ನವದೆಹಲಿ; ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆಹರೂ ಅವರ ಬಳಿಕ ಮೂರನೇ ಬಾರಿಗೆ ದೇಶದ ಪ್ರಧಾನಿ ಆಗುತ್ತಿರುವ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದು. ಮೋದಿ ಪ್ರಮಾಣ ವಚನ ಹಿನ್ನೆಲೆ ಇಡೀ ವಿಶ್ವದ ಚಿತ್ತ ಇಂದು ಭಾರತದತ್ತ ನೆಟ್ಟಿದೆ.
ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ದೇಶ ವಿದೇಶದ ಹಲವು ಗಣ್ಯರಿಗೆ ಆಹ್ವಾನವನ್ನು ನೀಡಲಾಗಿದೆ. ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಇಂದು ಸಾಕ್ಷಿಯಾಗಲಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ, ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫಿಫ್ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಹೊಸ ಕ್ಯಾಬಿನೆಟ್ ಮಂತ್ರಿಗಳು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಸಂಪುಟದ ಭಾಗವಾಗಿ 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸಿದ ನಂತರ, ಗೃಹ, ರಕ್ಷಣಾ, ಹಣಕಾಸು, ವಿದೇಶಾಂಗ ವ್ಯವಹಾರಗಳು ಮತ್ತು ನಾಗರಿಕ ವಿಮಾನಯಾನ ಸೇರಿದಂತೆ ಪ್ರಮುಖ ಖಾತೆಗಳ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.ಅದರಲ್ಲಿ ಕರ್ನಾಟಕದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಸೇರಿದ್ದಾರೆ ಎನ್ನಲಾಗಿದೆ.ಈಗಾಗಲೇ ಕುಮಾರಸ್ವಾಮಿ ಅವರು ಕೂಡ ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಮುಂಜುನಾಥ್ ಅವರು ಹೇಳಿದ್ದಾರೆ. ಕುಮಾರಸ್ವಾಮಿ ಸಚಿವರಾಗುತ್ತಿರುವುದು ಖುಷಿ ತಂದಿದೆ. ಜೆಡಿಎಸ್ ನಾಯಕರು, ಕಾರ್ಯಕರ್ತರಿಗೆ ಇದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಡಿಕೆಗೆ ಕೃಷಿ ಖಾತೆ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಯಾವ ಖಾತೆ ಸಿಗಲಿದೆ ಎಂಬ ಬಗ್ಗೆ ಸಂಜೆಯೇ ಗೊತ್ತಾಗಲಿದೆ.
ಇತ್ತ ಇಂದು ಸಂಜೆ 7-15ಕ್ಕೆ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ನರೇಂದ್ರ ಮೋದಿ ಅವರು ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಮೋದಿಗೆ ಬಿಜೆಪಿ ಮುಖಂಡ ಹರ್ದೀಪ್ ಸಿಂಗ್ ಪುರಿ ಸಾಥ್ ನೀಡಿದ್ರು. ಅಲ್ಲಿಂದ ನೇರವಾಗಿ ಸದೈವ್ ಅಟಲ್ ಸ್ಮಾರಕಕ್ಕೆ ಆಗಮಿಸಿದ ಮೋದಿ ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು. 2019 ರಲ್ಲಿ ತಮ್ಮ ಪ್ರಮಾಣವಚನ ಸಮಾರಂಭಕ್ಕೂ ಮುನ್ನ ನರೇಂದ್ರ ಮೋದಿ ಅವರು “ಸದೈವ್ ಅಟಲ್” ಮತ್ತು ರಾಜ್ ಘಾಟ್ ಗೆ ಭೇಟಿ ನೀಡಿ ದೇಶದ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದರು.
ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸುಮಾರು 9,000 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಈ ನಡುವೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಎನ್ ಡಿಎ ನಾಯಕರಿಗೆ ತಮ್ಮ ನಿವಾಸದಲ್ಲಿ ಚಹಾ ಕೂಟ ಏರ್ಪಡಿಸಿದ್ದಾರೆ. ಈ ಚಹಾಕೂಟದಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತೀಶ್ ಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಎದುರು ನೋಡುತ್ತಿದೆ