ಬೆಂಗಳೂರಿನ ಜನತೆಗೆ ದ್ರೋಹ ಬಗೆದ ಕಾಂಗ್ರೆಸ್ ವಿರುದ್ಧ ಜನಾಂದೋಲನ ಮಾಡುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಎರಡೂವರೆ ವರ್ಷದಲ್ಲಿ ರಸ್ತೆಗಳು ಅಧೋಗತಿಗೆ ಹೋಗಿವೆ. ಕಸ ಪೂರ್ತಿ ಬೆಂಗಳೂರಿನಲ್ಲಿ ಸಂಗ್ರಹ ಆಗಿದೆ. ಅಭಿವೃದ್ಧಿ ಆಗಿಲ್ಲ, ಹಣ ಬಿಡುಗಡೆ ಅಗಿಲ್ಲ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಇಂದು ಸಭೆ ನಡೆಸಿದ್ದೇವೆ. ಬೆಂಗಳೂರಿನ ಜನತೆಗೆ ದ್ರೋಹ ಬಗೆದ ಕಾಂಗ್ರೆಸ್ ವಿರುದ್ಧ ಜನಾಂದೋಲನ ಮಾಡುತ್ತೇವೆ. ಒಂದು ವಾರಗಳ ಕಾಲ ರಸ್ತೆ ಗುಂಡಿಗಳನ್ನು ಸರಿ ಮಾಡಿ ಸಹಿ ಸಂಗ್ರಹಣಾ ಚಳುವಳಿ ಮಾಡುತ್ತೇವೆ. ನವೆಂಬರ್ 7 ರಿಂದ 15 ರವರೆಗೆ ಮಾಡುತ್ತೇವೆ. ಎ ಖಾತಾ, ಬಿ ಖಾತಾ ವಿಚಾರವಾಗಿಯೂ ಸಹಿ ಸಂಗ್ರಹ ಚಳುವಳಿ ಮಾಡುತ್ತೇವೆ. ಇದನ್ನು ದುಡ್ಡು ಹೊಡೆಯುವ ಸ್ಕೀಮ್ ಆಗಿ ಮಾಡಿಕೊಂಡು ಬೆಂಗಳೂರಿನ ಜನರನ್ನು ಹರಕೆಯ ಕುರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಕಸದ ಮೇಲಿನ ಸೆಸ್, ಬೆಸ್ಕಾಂ ಒಸಿ, ಸಿಸಿ ಕೂಡಾ ದುಡ್ಡು ಹೊಡೆಯುವ ಸ್ಕೀಮ್. ದುಬಾರಿ ಬೆಂಗಳೂರು ಬೇಡ, ಜನಸಾಮಾನ್ಯರ ಕೆಂಪೇಗೌಡರ ಬೆಂಗಳೂರು ಬೇಕು. ಲಾಲ್ ಬಾಗ್, ಸ್ಯಾಂಕಿ ಟ್ಯಾಂಕ್ ಟನಲ್ ರೋಡ್ ಬೇಡ. ಹತ್ತು ಟನಲ್ ರೋಡ್ ಮಾಡಿ ನಮ್ಮ ಅಭ್ಯಂತರ ಇಲ್ಲ. ಕಡಿಮೆ ಬೆಲೆಯಲ್ಲಿ ಟನಲ್ ರೋಡ್ ಆಗಬೇಕು. 700 ಕೋಟಿ ಬೆಂಗಳೂರಿಗೆ, 700 ಕೋಟಿ ದೆಹಲಿಗೆ ಕೊಡುವ ಸ್ಕೀಮ್ ಇದು. ಯಾವುದೇ ಸ್ಕೀಮ್ ಮಾಡುವಾಗಲೂ ಕರ್ನಾಟಕದ ಸ್ಕೀಮ್ ಮಾಡಿ. ಕರ್ನಾಟಕ ಪ್ಲಸ್ ದೆಹಲಿ ಕಾಂಗ್ರೆಸ್ ಸ್ಕೀಮ್ ಮಾಡಬೇಡಿ. ಬೆಲೆ ಏರಿಕೆ ಪಟ್ಟಿ ಮಾಡಿ ಅದನ್ನೂ ಬಿಡುಗಡೆ ಮಾಡುತ್ತೇವೆ. 10 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟು ಹಣ ಕೊಟ್ಟಿದೆ, ನಾವು ಎಷ್ಟು ಕೊಟ್ಟಿದ್ದೇವೆ ಅಂತಾ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಮಾಡಿರುವ ಕಾಮಗಾರಿ ಬಿಟ್ಟು, ನೀವೇ ಶುರು ಮಾಡಿ ಮುಗಿಸಿರುವ ಒಂದು ಕೆಲಸ ತೋರಿಸಿ. ಈಗ ನವೆಂಬರ್ ಕ್ರಾಂತಿ ಆಗುತ್ತದೆ. ನಾನು ನವೆಂಬರ್ ಕ್ರಾಂತಿ ಆಗುತ್ತದೆ ಎಂದಾಗ ಅಶೋಕನ ಹತ್ತಿರ ಕೇಳಬೇಕಾ, ಏನು ಜ್ಯೋತಿಷಿನಾ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದರು. ನನ್ನ ಹತ್ತಿರವೇ ಕೇಳಬೇಕು ರೀ ಅವರು ನನ್ನ ಹತ್ತಿರವೇ ಕೇಳಬೇಕು. ಬಿಜೆಪಿ ಹತ್ತಿರವೇ ಕೇಳಬೇಕು ಅವರು. ಧಮ್ ಇದ್ದರೆ ತಾಕತ್ ಇದ್ದರೆ ಸಿಎಂ ಬದಲಾವಣೆ ಇಲ್ಲ ಅಂತಾ ಹೇಳಲಿ. ನಮಗೆ ಯಾರೂ ಸಿಎಂ ಆದರೂ ಏನೂ ಇಲ್ಲ. ಸಿದ್ದರಾಮಯ್ಯ ಆದರೂ ಒಂದೇ, ಡಿ.ಕೆ. ಶಿವಕುಮಾರ್ ಆದರೂ ಒಂದೇ, ಪರಮೇಶ್ವರ್ ಆದರೂ ಒಂದೇ. ಹೆಣ ಹೊರಲು ಹಿಂದೆ ಆದರೆ ಏನು, ಮುಂದೆ ಆದರೆ ಏನು?. ಯಾವುದೇ ಬದಲಾವಣೆ ಇಲ್ಲ ಅಂತಾ ಕಾಂಗ್ರೆಸ್ ನಾಯಕರು ಹೇಳಿಬಿಡಲಿ, ಬಿಜೆಪಿಯವರು ಗಪ್ ಚುಪ್ ಆಗುತ್ತೇವೆ. ರಾಜ್ಯಾದ್ಯಂತ ರೈತರ ಸಮಸ್ಯೆಗಳಿವೆ. ನಾಳೆ ನಾನು ಮತ್ತು ಛಲವಾದಿ ನಾರಾಯಣಸ್ವಾಮಿ ಚಾಮರಾಜನಗರ ಜಿಲ್ಲೆಯಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.











