ಮನೆ Latest News ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇವೆ: ಪ್ರತಿಪಕ್ಷ ನಾಯಕ ಆರ್.ಅಶೋಕ್

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇವೆ: ಪ್ರತಿಪಕ್ಷ ನಾಯಕ ಆರ್.ಅಶೋಕ್

0

ಬೆಂಗಳೂರು; ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.ಮಲ್ಲೇಶ್ವರಂನಲ್ಲಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಲೋಕಾಯುಕ್ತ ಮತ್ತು ಇಡಿ ತನಿಖೆ ನಡೆಯುತ್ತಿದ್ದು ಸದ್ಯಕ್ಕೆ ಸಿದ್ದರಾಮಯ್ಯನವರಿಗೂ ಸ್ವಲ್ಪ ರಿಲೀಫ್ ಸಿಕ್ಕಿದೆ.ಅಲ್ಲದೇ, ಲೂಟಿಯಾಗಿರುವ ರಾಜ್ಯದ ಜನತೆಯ ದುಡ್ಡು ಮತ್ತೆ ಖಜಾನೆಗೆ ವಾಪಸ್  ಬರುತ್ತದೆ ಎಂಬ ವಿಶ್ವಾಸ ಇದೆ. ಹೈ ಕೋರ್ಟ್ ಆದೇಶವನ್ನು ನಾವು ಒಪ್ಪಲೇಬೇಕಾಗುತ್ತದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾನೂನು ಪ್ರಕಾರವಾದ ಹೋರಾಟವನ್ನು ನ್ಯಾಯ ಸಿಗುವವರೆಗೂ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ, ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ, ಹೈಕೋರ್ಟ್ ತೀರ್ಪು ಒಂದು ರೀತಿಯ ಸಮಾಧಾನ ತಂದಿದೆ.ನ್ಯಾಯಾಲಯದ ತೀರ್ಪನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿದ್ದೇವೆ.‌ ಮುಂದೆ ನಡೆಯಬೇಕಾದ ತನಿಖೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯಲ್ಲಿನ ಆಂತರಿಕ ಬೆಳವಣಿಗೆಗಳ ವಿಚಾರವಾಗಿ ಮಾತನಾಡಿದ ಆರ್. ಅಶೋಕ್, ಏನೇ ಮಾತಾಡಿದರೂ ಪಕ್ಷದ ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು ಅಂತಾ ನಮ್ಮ ಉಸ್ತುವಾರಿ ಸುಧಾಕರ ರೆಡ್ಡಿ ಹೇಳಿದ್ದಾರೆ.‌ಉಸ್ತುವಾರಿ ಸುಧಾಕರ ರೆಡ್ಡಿ ಹೇಳಿರುವುದನ್ನು ನಾನು ಹೇಳುತ್ತಿದ್ದೇನೆ ಅದು ಅವರ ಅಭಿಪ್ರಾಯವೂ ಹೌದು, ನನ್ನ ಅಭಿಪ್ರಾಯವೂ ಹೌದು ಮತ್ತು  ಕೇಂದ್ರದ ಅಭಿಪ್ರಾಯವೂ ಕೂಡಾ ಅದೇ ಆಗಿದೆ. ಒಂದು ಸುವರ್ಣಾವಕಾಶ ನಮಗೆ ಸಿಕ್ಕಿದ್ದು, ನಾವೆಲ್ಲರೂ ಒಟ್ಟಿಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಅನ್ನು ಬಗ್ಗು ಬಡಿಯಬಹುದಾಗಿತ್ತು. ಆದರೆ ಸ್ವಲ್ಪ ಅಡೆತಡೆ ಆಗಿದೆ.‌ ಹದಿನೈದು-ಇಪ್ಪತ್ತು ದಿನಗಳಲ್ಲಿ ಇದಕ್ಕೆ ಅಂತಿಮ ತೀರ್ಮಾನವನ್ನು ಕೇಂದ್ರದ ನಾಯಕರು ಕೊಡುತ್ತಾರೆ. ತೀರ್ಮಾನ ಕೊಟ್ಟಾದ ಮೇಲೆ ಎಲ್ಲಾ ನಾರ್ಮಲ್ ಬಿಜೆಪಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ತೇಜೋವಧೆ ಬಗ್ಗೆ ಪಕ್ಷದ ಹಿರಿಯರು ತಡೆಯುತ್ತಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ, ಅದೆಲ್ಲವನ್ನೂ ಪಕ್ಷದ ಗೋಡೆಗಳ ಮಧ್ಯೆ ಮಾತಾಡಬೇಕು ಅಂತಾ ನಮ್ಮ ಉಸ್ತುವಾರಿ ಸೂಚನೆ ಕೊಟ್ಟಿದ್ದಾರೆ. ಪಕ್ಷದ ಉಸ್ತುವಾರಿ ಸೂಚನೆಯನ್ನು ಶಿರಸಾ ವಹಿಸಿ ಪಾಲನೆ ಮಾಡುತ್ತೇವೆ. ಅಲ್ಲದೇ, ಒಟ್ಟಾಗಿ ಹೋಗಬೇಕು ಅನ್ನೋದು ನನ್ನ ಅಭಿಪ್ರಾಯವಾಗಿದ್ದು, ಕೆಲವು ಸಲ ಪ್ರಜಾಪ್ರಭುತ್ವದ ಮಾತಿನ ಸ್ವಾತಂತ್ರ್ಯದಲ್ಲಿ ಎಲ್ಲರೂ ಮಾತಾಡಲು ಶುರು ಮಾಡುತ್ತಾರೆ. ಪ್ರಾರಂಭದಲ್ಲೇ ಇದು ಕಡಿಮೆ ಆಗಿರುತ್ತಿದ್ದರೆ ಒಳ್ಳೆಯದಿತ್ತು. ಸರಿಪಡಿಸಿಕೊಂಡು ಹೋಗುವುದೇ ದೊಡ್ಡ ಗುಣವಾಗಿದ್ದು, ನಾಲ್ಕು ಗೋಡೆ ಮಧ್ಯೆ ನಾವು ಪಕ್ಷದ ವಿಚಾರ ಚರ್ಚೆ ಮಾಡೋಣ ಎಂದು ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ ಎಂದಿದ್ದಾರೆ.