ಮನೆ Latest News ಉತ್ತರಕನ್ನಡ ಹಾಗೂ ರಾಯಚೂರಿನಲ್ಲಿ ಭೀಕರ ಅಪಘಾತಕ್ಕೆ 14 ಮಂದಿ ಬಲಿ: ಪರಿಹಾರ ಘೋಷಿಸಿದ ಸಿಎಂ, ಸಂತಾಪ...

ಉತ್ತರಕನ್ನಡ ಹಾಗೂ ರಾಯಚೂರಿನಲ್ಲಿ ಭೀಕರ ಅಪಘಾತಕ್ಕೆ 14 ಮಂದಿ ಬಲಿ: ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಕೇಂದ್ರ ಸಚಿವ ಹೆಚ್ಡಿಕೆ

0

ಬೆಂಗಳೂರು; ಇಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ತರಕಾರಿ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿದ್ದರೆ ಅತ್ತ ರಾಯಚೂರಿನಲ್ಲಿ ಟೈರ್ ಸ್ಫೋಟಗೊಂಡು ವಾಹನ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4 ಜನ ಸಾವನ್ನಪ್ಪಿದ್ದಾರೆ.

ಇನ್ನು ಈ ಎರಡು  ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಿಎಂ‌ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ ರೂ.3 ಲಕ್ಷ ಪರಿಹಾರ ನೀಡಲಾಗುವುದು. ಜೊತೆಗೆ ಅಪಘಾತದಲ್ಲಿ ಗಾಯಗೊಂಡವರ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ.  ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ಘಟನೆ ಬಗ್ಗೆ ಕೇಂದ್ರ ಸಚಿವ ಹೆಚ್ಡಿಕೆ ಟ್ವೀಟ್ ಮಾಡಿದ್ದು ರಾಜ್ಯದಲ್ಲಿ ಸಂಭವಿಸಿರುವ ಎರಡು ಭೀಕರ ಅಪಘಾತಗಳಲ್ಲಿ 14 ಜನ ಸಾವನ್ನಪ್ಪಿರುವ ವಾರ್ತೆ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಅರೆಬೈಲ್ ಬಳಿ ಸಂಭವಿಸಿದ ಅಪಘಾತದಲ್ಲಿ 10 ಜನರು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಬಳಿ ರಸ್ತೆ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ದುರ್ಮರಣಕ್ಕೆ ತುತ್ತಾಗಿರುವುದು ನನಗೆ ಅತೀವ ನೋವುಂಟು ಮಾಡಿದೆ.

ಮೃತರ ಆತ್ಮಗಳಿಗೆ ಚಿರಶಾಂತಿ ಸಿಗಲಿ, ದುಃಖತಪ್ತ ಕುಟುಂಬಗಳಿಗೆ ತಮ್ಮವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಅಸಮರ್ಪಕ ರಸ್ತೆ ಮೂಲಸೌಕರ್ಯ, ವಾಹನಗಳ ಆತುರದ ಚಾಲನೆ, ನಿದ್ದೆಗಣ್ಣಿನಲ್ಲಿ ವಾಹನ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ಇತ್ಯಾದಿ ಕಾರಣಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಕೊಟ್ಟು ಅಮೂಲ್ಯ ಜೀವಗಳ ಹರಣ ತಪ್ಪಿಸಬೇಕು ಎಂದಿದ್ದಾರೆ.