ಬೆಂಗಳೂರು;ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ದಸರಾ ಹಬ್ಬದ ಶುಭಾಶಯಯಗಳನ್ನು ತಿಳಿಸಿದ್ದಾರೆ. ರಾಜ್ಯದ ಜನತೆಗೆ ಮತ್ತೊಮ್ಮೆ ದಸರೆಯ ಶುಭಾಶಯಗಳು. ನಾಳೆ ಮೈಸೂರಿನಲ್ಲಿ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಸಾಗಲಿದೆ. ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದಿದ್ದಾರೆ.
ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ, ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪಸಮಿತಿಗಿರುತ್ತದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಹುಬ್ಬಳ್ಳಿ ಗಲಭೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ. ಬಿಜೆಪಿಯವರು ಕೇವಲ ಸುಳ್ಳು ವಿಚಾರಗಳ ಆಧರಿಸಿಯೇ ಹೋರಾಟ ಮಾಡುತ್ತಾರೆ. ಸತ್ಯದ ಪರವಾಗಿ ಅವರ ಹೋರಾಟ ಎಂದಿಗೂ ಕಾಣಸಿಗುವುದಿಲ್ಲ ಎಂದಿದ್ದೆ.
ಇನ್ನು ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ದಸರಾ ಹಿನ್ನೆಲೆ ಮೈಸೂರು ನಗರದಲ್ಲಿ ಸುತ್ತಾಡಿದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಗಿರುವ ಸಿಎ ಸಿದ್ದರಾಮಯ್ಯ ನನ್ನೂರ ಐತಿಹಾಸಿಕ ದಸರಾದ ದೀಪಾಲಂಕಾರವನ್ನು ತೆರೆದ ಬಸ್ಸಿನಲ್ಲಿ ಪ್ರಯಾಣಿಸುತ್ತಾ ವೀಕ್ಷಿಸಿದೆ. ಬಾಲ್ಯದ ದಿನಗಳಿಂದ ಹಿಡಿದು ಇಂದಿನ ವರೆಗೂ ಪ್ರತಿ ಬಾರಿ ಮೈಸೂರು ದಸರಾದಲ್ಲಿ ನಾನು ಪಾಲ್ಗೊಂಡಾಗಲೂ ಅದೇ ಖುಷಿ, ಅದೇ ಸೊಗಸು. ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ದಸರೆಯ ಮೂಲಕ ತಲೆಮಾರುಗಳ ವರೆಗೆ ಮುನ್ನಡೆಸಿಕೊಂಡು ಹೋಗುತ್ತಿದೆ. ವರ್ಷಗಳು ಉರುಳಿದಂತೆ ಧಾರ್ಮಿಕ ಆಚರಣೆಯೊಂದು ಎಲ್ಲರನ್ನೂ ಒಳಗೊಂಡ ಸಾಂಸ್ಕೃತಿಕ ಆಚರಣೆಯಾಗಿ, ಜನರ ಉತ್ಸವದಂತಾಗುತ್ತಿರುವುದು ಮತ್ತಷ್ಟು ಖುಷಿಯ ವಿಚಾರ. ದಸರಾದ ಯಶಸ್ಸಿಗೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.