ಬೆಂಗಳೂರು; ದಲಿತರಿಗೆ ಎಲ್ಲೆಲ್ಲಿ ಅಧಿಕಾರ ಕೊಟ್ಟಿದ್ದೀರಿ ಅಂತ ಶ್ವೇತ ಪತ್ರ ಬಿಡುಗಡೆ ಮಾಡಿ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಐಎಎಸ್, ಕೆಎಎಸ್ ಹುದ್ದೆಗಳಿಗೆ ನೇಮಕ ಮಾಡುವಾಗ ಸಂಪೂರ್ಣ ಅನ್ಯಾಯ ಮಾಡಿದ್ದಾರೆ. ಕೆಲಸಕ್ಕೆ ಬಾರದ ಸ್ಥಳಕ್ಕೆ ಕೊಳೆ ಹಾಕಿದ್ದಾರೆ ಅಂತ ಎಲ್ಲಾ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ ಬೆಂಗಳೂರು ವಿವಿಯಲ್ಲಿ ಹತ್ತು ಜನ ಪ್ರೊಫೆಸರ್ಗಳು ಸೇರಿ ತಾರತಮ್ಯ ಮಾಡಿದ್ದಾರೆ ಅಂತಾ ಕುಲಪತಿಗಳಿಗೆ ರಾಜೀನಾಮೆ ನೀಡಿದ್ದಾರೆ. ದಲಿತರಿಗೆ ಎಲ್ಲೆಲ್ಲಿ ಅಧಿಕಾರ ಕೊಟ್ಟಿದ್ದೀರಿ ಅಂತ ಶ್ವೇತ ಪತ್ರ ಬಿಡುಗಡೆ ಮಾಡಿ. ಹತ್ತು ಜನ ಪ್ರೊಫೆಸರ್ ಯಾಕೆ ರಾಜೀನಾಮೆ ಕೊಟ್ಟರು ಉತ್ತರ ಕೊಡಿ. ದಲಿತರನ್ನ ಕಾಪಾಡುವುದು ನಾವು ಮಾತ್ರ ಅಂತ ಹೇಳಿಕೊಂಡು ತಿರುಗುತ್ತಾರೆ. ಕಾಂಗ್ರೆಸ್ ದಲಿತರ ಪಾಲಿಗೆ ಸುಡುವ ಮನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ಅವರನ್ನು ಓಬಿಸಿ ನಾಯಕ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಪದಚ್ಯುತಿ ಗೊಳಿಸಲು ತಂತ್ರ, ಮಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ಖರ್ಗೆ ಅವರಿಗೆ ಮೊದಲೇ ಖೆಡ್ಡಾ ತೋಡಿ ಅವರನ್ನು ಮುಗಿಸಿ ಆಯಿತು. ಅವರನ್ನು ದೆಹಲಿಗೆ ಕರೆಸಿ ನಾಮಕಾವಸ್ತೆಗೆ ಅಧ್ಯಕ್ಷ ಮಾಡಿದ್ದೀರಿ. ಈಗ ಸಿದ್ದರಾಮಯ್ಯ ಅವರಿಗೂ ಒಂದು ಖೆಡ್ಡಾ ತೋಡಿದ್ದಾರೆ. ಸಿದ್ದರಾಮಯ್ಯ ನನಗೂ ಒಂದು ಟಾಸ್ಕ್ ಕೊಟ್ಟಿದ್ದಾರೆ, ಆಯೋಜನೆ ಹೊರತುಪಡಿಸಿ ನನ್ನದೇನೂ ಇಲ್ಲ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಶೆಡ್ ಗೆ ಹಾಕುವ ಪ್ರಯತ್ನ ನಡೆದಿದೆ ಎಂದರು.
ರಸ್ತೆ ಬೇಕೋ, ಗ್ಯಾರಂಟಿ ಬೇಕೋ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ರಾಯರೆಡ್ಡಿ ಅವರು ಸಿಎಂ ಮುಖವಾಣಿ ಇದ್ದಂತೆ.ಆರ್ಥಿಕ ಸಲಹೆಗಾರರಾಗಿ ಅವರೇ ಆ ಮಾತನ್ನ ಹೇಳುತ್ತಾರೆ ಅಂದರೆ ಇದು ಸರ್ಕಾರದ ಮತ್ತು ಸಿಎಂ ಮುಖವಾಣಿ. ನಾವು ಗ್ಯಾರಂಟಿ ಕೊಡುತ್ತಿದ್ದೇವೆ, ನೀವು ಏನೂ ಕೇಳಬಾರದು ಎನ್ನುವುದು ಉದ್ದೇಶ. ಸಿಎಂ, ಡಿಸಿಎಂ ಇದನ್ನು ಹೇಳಲು ಆಗಲ್ಲ.ಹಾಗಾಗಿ ಇವರ ಕೈಯಲ್ಲಿ ಹೇಳಿಸಿದ್ದಾರೆ. ಇವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ,ಬ್ಲಾಕ್ ಮೇಲ್ ಮಾಡುವುದನ್ನು ನಿಲ್ಲಿಸಬೇಕು. ಹೆಚ್ಚು ದಿನ ಹೀಗೆ ಮೋಸ ಮಾಡಲು ಆಗಲ್ಲ. ನಾವು ಅಭಿವೃದ್ಧಿ ಮಾಡಲ್ಲ ಅಂತ ಹೇಳಲು ಆಗಲ್ಲ ಎಂದಿದ್ದಾರೆ.











