ಬೆಂಗಳೂರು; ಕಾಂಗ್ರೆಸ್ ಸರ್ಕಾರದ ವೈಫಲ್ಯ, ಜ್ವಲಂತ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆಯಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಚಳಿಗಾಲದ ಅಧಿವೇಶನಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಮೈತ್ರಿ ಪಕ್ಷದ ಸದಸ್ಯರ ಜೊತೆ ಒಟ್ಟಿಗೆ ಕುಳಿತು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ, ಜ್ವಲಂತ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆಯಲು ನಿರ್ಧರಿಸಿದ್ದೇವೆ. ಪ್ರತಿ ಬಾರಿ ಅಲ್ಲಿ ಸದನ ನಡೆದಾಗಲೂ ಆ ಭಾಗದ ವಿಚಾರಗಳು ಚರ್ಚೆಗೊಳಪಡುತ್ತವೆ .ಆದರೆ ಅದು ನಾಮ್ ಕೇ ವಾಸ್ತೇ ಎನ್ನುವಂತಿರುತ್ತದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಪರಿಣಾಮಕಾರಿಯಾಗಿ ಈ ಬಾರಿ ಸದನವನ್ನು ಬಳಸಿಕೊಳ್ಳಬೇಕಿದೆ. ಸದನದ ಆರಂಭದಲ್ಲೇ ಈ ವಿಚಾರಗಳ ಚರ್ಚೆ ಮಾಡಲು ನಿರ್ಧರಿಸಿದ್ದೇವೆ. ಮೆಕ್ಕೆಜೋಳ, ತೊಗರಿ, ಕಬ್ಬು, ಭತ್ತ ಖರೀದಿ, ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ಹೀಗೆ ಎಲ್ಲಾ ವಿಚಾರಗಳ ಕುರಿತು ಸರ್ಕಾರದ ನಿಲುವು ಪ್ರಶ್ನಿಸಲಿದ್ದೇವೆ. ಕ್ರಸ್ಟ್ ಗೇಟ್ ನಿರ್ಮಾಣ ವಿಳಂಬದಿಂದ ರೈತರಿಗೆ ಸಮಸ್ಯೆ ಆಗಿದೆ.ಎರಡನೇ ಬೆಳೆ ಬೆಳೆಯದಂತಾಗಿದೆ, ಇದಕ್ಕಾಗಿ ಅಲ್ಲಿನ ರೈತರಿಗೆ 25 ಸಾವಿರ ರೂ. ಗಳ ಪರಿಹಾರಕ್ಕೆ ಆಗ್ರಹಿಸಿದ್ದೇವೆ. ಡಿಸೆಂಬರ್ 9 ರಂದು ಬೃಹತ್ ರೈತ ಹೋರಾಟಕ್ಕೆ ಪಕ್ಷ ಕರೆ ನೀಡಿದೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ಸದನದಲ್ಲೂ ಈ ಬಗ್ಗೆ ಆಗ್ರಹಿಸಲಿದ್ದೇವೆ ಎಂದಿದ್ದಾರೆ.
ಡಿಸಿಎಂಗೆ ಇಡಿ ನೋಟೀಸ್ ವಿಚಾರದ ಬಗ್ಗೆ ಮಾತನಾಡಿದ ಅವರು ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ.ಸರ್ವೋಚ್ಚ ನ್ಯಾಯಾಲಯವೂ ಇದೆ. ಪಕ್ಷ ಹಾಗೂ ಮುಖಂಡರ ಮೇಲೆ ನೇರ ತನಿಖೆ ಮಾಡಲು ಸಾಧ್ಯ ಇಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಬ್ಲಿಕ್ ಟ್ರಸ್ಟ್ ಅನ್ನು ಸ್ವಂತಕ್ಕೆ ಬದಲಾಯಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ. ಇದನ್ನು ದೌರ್ಜನ್ಯ ಅಂತ ಡಿ.ಕೆ. ಶಿವಕುಮಾರ್ ಹೇಳಿದರೆ ಏನಂದುಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ತರುವ ವಿಚಾರದ ಬಗ್ಗೆ ಮಾತನಾಡಿದ ಅವರು ಆಡಳಿತ ಪಕ್ಷದ ಶಾಸಕರೇ ಅವಿಶ್ವಾಸ ನಿರ್ಣಯ ನಿಲುವಳಿ ತಂದರೂ ಆಶ್ಚರ್ಯ ಇಲ್ಲ. ನಾವು ಇನ್ನೂ ಅದರ ಬಗ್ಗೆ ಯೋಚನೆಯೂ ಮಾಡಿಲ್ಲ, ಚರ್ಚೆಯೂ ಮಾಡಿಲ್ಲ ಎಂದಿದ್ದಾರೆ. ಹೆಚ್ ಡಿಕೆ ಮನುವಾದಿ ಎಂಬ ಸಿಎಂ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಬಗ್ಗೆ ಏನು ಹೇಳಿದ್ದಾರೋ ಅದನ್ನು ನಾನೂ ನೋಡಿದ್ದೇನೆ.ಅದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡುವ ಕೆಲಸ ಮಾಡಿದ್ದಾರೆ.ಉಪಲೋಕಾಯುಕ್ತರು ಏನು ಹೇಳಿದ್ದಾರೆ ಎಂದು ನಾನು ಚರ್ಚೆ ಮಾಡಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ 40% ಆರೋಪ ಮಾಡಿದ್ದರು. ತನಿಖಾ ಸಂಸ್ಥೆ ರಚನೆ ಮಾಡಿ ಅದು ಕ್ಲೀನ್ ಚಿಟ್ ನೀಡಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಗ್ಗೆ ನಿಮ್ಮದೇ ಶಾಸಕರು ನಂಬರ್ ಒನ್ ಅಂತ ಹೇಳಿದ್ದಾರೆ. ವಾಲ್ಮೀಕಿ ಹಗರಣ ಬಗ್ಗೆ ಸಿಎಂ ಸದನದಲ್ಲಿ ಸ್ವತಃ ಒಪ್ಪಿಕೊಂಡರು. ಭ್ರಷ್ಟಾಚಾರ ರಹಿತ ಆಡಳಿತ ಅಂತ ಯಾವ ಬಾಯಿಂದ ಹೇಳುತ್ತೀರಿ?. 14 ಸೈಟುಗಳನ್ನು ಹೇಗೆ ವಾಪಸ್ ನೀಡಿದ್ರಿ ಸಿದ್ದರಾಮಯ್ಯನವರೇ?. ನಿಮ್ಮ ಬಣ್ಣ ಬಯಲಾಗಿದೆ. ಎಲ್ಲಾ ವಿಚಾರ ತೆಗೆದುಕೊಂಡು ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಖರೀದಿಯಲ್ಲಿ ಅವ್ಯವಹಾರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಇದನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ. ಕರ್ನಾಟಕದಲ್ಲೇ ಮೊದಲು ಎನ್ ಇಪಿ ಜಾರಿಯ ಕೆಲಸ ಡಾ. ಅಶ್ವಥ್ ನಾರಾಯಣ್ ಮಾಡಿದ್ದರು. ಸಿದ್ದರಾಮಯ್ಯ ನಾವೇ ಪ್ರತ್ಯೇಕ ಶಿಕ್ಷಣ ನೀತಿ ತರುತ್ತೇವೆ ಅಂದರು. ಆದರೆ ಅದು ಇನ್ನೂ ಮಾಡಲು ಆಗಿಲ್ಲ. ದೇಶಕ್ಕೆ ಮೋದಿ ಅವರು ನೀಡಿದ ಜಾರಿಗೆ ತಂದಿಲ್ಲ, ಇತ್ತ ರಾಜ್ಯದ ಪಠ್ಯಕ್ರಮವನ್ನೂ ತಂದಿಲ್ಲ. ಪುಣ್ಯಾತ್ಮ ಶಿಕ್ಷಣ ಸಚಿವರಿಗೆ ಯಾರು ಮಾಹಿತಿ ನೀಡುತ್ತಿದ್ದಾರೆ ಗೊತ್ತಿಲ್ಲ. ಪಾಸಿಂಗ್ ಮಾರ್ಕ್ಸ್ ಬಗ್ಗೆಯೂ ಅನೇಕ ನಿರ್ಣಯ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.











