ಮನೆ Latest News ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್ ಗರಂ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್ ಗರಂ

0

 

ಬೆಂಗಳೂರು; ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್ ಗರಂ ಆಗಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲಿಯವರೆಗೂ ಮಾಧ್ಯಮದವರನ್ನು ವಿಧಾನಸೌಧದ ಎಲ್ಲಾ ಮಹಡಿಗೂ ಬಿಡುತ್ತಿದ್ದರು. ಸಮಿತಿ ಸಭೆಗಳ ವೇಳೆ ಸಂದರ್ಶನ ಮಾಡುತ್ತಿದ್ದರು. ಮೊನ್ನೆ ವಿಧಾನಸೌಧದಲ್ಲಿ ಸಚಿವ ಭೈರತಿ ಸುರೇಶ್ ಕಚೇರಿಯಲ್ಲಿ ನಡೆದ ಘಟನೆ ಪೊಲೀಸರ ವೈಫಲ್ಯತೆಯಿಂದ ಆಗಿದ್ದು. ಯಾರೋ ಷಡ್ಯಂತ್ರ ಮಾಡಿ ಅಥವಾ ಆಕಸ್ಮಿಕವಾಗಿ ಆದ ಘಟನೆ ಅದು. ಅದಕ್ಕೆ ಮಾಧ್ಯಮದವರಿಗೆ ಯಾಕೆ ಕಡಿವಾಣ ಹಾಕಬೇಕು?. ಇದು ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯದ ಮೇಲೆ ಮಾಡಿರುವ ದಾಳಿ. ಇದನ್ನು ನೋಡಿದರೆ ತುರ್ತು ಪರಿಸ್ಥಿತಿ ನೆನಪಾಗುತ್ತಿದೆ. ಇವತ್ತು ಕೂಡ ಅದೇ ಆಗುತ್ತಿದೆ. ಭದ್ರತಾ ಲೋಪ ಏನಿದ್ದರೂ ಸರಿ ಮಾಡಿಕೊಂಡು ತಕ್ಷಣ ಸರ್ಕಾರ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದಿದ್ದಾರೆ.

ಜಿಬಿಎ ಕಸದ ಲಾರಿಗಳನ್ನು ದೊಡ್ಡಬಳ್ಳಾಪುರಕ್ಕೆ ಕಳಿಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರ ಬಂದ ಮೇಲೆ ಕಸ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ.ಹೈಟೆಕ್ ಟೆಕ್ನಾಲಜಿ ಮಾಡುತ್ತೇವೆ, ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಅಂತ ಹೇಳಿ ಏನೂ ಮಾಡಿಲ್ಲ. ಮಿಟ್ಟಗಾನಹಳ್ಳಿ,  ದೊಡ್ಡಬಳ್ಳಾಪುರ ಖಾಸಗಿ ಕಸ ವಿಲೇವಾರಿ ಘಟಕಗಳನ್ನು ಬಿಟ್ಟು ಹೊಸದಾಗಿ ಘಟಕಗಳನ್ನು ಮಾಡಿಲ್ಲ. ಅಲ್ಲಿ‌ ಲ್ಯಾಂಡ್ ಫಿಲ್‌ ಮಾಡುತ್ತಿದ್ದಾರೆ, ಸಾಮರ್ಥ್ಯ ಮೀರಿ ಕಸ ಸಂಗ್ರಹ ಮಾಡುತ್ತಿದ್ದಾರೆ. ಎಂಎಸ್‌ಜಿಪಿಯಲ್ಲಿ ಕಸ ಸಂಗ್ರಹ ಮಾಡುತ್ತಿದ್ದಾರೆ ಹೊರತು, ವೈಜ್ಞಾನಿಕ ಸಂಸ್ಕರಣೆ ಮಾಡುತ್ತಿಲ್ಲ. ಸರ್ಕಾರದ ವೈಫಲ್ಯವೇ ಇದಕ್ಕೆ‌ ಕಾರಣ. ಸ್ಥಳೀಯ ಶಾಸಕರು ಸಾಕಷ್ಟು ವಿರೋಧ ಮಾಡಿದ್ದಾರೆ. ಅಲ್ಲಿ ಕಸ ರಾಶಿ ರಾಶಿ ಸುರಿಯುತ್ತಿದ್ದಾರೆ, ಲಿಚೆಟ್ ಭೂಮಿಗೆ ಹೋಗುತ್ತಿದೆ. ಅರ್ಕಾವತಿ, ಕುಮುದ್ವತಿ ಜಲಾನಯನ‌ ಪ್ರದೇಶಗಳು ಅಲ್ಲೇ ಬರುತ್ತವೆ. ಎತ್ತಿನ ಹೊಳೆ ಯೋಜನೆ ಬರುತ್ತಿದೆ, ಇದಕ್ಕೆಲ್ಲಾ ಸಮಸ್ಯೆ ಆಗುತ್ತದೆ . ಕಸದ‌ ಗಲಾಟೆ ಆದಾಗ ಮಾತ್ರ ಈ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಕಸ ವೈಜ್ಞಾನಿಕ ಸಂಸ್ಕರಣೆ ಮಾಡಲಿ. ಸಿಎಂ, ಡಿಸಿಎಂ ಹೇಳಿಕೆ ಅಷ್ಟೇ ಕೊಡುತ್ತಾರೆ. ಹೇಳಿಕೆಗೆ ತಕ್ಕಂತೆ ಹೊಸ ಕಸದ ಘಟಕತಂದಿಲ್ಲ, ಇದು ಅವರ ವೈಫಲ್ಯ ಎಂದು ಆರೋಪಿಸಿದ್ದಾರೆ.

ಬಿಜೆಪಿ-ಜೆಡಿಎಸ್ ನಡುವೆ ಮುಂದಿನ ಸಿಎಂ ಬಗ್ಗೆ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾವೇನೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಜಿಬಿಎ, ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಇವೆ. ವಿಧಾನಸಭೆಗೆ ಇನ್ನೂ ಎರಡು ವರ್ಷ ಇದೆ. ನಮ್ಮ ಹೈಕಮಾಂಡ್ ಏನು ನಿರ್ಧಾರ ಮಾಡುತ್ತಾರೋ ಅದರಂತೆ ನಡೆಯುತ್ತೇವೆ ಮುಂದಿನ ಸಿಎಂ ಚರ್ಚೆ ಹುಟ್ಟು ಹಾಕಿದ್ದಾರೆ. ಆ ತರಹ ಹೇಳಿಕೆಗಳನ್ನು ಅವರು ಕೊಡಬಾರದು. ಅದರ ಚರ್ಚೆ ಇಲ್ಲಿಗೇ ನಿಲ್ಲಿಸಬೇಕು.ನಾವು ಮಗು ಹುಟ್ಟುವ ಮುನ್ನ ಕುಲಾವಿ ಹೊಲಿಸುವ ಕೆಲಸ ಮಾಡಲ್ಲ ಎಂದ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಡಿಸಿಎಂ ಮತ್ತು ಸಚಿವರ ಭೇಟಿ ವಿಚಾರದ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಜಿಬಿಎ ಚುನಾವಣೆ ನಡೆಸುವ ಮನಸ್ಸು ಇಲ್ಲ. ನಿನ್ನೆ ದೊಡ್ಡ ದೊಡ್ಡ ಸಚಿವರೇ ಚುನಾವಣಾ ಆಯೋಗಕ್ಕೆ ಹೋಗಿದ್ದರು. ಮತದಾರರ ಪಟ್ಟಿ ಸರಿಯಾಗಿಲ್ಲ, ಪರಿಷ್ಕರಣೆ ಮಾಡಬೇಕು ಅಂತ ಹೋಗಿದ್ದಾರೆ. ಅಂದರೆ ಅವರದ್ದೇ ಚುನಾವಣಾ ಆಯೋಗದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದರ್ಥ. ಜಿಬಿಎ ಚುನಾವಣೆ ಮಾಡುವ ಇರಾದೆ ಇಲ್ಲ ಅಂತ ಅರ್ಥ. ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಗೆ ಹಿನ್ನಡೆ ಆಗುತ್ತದೆ. ಹಾಗಾಗಿ ಈಗ ಜಿಬಿಎ ಚುನಾವಣೆ ಮಾಡುವ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.