶಕ್ಕೆ, ಸನಾತನ ಧರ್ಮಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ.ಕಾಂಗ್ರೆಸ್ ವಿಸರ್ಜನೆಗೆ ಇದು ಸಕಾಲ.ರಾಹುಲ್ ಗಾಂಧಿ ಸಂವಿಧಾನ ಸೋತಿದೆ, ಅಂಬೇಡ್ಕರ್ ಸಂವಿಧಾನ ಗೆದ್ದಿದೆ, ಸರ್ವಾಧಿಕಾರ ಸೋತಿದೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ದೆಹಲಿಯಲ್ಲಿ 30 ವರ್ಷದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಅಣ್ಣಾ ಹಜಾರೆ ಭ್ರಷ್ಟಾಚಾರ ವಿರುದ್ಧ ಬೆಂಬಲ ಕೊಡುವ ಮೂಲಕ ಆಪ್ ಗೆ ಬೆಂಬಲ ಕೊಟ್ಟಿದ್ದರು.ಆದರೆ ಆಪ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಬಿಜೆಪಿ, ಮೋದಿ ಕಾರ್ಯಕ್ರಮಗಳಿಗೆ ಜನ ಸ್ಪಷ್ಟ ಬೆಂಬಲ ಕೊಟ್ಟಿದ್ದಾರೆ.ಆಪ್ ಆಗ ಆಂದೋಲನ ಮೂಲಕ ದೊಡ್ಡ ವಿಶ್ವಾಸ ಹುಟ್ಟಿಸಿತ್ತು.ಆದರೆ ಸುಳ್ಳು, ಭ್ರಷ್ಟಾಚಾರದಲ್ಲಿ ಅವರು ಮುಳುಗಿದ್ದರು.ಅವರ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ.ದೆಹಲಿಯಲ್ಲಿ ಮೂಲ ಸೌಕರ್ಯ ಹಳ್ಳ ಹಿಡಿದಿತ್ತು.ದೆಹಲಿ ಬಿಜೆಪಿಯಲ್ಲಿ ಹಲವು ಪ್ರಮುಖ ನಾಯಕರಿದ್ದಾರೆ.ನನ್ನ ಪ್ರಕಾರ ಬಡವರು, ಮಧ್ಯಮ ವರ್ಗ, ವ್ಯಾಪಾರಸ್ಥರು, ರೈತರು, ಗ್ರಾಮೀಣ ಜನ, ಹರಿಯಾಣದ ಜಾಟರು, ಸಿಖ್, ಪಂಜಾಬಿ ಮಾತಾಡುವವರು, ಉತ್ತರ ಪ್ರದೇಶ, ಬಿಹಾರದ ವಲಸೆಗಾರರು ಬಿಜೆಪಿ ಕೈ ಹಿಡಿದ್ದಾರೆ.ರಾಷ್ಟ್ರಿಯತೆಯಲ್ಲಿ ನಂಬಿಕೆ ಇರುವ ಅಲ್ಪಸಂಖ್ಯಾತರೂ ಬಿಜೆಪಿ ಕೈ ಹಿಡಿದಿದ್ದಾರೆ.ಈ ಚುನಾವಣೆಯ ಒಟ್ಟು ಪರಿಣಾಮ ಬಿಜೆಪಿ ಶಕ್ತಿಶಾಲಿ ಆ ಭಾಗದಲ್ಲಿ ಆಗಿದೆ.ಇನ್ನೊಂದು ಕಡೆ ಇಂಡಿ ಕೂಟದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗಲಿದೆ.ಇಂಡಿ ಕೂಟದಲ್ಲಿ ನಾಯಕತ್ವ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ ಎಂದರು.
ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿ ದೆಹಲಿ ಫಲಿತಾಂಶ ನಮ್ಮ ಪಕ್ಷಕ್ಕೆ ಬಹಳ ಸಂತೋಷ ತಂದಿದೆ.ದೆಹಲಿಯಲ್ಲಿ ಬಿಜೆಪಿಯನ್ನು ಕೈ ಹಿಡಿಯುತ್ತಿಲ್ಲ ಎಂಬ ಮಾತಿತ್ತು.ಆದರೆ ಈಗ 27 ವರ್ಷಗಳ ಬಳಿಕ ಮತ್ತೆ ಬಿಜೆಪಿಯನ್ನು ನಂಬಿದ್ದಾರೆ.ಮೋದಿ ನಾಯಕತ್ವವನ್ನು ನಂಬಿ ಜನ ಆಶೀರ್ವಾದ ಮಾಡಿದ್ದಾರೆ.ಎಎಪಿ ಯಲ್ಲಿನ ಭ್ರಷ್ಟಾಚಾರ, ಕೇಜ್ರಿವಾಲ್ ಜೈಲಿಗೆ ಹೋಗಿದ್ದು ಆಪ್ ಸೋಲಿಗೆ ಕಾರಣವಾಯಿತು. ಎಂದರು.











