ಬೆಂಗಳೂರು: ತನ್ನ ಅಭಿಮಾನಿ ಚಿತ್ರದುರ್ಗ ಮೂಲರದ ರೇಣುಕಾಸ್ವಾಮಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಬಾಸ್ ದರ್ಶನ್ , ಅವರ ಗೆಳತಿ ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇಂದಿಗೆ ದರ್ಶನ್ ಜೈಲು ಸೇರಿ 6 ದಿನಗಳಾಯ್ತು. ಜೈಲು ಸೇರಿದಾಗಿನಿಂದಲೂ ನಟ ದರ್ಶನ್ ಅವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನ್ನು ಕೊಡಲಾಗಿದ್ದು ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಮೂರನೇ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ದರ್ಶನ್ ಜೈಲಿನಲ್ಲಿ ತಮ್ಮ ಬ್ಯಾರಕ್ ನಲ್ಲಿರುವ ಇತರೆ ಕೈದಿಗಳ ಜೊತೆಯೂ ಮಾತನಾಡುತ್ತಿಲ್ಲವಂತೆ. ಹಾಗಾದ್ರೆ ದರ್ಶನ್ ಜೈಲಿನಲ್ಲಿ ಏನ್ ಮಾಡ್ತಿದ್ದಾರೆ? ಹೇಗೆ ಸಮಯ ಕಳೆಯುತ್ತಿದ್ದಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳಿಗೆ ಮೂಡೋದು ಸಹಜ.
ಅಂದ್ಹಾಗೆ ದರ್ಶನ್ ಜೈಲಿನಲ್ಲಿ ಯಾರ ಭೇಟಿಗೂ ಒಪ್ಪುತ್ತಿಲ್ಲ, ಯಾರೊಂದಿಗೂ ಮಾತನಾಡ್ತಿಲ್ಲ. ಮೊನ್ನೆ ಪತ್ನಿ ಹಾಗೂ ಮಗ ಅವರನ್ನು ಭೇಟಿಯಾಗಲು ತೆರಳಿದ್ದ ವೇಳೆ ಮಗನನ್ನು ತಬ್ಬಿಕೊಂಡು ಡಿ ಬಾಸ್ ಕಣ್ಣೀರು ಹಾಕಿದ್ದರು. ಪತ್ನಿ ಮುಂದೆಯೂ ತೀವ್ರ ಭಾವುಕರಾಗಿದ್ದರುಯ. ಇನ್ನು ಸ್ನೇಹಿತ ವಿನೋದ್ ಪ್ರಭಾಕರ್ ಅವರ ಬಳಿಯೂ ಟೈಗರ್ ಅಂತಾ ಕರೆದದ್ದು ಬಿಟ್ಟರೆ ಬೇರೇನೂ ಮಾತನಾಡಿರಲಿಲ್ಲ. ದರ್ಶನ್ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ತುಂಬಾನೇ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಅಪ್ಪಿ ತಪ್ಪಿಯೂ ದರ್ಶನ್ ನ್ಯೂಸ್ ಚಾನೆಲ್ ನೋಡ್ತಿಲ್ಲವತೆ. ಜೈಲಿನಲ್ಲಿ ಒಂದೊಂದು ಕ್ಷಣ ಕಳೆಯಲೂ ದರ್ಶನ್ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಸಮಯ ಕಳೆಯಲು ಛಾಲೆಂಜಿಂಗ್ ಸ್ಟಾರ್ ಟಿವಿ ಮೊರೆ ಹೋಗಿದ್ದಾರೆ. ಆದರೆ ಟಿವಿಯಲ್ಲಿ ಅವರು ಬರೀ ಹಿಂದಿ ಸಿನಿಮಾ, ಸ್ಪೋರ್ಟ್ಸ್ ಚಾನೆಲ್ ಮಾತ್ರ ವೀಕ್ಷಿಸುತ್ತಿದ್ದಾರಂತೆ. ಬ್ಯಾರಕ್ ಆವರಣದಲ್ಲಿ ಆಗಾಗ ವಾಕ್ ಮಾಡುತ್ತಾ ದರ್ಶನ್ ಸಮಯ ಕಳೆಯುತ್ತಿದ್ದಾರಂತೆ. ಅಲ್ಲದೇ ಯಾರ ಭೇಟಿಗೂ ದರ್ಶನ್ ಒಪ್ಪುತ್ತಿಲ್ಲ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ನನ್ನನ್ನು ನೋಡಲು ಬರಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ಮನವಿ
ದರ್ಶನ್ ಅವರಿಗೆ ತಮ್ಮನ್ನು ಭೇಟಿ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಜೈಲಿನತ್ತ ಅಭಿಮಾನಿಗಳು ಬರುತ್ತಿದ್ದಾರೆ ಎಂಬ ವಿಚಾರ ಡಿ ಬಾಸ್ ದರ್ಶನ್ ಅವರಿಗೆ ಜೈಲಾಧಿಕಾರಿಗಳ ಮೂಲಕ ಗೊತ್ತಾಗಿದ್ದು, ಜೈಲಾಧಿಕಾರಿಗಳ ಮೂಲಕವೇ ಅಭಿಮಾನಿಗಳಿಗೆ ದರ್ಶನ್ ಸಂದೇಶ ರವಾನಿಸಿದ್ದಾರೆ, ನನ್ನ ಭೇಟಿಗಾಗಿ ಅಭಿಮಾನಿಗಳು ಯಾರೂ ಕೂಡ ಜೈಲಿನ ಬಳಿಗೆ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ನನ್ನ ಭೇಟಿಗಾಗಿ ಸಾವಿರಾರುಗಟ್ಟಲೇ ದೂರದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ನನಗಾಗಿ ಕಾಯೋದು, ಬಳಿಕ ನನ್ನನ್ನು ಭೇಟಿ ಮಾಡಲು ಸಾಧ್ಯವಾಗದೇ ನಿರಾಸೆಯಿಂದ ಹೋಗೋದು ಬೇಡ. ಹಾಗಾಗಿ ನನ್ನ ಭೇಟಿಗಾಗಿ ಯಾರೂ ಕೂಡ ಬರಬೇಡಿ ಎಂದು ದರ್ಶನ್ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನು ಮೊನ್ನೆ ದರ್ಶನ್ ಅಭಿಮಾನಿಯಾಗಿರುವ ವಿಕಲ ಚೇತನ ಯುವತಿಯೊಬ್ಬಳು ದರ್ಶನ್ ಅವರು ಕೊಡಿಸಿದ ಆಟೋದಲ್ಲಿ ಪೋಷಕರ ಜೊತೆ ಪರಪ್ಪನ ಅಗ್ರಹಾರ ಜೈಲು ಬಳಿ ಬಂದಿದ್ದಳು. ಅಲ್ಲದೇ ನೀರು ಆಹಾರ ಸೇವಿಸದೇ ದರ್ಶನ್ ಅವರನ್ನು ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದಳು.ಈ ವಿಚಾರ ದರ್ಶನ್ ಅವರ ಕಿವಿಗೆ ಬಿದ್ದಿದ್ದು ಅವರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಮೂರು ದಿನಗಳ ಹಿಂದೆ ಯಾದಗಿರಿಯಿಂದ ವಿಶೇಷ ಚೇತನ ಯುವಕ ಸೂರ್ಯಕಾಂತ ಎಂಬಾತ ಜೈಲು ಬಳಿ ಆಗಮಿಸಿದ್ದ. ಥ್ರೀ ವೀಲ್ಹರ್ ಬೈಕ್ ನಲ್ಲಿ ಬಂದಿದ್ದ ಆತ ದರ್ಶನ್ ಅವರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದ. ಆದರೆ ದರ್ಶನ್ ಅವರನ್ನು ಹಾಗೇ ಎಲ್ಲರಿಗೂ ನೋಡುವ ಅವಕಾಶ ಇಲ್ಲದೇ ಇರೋದರಿಂದ ಆ ಯುವಕ ನಿರಾಸೆಯಿಂದ ವಾಪಾಸ್ ಹೋಗಿದ್ದ ಎನ್ನಲಾಗಿದೆ. ಇದೀಗ ದರ್ಶನ್ ಯಾರೂ ನನ್ನನ್ನು ನೋಡಲು ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.