ಬೆಳಗಾವಿ; ನಾವು ಕಲ್ಲು ಹೊಡೆಯುವ ಜನಾಂಗದವರಲ್ಲ ಎಂದು ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಪಂಚಮಸಾಲಿ ಹೋರಾಟಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಮಾತನಾಡಿದ ಅವರು ಅಧಿವೇಶನ ಹಾಳುಮಾಡಬಾರದು, ಹಾಗಾಗಿ ಆಹೋರಾತ್ರಿ ಧರಣಿ ಬೇಡ ಎಂದರು. ವಾಲ್ಮೀಕಿ ಹಗರಣ, ವಕ್ಪ್ ಆಸ್ತಿಯ ಬಗ್ಗೆ ಚರ್ಚೆಗೆ ರೆಡಿ ಇದ್ದೇವೆ. ಆದರೆ ಅಧ್ಯಕ್ಷರೇ ನೀವು ಓಕೆ, ಟಾಟಾ ಅನ್ನಬೇಡಿ ಎಂದಿದ್ದಾರೆ.
ಯಾವುದೇ ಮಂತ್ರಿಗಳು, ಅವರ ಇಲಾಖೆ ಬಿಟ್ಟು ಬೇರೆ ವಿಷಯಕ್ಕೆ ಬಾಯಿ ಹಾಕೋದು ಸಭ್ಯತೆ ಅಲ್ಲ. ವಿಷಯ ಬಿಟ್ಟು ನಾನು ಏನು ಪಾಕಿಸ್ತಾನದ ಬಗ್ಗೆ ಮಾತಾಡ್ತಿದ್ದನಾ..?. ನನ್ನ ಸುಮ್ಮನೆ ಬಿಟ್ಟು ಬಿಡಿ ನಾನು ಮಾತಾಡ್ತೀನಿ ಎಂದು ಸ್ಪೀಕರ್ ಪದೇ ಪದೇ ಓಕೆ ಮಾತಿಗೆ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ನಾವು ಕಲ್ಲು ಹೊಡೆಯುವ ಜನಾಂಗದವರಲ್ಲ. ರಾಯರೆಡ್ಡಿಯವರೇ ನೀವು ಶ್ರೀಮಂತರು ಇದ್ದೀರಿ ಸುಮ್ಮನೆ ಇರೀ. ಜೀಪ್ ಗಳು ಬೆಳಗಾವಿಗೆ ಪ್ರವೇಶ ಮಾಡಲ್ವಂತೆ. ಯಾರೀ ಡಿಸಿ..? ಯಾಕ್ರೀ ಅನುಮತಿ ಕೊಡಿಸಲ್ಲ. ಒಬ್ಬ ಐಪಿಎಸ್ ಅಧಿಕಾರಿ ಯೂನಿಫಾರಂ ಇಲ್ಲದೇ ಕೈಯಲ್ಲಿ ಲಾಠಿ ಹಿಡಿಯುತ್ತಾನಲ್ಲ. ನಿಮ್ಮ ಸಿಎಂ ವಿರುದ್ಧ ನಾವು ಇಲ್ಲ, ಅವ್ರು ರಾಜ್ಯದ ಮುಖ್ಯಮಂತ್ರಿ, ಅವ್ರು ನಿಮ್ಮ ಪಾರ್ಟಿ ಮುಖ್ಯಮಂತ್ರಿ ಅಲ್ಲ ಎಂದು ತಮ್ಮ ಮಾತಿಗೆ ಅಡ್ಡಿ ಬಂದ ಕಾಂಗ್ರೆಸ್ ಸದಸ್ಯರಿಗೆ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.
ಆ ಅಧಿಕಾರಿಗೆ ಮಾನ ಮರ್ಯಾದೆ ಇದೆಯೇನ್ರೀ..?. ಯಾರೋ ಫೋನ್ ಮಾಡಿದ್ರು ಅಂತಾ ಬರ್ತಾರಲ್ಲ. ಅಲ್ಲಿ ಹೇಯ್ ಲಾಠಿ ಚಾರ್ಜ್ ಮಾಡ್ರೋ ಅಂತಾನೆ. ಇದು ನನ್ನ ಬಳಿ ವೀಡಿಯೋ ಇದೆ. ಯಾವ ಅಯೋಗ್ಯ ನನ್ನ ಮಗ ಪಾಕಿಸ್ತಾನ ಜಿಂದಾಬಾದ್ ಕೂಗಿದ್ನೋ, ಇದೇ ಗೃಹ ಮಂತ್ರಿಗಳು ಕೂಗಿಲ್ಲ ಅಂದ್ರು. ಇವಾಗ ಪಂಚಮಸಾಲಿ ಕಲ್ಲು ಹೊಡೆದ್ರು ಅಂತಾರಾ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ಯತ್ನಾಳ್ ಆಕ್ರೋಶ. ಹೊರ ಹಾಕಿದ್ರು.
ನಾನಂತೂ ನನ್ನ ಜೀವನದಲ್ಲಿ ಪೊಲೀಸ್ ಅಧಿಕಾರಿಯಿಂದ ಹಣ ತಿಂದು ವರ್ಗಾವಣೆ ಮಾಡಿಲ್ಲ. ನಿನ್ನೆ ನಡೆದ ಘಟನೆ ಬರ್ಬರವಾಗಿರುವಂತದ್ದು. ಪೊಲೀಸರಿಗೆ ಏನು ಮನುಷ್ಯತ್ವ ಇಲ್ಲವಾ..? ರಕ್ತ ಬರೋ ರೀತಿಯಲ್ಲಿ ಹೊಡೆಯುತ್ತಾರಲ್ಲ. ಸಂಘಟನೆ ಮಾಡಿರೋ ನಮಗೆ ಹೊಡೀರಿ ಪೊಲೀಸರೇ. ನಾವು ಯಾರ ಮೀಸಲಾತಿಯನ್ನು ಕೇಳುತ್ತಿಲ್ಲ. ಅಂಬೇಡ್ಕರ್ ಬಗ್ಗೆ ನಾನು ತುಂಬಾ ಸದನದಲ್ಲಿ ಮಾತಾಡಿದ್ದೇನೆ. ಸಂವಿಧಾನಡಿಯಲ್ಲಿ ನಾವು ಕೇಳ್ತಿದ್ದೇವೆ. ಯಾರ ಮೀಸಲಾತಿ ಯನ್ನು ನಾವು ಕಸಿಯುತ್ತಿಲ್ಲ ಎಂದರು.
ಎಡಿಜಿಪಿ ಅಧಿಕಾರಿ ವಿರುದ್ಧ ಕ್ರಮ ತಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದು ಯತ್ನಾಳ್ ಎಚ್ಚರಿಕೆ ಕೊಟ್ರು. ಐ ಅಧಿಕಾರಿ ವಿರುದ್ಧ ನಮ್ಮ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.










