ಬೆಂಗಳೂರು; ಪ್ರಿಯಾಂಕ್ ಖರ್ಗೆ ಹೇಳಿದ್ದು ಆರ್ ಎಸ್ ಎಸ್ ಬ್ಯಾನ್ ಮಾಡಿ ಅಂತ ಅಲ್ಲ. ಅವರು ಹೇಳಿದ್ದು ಸಾರ್ವಜನಿಕ, ಸರ್ಕಾರಿ ವ್ಯವಸ್ಥೆಯಲ್ಲಿ ಇವರ ಕಾರ್ಯಕ್ರಮ ಬೇಡ ಅಂತ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಅವರ ಮನೆ,ಅವರ ಖಾಸಗಿ ಸ್ವತ್ತು,ಆವರಣಗಳಲ್ಲಿ ಮಾಡಿಕೊಳ್ಳಲಿ ಯಾರು ಬೇಡ ಅಂದ್ರು? . ಬಿಜೆಪಿಯವರು ಮೊದಲೇ ಸುಳ್ಳುಗಾರರು ಒಂದಕ್ಕೆ ಇನ್ನೊಂದು ಹೇಳಿಕೊಂಡು ಓಡಾಡ್ತಾರೆ ಅಷ್ಟೆ ಎಂದಿದ್ದಾರೆ.
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಮಾತನಾಡಿದ ಅವರು ಹೌದು ರಸ್ತೆಯಲ್ಲಿ ಗುಂಡಿಗಳಾದು ಸಹಜ.ಅದನ್ನ ನೋಡಿಕೊಳ್ಳೋದು ಮಹಾನಗರ ಪಾಲಿಕೆ ಕೆಲಸ. ಸಿಎಂ, ಡಿಸಿಎಂ, ನಿರ್ದೇಶನ ನೀಡಿದ ಮೇಲೆ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲೂ ಈ ಸಮಸ್ಯೆ ಎದುರಾಗಿತ್ತು. ಎಲ್ಲರ ಅವಧಿಯಲ್ಲೂ ಹೀಗಿರುತ್ತೆ. ಮಳೆ ಬಂದಾಗ ಈ ಸಮಸ್ಯೆ ಸಹಜ, ಇದನ್ನ ಜಾಗರೂಕತೆಯಿಂದ ನಮ್ಮವರು ನೋಡಿಕೊಳ್ಳಬೇಕಿತ್ತು. ಮೋಹನ್ ದಾಸ್ ಪೈ ಹಾಗೂ ಮಂಜುಂದಾರ್ ಅವರು ಮಾತ್ರ ಉಧ್ಯಮಿಗಳಲ್ಲ. ಬೇರೆಯವರೂ ಇದ್ದಾರೆ. ಇವರು ಜವಾಬ್ದಾರಿ ಇರೋ ಜನ.ಎಲ್ಲರ ತಪ್ಪನ್ನೂ ಹೇಳಬೇಕು. ಬರೀ ನಮ್ಮ ಸರ್ಕಾರದ ಬಗ್ಗೆ ಮಾತ್ರ ಮಾತನಾಡೋದು ಸರಿಯಲ್ಲ ಅಷ್ಟೆ ಎಂದು ತಿಳಿಸಿದ್ದಾರೆ.
ಪಕ್ಷ ಡ್ಯಾಮೇಜ್ ಆಗೋ ಥರಹದ ಹೇಳಿಕೆಯನ್ನ ನಮ್ಮ ಶಾಸಕರು ಕೊಡೋದು ಬೇಡ. ನಾಲ್ಕು ಗೋಡೆ ಮದ್ಯೆ ಆಗೋ ಮಾತುಕತೆಯನ್ನ ಹೊರಗೆ ಹೇಳಿದ್ದು ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಇದು ವಿಪಕ್ಷಗಳಿಗೆ ಮಾಧ್ಯಮಗಳಿಗೆ ಮಾತ್ರ ಆಹಾರ ಆಗಿದೆ. ನಾವೆಲ್ಲ ಚಿಕ್ಕವರಲ್ಲ, ಅನುಭವ ಇದ್ದವರು ಈ ರೀತಿ ನಡೆದುಕೊಳ್ಳೋದು ಸರಿಯಲ್ಲ. ಇದು ಪಕ್ಷಕ್ಕೆ ಹಾನಿಯಾಗೋ ವಿಚಾರ .ಹೈಕಮಾಂಡ್ ಇಂತಹ ಹೇಳಿಕೆಗಳಿಗೆ ಬ್ರೇಕ್ ಹಾಕಬೇಕಿತ್ತು. ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ ವಿಚಾರದ ಗೊಂದಲದ ಹೇಳಿಕೆಗಳಿಗೆ ರಾಮಲಿಂಗಾರೆಡ್ಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಪಕ್ಷೀಯರ ಗೊಂದಲಕಾರಿ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ ನಮ್ಮ ಸರ್ಕಾರ ಬಂದಾಗಲೇ ಸಿಎಂ ಕುರ್ಚಿ ಕುರಿತ ಚರ್ಚೆಗಳು ಶುರುವಾದ್ವು. ಇದೆಲ್ಲ ಅನಗತ್ಯ, ಐದುವರ್ಷವೋ ಎರಡೂವರೆ ವರ್ಷವೋ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಮಾಧ್ಯಮಗಳ ಬಳಿ ಹೋಗಿ ಯಾಕೆ ಮಾತಾಡಬೇಕು ಕೆಲವರು. ಬಿಜೆಪಿಯವರೂ ಗೊಂದಲ ಮೂಡಿಸುವ ಕೆಲಸ ಮಾಡ್ತಿದ್ದಾರೆ. ನಮ್ಮವರು ಕೆಲವರು ಸಿಎಂ ಪದವಿ ಬಗ್ಗೆ, ಗ್ಯಾರಂಟಿಗಳ ಬಗ್ಗೆ ಮಾತಾಡಿ ಪಕ್ಷಕ್ಕೆ ಡ್ಯಾಮೇಜ್ ಆಯ್ತು. ಯತೀಂದ್ರ, ಕುಣಿಗಲ್ ರಂಗನಾಥ್, ಬಿ ಆರ್ ಪಾಟೀಲ್, ದೇಶಪಾಂಡೆ, ರಾಯರೆಡ್ಡಿ ಬಹಿರಂಗವಾಗಿ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಬಹಿರಂಗ ಮಾತಾಡೋ ಬದಲು ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕಿತ್ತು. ಇದನ್ನು ಯಾಕೆ ಯಾರೂ ಅರ್ಥ ಮಾಡಿಕೊಳ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಹೈಕಮಾಂಡ್ ಸರಿ ಇದೆ, ಹೈಕಮಾಂಡ್ ನಿಂದಲೇ ತಾಕೀತು ಬರಬೇಕು ಅನ್ನೋದಿಕ್ಕೆ ನಾವೆಲ್ಲ ಏನು ಚಿಕ್ಕವರಾ?. ಅನಗತ್ಯವಾಗಿ ಮಾತಾಡೋದ್ರಿಂದ ಪಕ್ಷದಲ್ಲಿ ಗೊಂದಲ, ಡ್ಯಾಮೇಜ್ ಆಗಿದೆ. ಹೈಕಮಾಂಡ್ ಸಹ ಈ ಗೊಂದಲಗಳಿಗೆ ಬ್ರೇಕ್ ಹಾಕಬೇಕು, ನಮಗೆ ನಾವೂ ಬ್ರೇಕ್ ಹಾಕಿಕೊಳ್ಳಬೇಕು. ಕೆಲವರು ನಮ್ಮವರ ಮಾತುಗಳಿಂದ ಮಾಧ್ಯಮಗಳಿಗೂ ವಿಪಕ್ಷಗಳಿಗೂ ನಾವೇ ಆಹಾರ ಆಗಿದ್ದೇವೆ ಎಂದು ಸ್ವಪಕ್ಷೀಯರ ವಿರುದ್ಧವೇ ರಾಮಲಿಂಗಾರೆಡ್ಡಿ ಬೇಸರಿಸಿಕೊಂಡಿದ್ದಾರೆ.
ಟನಲ್ ರಸ್ತೆ ಯೋಜನೆಯ ಲೋಪದೋಷಗಳ ಬಗ್ಗೆ ತಜ್ಞರ ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು ಲೋಪದೋಷ ಬಾರದ ರೀತಿ ಯೋಜನೆ ಮಾಡಲಾಗುತ್ತದೆ. ಯೋಜನೆ ಬಗ್ಗೆ ಆತುರ ಬೇಡ. ಟನೆಲ್ ರಸ್ತೆ ವಿರೋಧ ಮಾಡುವುದು ಸರಿಯಲ್ಲ. ಆದರೆ ಸರಿಯಾಗಿ ಮಾಡಬೇಕು, ವಿಳಂಬವಾದರೂ ಪರವಾಗಿಲ್ಲ. ಆದರೆ ಸರಿಯಾಗಿ ಮಾಡಬೇಕು. ಟನೆಲ್ ರಸ್ತೆ ಬೇಡ ಅನ್ನಬೇಡಿ. ಅಲ್ಲಿರುವ ನ್ಯೂನ್ಯತೆ ಸರಿಪಡಿಸಬೇಕು. ಆದರೆ ಯೋಜನೆ ಮಾಡಲು ತಾಳ್ಮೆ ಇರಬೇಕು ಎಂದು ಡಿಕೆಶಿಗೆ ರಾಮಲಿಂಗಾರೆಡ್ಡಿ ಪರೋಕ್ಷ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ಸಚಿವ ಸಂಪುಟ ಪುನಾರಚನೆ ಬಗ್ಗೆ ರಾಮಲಿಂಗಾರೆಡ್ಡಿ ಸುಳಿವು ಕೊಟ್ಟಿದ್ದಾರೆ. ಡಿಸೆಂಬರ್ ನಲ್ಲಿ ಪುನಾರಚನೆ ಆಗುತ್ತೆ. ಏಳೆಂಟು ಜನ ಹಿರಿಯ ಶಾಸಕರಿದ್ದಾರೆ, ಅವರಿಗೂ ಅವಕಾಶ ಕೊಡಬೇಕಲ್ಲ ಎಂದಿದ್ದಾರೆ.










