ಬೆಂಗಳೂರು: ಭಯೋತ್ಪಾದಕರನ್ನು ತಯಾರು ಮಾಡುವ ಫ್ಯಾಕ್ಟರಿ ಯಾವುದು? ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.
ದೆಹಲಿ ಕಾರ್ ಸ್ಫೋಟ ಪ್ರಕರಣದ ಬಗ್ಗೆ ಮಾತನಾಡಿದ ಅವರು ಭಾರತದಲ್ಲಿ ಮತಾಂಧತೆ, ಸಾಮೂಹಿಕ ನರಮೇಧಕ್ಕೆ ದೀರ್ಘಕಾಲದ ಇತಿಹಾಸ ಇದೆ. ಕೇರಳ, ಪಶ್ಚಿಮ ಬಂಗಾಳದಲ್ಲೂ ನರಮೇಧ ನಡೆಯಿತು. ಸ್ವಾತಂತ್ರ್ಯದ ನಂತರ ರಜಕಾರರು ನಡೆಸಿದ್ದು ನರಮೇಧವೇ. ಹಿಂಸೆ, ನರಮೇಧ ಮಾಡುವ ಮೂಲಕ ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ. ಬಿನ್ ಲಾಡೆನ್ ಹುಟ್ಟುವಾಗಲೇ ಸಾವಿರಾರು ಕೋಟಿ ರೂಪಾಯಿ ಒಡೆಯ. ಆದರೂ ಅವನು ಭಯೋತ್ಪಾದಕ ಆದ.ಈಗ ಸಿಕ್ಕಿರುವ ಶಂಕಿತ ಉಗ್ರರು ಬಹುತೇಕರು ವಿದ್ಯಾವಂತರು, ಶ್ರೀಮಂತ ಕುಟುಂಬದಿಂದ ಬಂದಿದ್ದಾರೆ .ಹಾಗಾದರೆ ಈ ತರಹ ಭಯೋತ್ಪಾದಕರನ್ನು ತಯಾರು ಮಾಡುವ ಫ್ಯಾಕ್ಟರಿ ಯಾವುದು? ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಗಣೇಶ ಮೆರವಣಿಗೆ ಆತಂಕದಿಂದ ನಡೆಯುತ್ತದೆ. ಆದರೆ ಇಸ್ಲಾಂ ಹಬ್ಬ ನಡೆಯುವಾಗ ಯಾವುದೇ ಆತಂಕ ಇರಲ್ಲ. ಭಯೋತ್ಪಾದನೆ ಮಾಡುವುದೇ ಇಸ್ಲಾಂ ವಿಸ್ತರಣೆ ಮಾಡುವುದಕ್ಕೆ. ಸಾಫ್ಟ್ವೇರ್ ರಿಪೇರಿಯಾದರೆ ಮಾತ್ರವೇ ಹಾರ್ಡ್ ವೇರ್ ಉತ್ಪಾದನೆ ನಿಲ್ಲುತ್ತದೆ. ಜೀವ ಉಳಿಸುವ ಶಿಕ್ಷಣ ಅವರಿಗೆ ಕೊಟ್ಟಿದ್ದಾರೆ, ಆದರೆ ಜೀವ ತೆಗೆಯುವ ಸಾಫ್ಟ್‌ವೇರ್ ಅವರನ್ನು ಹ್ಯಾಕ್ ಮಾಡಿದೆ. ದೆಹಲಿ ಕೃತ್ಯದಲ್ಲಿ ಭಾಗಿಯಾದವರೆಲ್ಲಾ ಡಾಕ್ಟರ್ ಮತ್ತು ಇಂಜಿನಿಯರ್ಸ್. ಈ ಭಯೋತ್ಪಾದಕ ಸಾಫ್ಟ್ ವೇರ್ ತಯಾರು ಮಾಡುವುದು ಯಾರು?. ಈ ಸಾಫ್ಟ್‌ವೇರ್ ಎಲ್ಲಿ ತನಕ ಸರ್ವ ಧರ್ಮ ಸಮಾನತೆ ಕಾಣುವುದಿಲ್ಲವೋ ಅಲ್ಲಿಯ ತನಕ ಇದು ಹೀಗೆ . ಕಸಬ್ ಅಂತಹವರು ಹಾರ್ಡ್ ವೇರ್, ಪ್ರಚೋದನೆ ಮಾಡುವವರು ಸಾಫ್ಟ್ವೇರ್ ಎಂದಿದ್ದಾರೆ.
ಬಾಂಬ್ ಸ್ಫೋಟದಿಂದ ಬಿಜೆಪಿಗೆ ಲಾಭ ಎನ್ನುವ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಗೆ ಅನುಕೂಲ ಆಗಿರಬಹುದಲ್ಲಾ?. ಈ ಉಗ್ರಗಾಮಿಗಳು ಯಾರೂ ಬಿಜೆಪಿಗೆ ಹತ್ತಿರ ಇಲ್ಲ. ಚುನಾವಣೆ ಆದ ಮೇಲೆ ಬಾಂಬ್ ಇಡಬೇಕಿತ್ತು ಎನ್ನುವ ಉದ್ದೇಶ ಕಾಂಗ್ರೆಸ್ ದಾಗಿತ್ತಾ?. ಕಾಂಗ್ರೆಸ್ ನವರು ಅನುಮಾನ ಸೃಷ್ಟಿ ಮಾಡುವ ಭಯೋತ್ಪಾದಕರು. ಅವರು ಬಾಂಬ್ ಇಡುವ ಭಯೋತ್ಪಾದಕರು. ಕಾಂಗ್ರೆಸ್ ನವರದ್ದು ಕರಪ್ಟ್ ಮೈಂಡ್ ಎಂದು ವಾಗ್ದಾಳಿ ನಡೆಸಿದ್ದಾರೆ.










