ಬೆಂಗಳೂರು; ಸಿಎಂ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ಮೊದಲ ಬಾರಿಗೆ ಸುದೀರ್ಘ ಚರ್ಚೆಗಳಾಗಿವೆ. ಆದರೆ ಸಿಎಂ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ.ಅಧಿವೇಶನ ಆರಂಭವಾಗುವ ಮೊದಲು ಒಂದು ತಿಂಗಳಿನಿಂದಲೂ ಮಂತ್ರಿಗಳು ತಮ್ಮ ಇಲಾಖೆ ನಿರ್ವಹಿಸದೇ ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ಗಲಲ್ಲೇ ಕಾಲಹರಣ ಮಾಡಿದರು.ಅಧಿವೇಶನ ಆರಂಭಕ್ಕೂ ಮುನ್ನ ನಾನು ಸಿಎಂಗೆ ಕಿವಿಮಾತು ಹೇಳಿದ್ದೆ. ಆದರೆ ಯಾವುದನ್ನೂ ಲೆಕ್ಕಿಸದೇ ಬೆಳಗಾವಿಯಲೂ ಸರಣಿ ಸಭೆಗಳು ಮುಂದುವರಿದವು. ಯಾವುದೇ ಸಚಿವರಿಗೂ ಸದನದಲ್ಲಿ ಕುಳಿತು ವಿಪಕ್ಷ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಬೇಕೆನ್ನುವ ವ್ಯವಧಾನ ಇರಲಿಲ್ಲ .ಲಕ್ಷ್ಮೀ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಯೋಜನೆಯಲ್ಲಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟು ಸಚಿವೆ ಕ್ಷಮೆಯಾಚಿಸಬೇಕಾಯಿತು. ಕೃಷ್ಣ ಭೈರೇಗೌಡರ ಭೂ ಹಗರಣ ಏನಾಗುತ್ತದೆ ನೋಡೋಣ ಎಂದಿದ್ದಾರೆ.
ಧರ್ಮಸ್ಥಳ ಬುರುಡೆ ಗ್ಯಾಂಗ್ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಯಿತು. ನಗರ ನಕ್ಸಲರು ಬಂದು ಸಿಎಂ ಭೇಟಿ ಮಾಡಿದರು ಅಂತಾ ಮರುದಿನವೇ ಏಕಾಏಕಿ ಎಸ್ಐಟಿ ಆದೇಶ ಮಾಡಿದ್ದೂ ಗಮನದಲ್ಲಿದೆ. ರಾಜ್ಯದ ಸಿಎಂ ನಾಸ್ತಿಕರು ಅಂತಾ ಅವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಹಾದಿ ಬೀದಿಯಲ್ಲಿ ಹೋಗುವವರ ಮಾತು ಕೇಳಿಕೊಂಡು ಧರ್ಮಸ್ಥಳ ಮಂಜುನಾಥೇಶ್ವರನ ಭಕ್ತರ ಭಾವನೆಗೆ ಘಾಸಿ ಮಾಡುವ ಕೆಲಸ ಸರ್ಕಾರ ಮಾಡಿತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಕ್ಕೆ ಇಂದಿಗೂ ಸಿದ್ದರಾಮಯ್ಯ ಕ್ಷಮೆ ಕೇಳಿಲ್ಲ. ತಾವು ಮಾಡಿದ್ದೇ ಸರಿ ಎಂದು ರಾಜ್ಯ ಸರ್ಕಾರ ಕೈ ತೊಳೆದುಕೊಂಡಿತು. ಬುರುಡೆ ಗ್ಯಾಂಗ್ ನೆಪ ಮಾತ್ರ, ಇದರ ಹಿಂದೆ ಇರುವ ದುಷ್ಟಶಕ್ತಿಗಳು ಬೇರೆ.ಇದರ ಬಗ್ಗೆ ಇನ್ನೂ ಸರ್ಕಾರ ಸ್ಪಷ್ಟನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ದ್ವೇಷ ಭಾಷಣ ವಿಧೇಯಕದ ಬಗ್ಗೆ ಸರ್ಕಾರ ಚರ್ಚೆಗೇ ಸಿದ್ಧ ಇಲ್ಲ. ಸರ್ಕಾರವನ್ನು ಯಾರೂ ಕೂಡಾ ಟೀಕೆ ಮಾಡುವಂತಿಲ್ಲ, ಅಂತಹ ವಿಧೇಯಕ ತಂದಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾ ಗಾಂಧಿ ಹೇರಿದ ಕರಾಳ ದಿನಗಳನ್ನು ನೆನಪಿಸುವ ಮಸೂದೆಯನ್ನು ಸರ್ಕಾರ ತಂದಿದೆ. ಗೋವು ಅಕ್ರಮ ಸಾಗಾಣಿಕೆ ವಿಚಾರದಲ್ಲಿ ನಾಲಾಯಕ್ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿಧೇಯಕ ತರಲು ಹೊರಟಿತ್ತು. ಅಕ್ರಮ ಗೋ ಸಾಗಾಟ ಮಾಡುವವರಿಗೆ ಸ್ಟೇಷನ್ ಬೇಲ್ ಕೊಡುವ ರೀತಿ ಮಾಡಲು ಹೊರಟಿದೆ. ಅಲ್ಪಸಂಖ್ಯಾತರ ಓಲೈಕೆ ಅಕ್ಷಮ್ಯ ಅಪರಾಧ.ಸಚಿವ ಸಂಪುಟದಲ್ಲಿ ಸಚಿವರು ಹಿಂದೂಗಳ ಮತ ಬರುವುದಿಲ್ಲ ಎಂದು ಎಚ್ಚರಿಸಿದ್ದಕ್ಕೆ ಅಧಿವೇಶನದಲ್ಲಿ ವಿಧೇಯಕ ತರಲಿಲ್ಲ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಆಗಿದ್ದು ಸಿಎಂ, ಡಿಸಿಎಂ ಬೇಜವಾಬ್ದಾರಿತನದಿಂದ. ಎ1, ಎ2 ಆಗಬೇಕಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏಜೆನ್ಸಿಗಳ ಮೇಲೆ ಹಾಕಿ ತಾವು ಕೈ ತೊಳೆದುಕೊಂಡರು. ಚಿನ್ನಸ್ವಾಮಿ ಕ್ರೀಡಾಂಗಣ ಸ್ಮಶಾನ ಮೌನ ಆಗುವ ರೀತಿ ಮಾಡಿದ್ದಾರೆ ಎಂದಿದ್ದಾರೆ.
ಸರ್ಕಾರದ ಅಯೋಗ್ಯತನ, ಸಿಎಂ, ಡಿಸಿಎಂ ಪುಕ್ಕಟೆ ಪ್ರಚಾರದ ಚಟಕ್ಕೆ ಕ್ರಿಕೆಟ್ ಪ್ರಿಯರಿಗೆ ಅವಮಾನ. ವಿಜಯ್ ಹಜಾರೆ ಟೂರ್ನಿಗೆ ಅನುಮತಿ ಕೊಡದೇ ಇರುವುದು ಸರ್ಕಾರದ ಉದ್ಧಟನತನ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಸಿ ಬಳಿಯುವ ಕೆಲಸ ಸರ್ಕಾರದಿಂದ ಆಗಿದೆ. ಹೆಂಡದ ಟಾರ್ಗೆಟ್ ವರ್ಷ ವರ್ಷ ಜಾಸ್ತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಂತಹ ಅನುಭವಿ ಸಿಎಂ ಖಜಾನೆ ತುಂಬಿಸಲು 35% ಅಬಕಾರಿ ಸುಂಕ ಹೆಚ್ಚಿಸುತ್ತಿದ್ದಾರೆ. ಅಬಕಾರಿ ಲೈಸನ್ಸ್ ಹರಾಜು ಹೊರಟಿದ್ದಾರೆ, ಏನು ಮಾಡಲು ಹೊರಟಿದ್ದೀರಿ ನೀವು ರಾಜ್ಯವನ್ನು? ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಆಧಪತನಕ್ಕೆ ಹೋಗಿದೆ. ರಾಜ್ಯದಲ್ಲಿ ಎನ್ಇಪಿ ರದ್ದು ಮಾಡಿದ್ದಾರೆ. ಎರಡೂವರೆ ವರ್ಷ ಆದರೂ ರಾಜ್ಯದಲ್ಲಿ ಸ್ಪಷ್ಟವಾದ ಶಿಕ್ಷಣ ನೀತಿ ಇಲ್ಲ. ಫಾಕ್ಸ್ ಕಾನ್ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಹೋಗುವವರು ಹೋಗಲಿ ಎಂದು ಡಿಸಿಎಂ ಧಮಕಿ ಹಾಕುತ್ತಾರೆ. ಇದು ಸರ್ಕಾರ ನಡೆದುಕೊಳ್ಳುವ ರೀತಿನಾ ಇದು?.ಅಪಾರ್ಟ್ ಮೆಂಟ್ ಅಸೋಸಿಯೇಷನ್ ಮನವಿ ಕೊಟ್ಟರೆ ಅವರಿಗೂ ಡಿ.ಕೆ. ಶಿವಕುಮಾರ್ ಧಮಕಿ ಹಾಕುತ್ತಾರೆ. ರಾಜ್ಯ ಸರ್ಕಾರ ಇಂದು ಗೂಂಡಾಗಿರಿಗೆ ಇಳಿದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ನನ್ನ ಕೂಡಾ ಟೀಕೆ ಮಾಡಿದ್ದರು. ಮೊನ್ನೆ ವಸತಿ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮನೆಯಲ್ಲಿ ಹಣ ಪತ್ತೆಯಾಯಿತಲ್ವಾ?. ಹಿಂದೆ ಶಾಸಕ ಬಿ.ಆರ್. ಪಾಟೀಲ್ ಸರ್ಫರಾಜ್ ಖಾನ್ ಬಗ್ಗೆ ಬಹಿರಂಗವಾಗಿ ಹೇಳಿದಾಗ ಸಿಎಂ ಏನು ಕ್ರಮ ಕೈಗೊಂಡರು?.ಯಾಕೆ ಸಿಎಂ ಇದರಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ?. ಕಾಂಗ್ರೆಸ್ ನವರಿಗೆ ಪ್ರಧಾನಿ ಮೋದಿ ನೋಡಿದರೆ ಆಗಲ್ಲ.ನರೇಗಾ ಹೆಸರು ಬದಲಿಸಿದ್ದಕ್ಕೂ ಮೋದಿಯವರನ್ನು ಟೀಕಿಸಿದರು. ಮೋದಿ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ನವರಿಗೆ ಇದ್ಯಾ?. ಮಹಾತ್ಮ ಗಾಂಧಿ ಬಗ್ಗೆ ಕಾಂಗ್ರೆಸ್ ನವರು ಮೊಸಳೆ ಕಣ್ಣೀರು.ಮೋದಿ ಬಗ್ಗೆ ಅತೀ ಹೆಚ್ಚು ಟೀಕೆ ಮಾಡುವುದು ಸಿದ್ದರಾಮಯ್ಯ.ತನ್ನ ಹುಳುಕು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ದೂರುತ್ತಿದೆ.ಒಂದು ಕಡೆ ಗೃಹ ಲಕ್ಷ್ಮೀ ಅಂತಾ ಹೇಳಿ ಮತ್ತೊಂದು ಕಡೆ ಹೆಂಡ ಕುಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೋಗಿಲು ಬಳಿ ತೆರವು ಕಾರ್ಯಾಚರಣೆ ಬಗ್ಗೆ ಕೇರಳ ಸಿಎಂ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ದಯವಿಟ್ಟು ಹೆಚ್ಚು ಚರ್ಚೆ ಬೇಡ.ಸಿದ್ದರಾಮಯ್ಯ, ಜಮೀರ್ ಅಹಮದ್ ಅವರಿಗೆ ಗೊತ್ತಾದರೆ ಅವರೇ ಜಮೀನು ತೆಗೆದುಕೊಂಡು ಲೇಔಟ್ ಮಾಡಿಬಿಡುತ್ತಾರೆ. ಸ್ಥಳೀಯ ಸಂಸ್ಥೆಗಳ ಮೈತ್ರಿ ಬಗ್ಗೆ ದೇವೇಗೌಡರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆಯೂ ನಾಲ್ಕು ಒಳ್ಳೆಯ ಮಾತಾಡಿದ್ದಾರೆ. ಎರಡು ಬಾರಿ ಬಿಜೆಪಿ ಸ್ಪಷ್ಟ ಬಹುಮತದಿಂದ ವಂಚಿತವಾಗಿದೆ. ಮೊನ್ನೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ನಮ್ಮ ಕಾರ್ಯಕರ್ತರಿಗೆ ವಿಶ್ವಾಸ ಬರುವಂತೆ ಮಾತಾಡಬೇಕಿರುವುದು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯ. ಜೆಡಿಎಸ್ ಜೊತೆಗೆ ಮೈತ್ರಿ ಇದು ಮೋದಿಯವರ ಅಪೇಕ್ಷೆ.ಅಂತಿಮವಾಗಿ ನಮ್ಮದು ರಾಷ್ಟ್ರೀಯ ಪಕ್ಷ.ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಡಬೇಕಿತ್ತೋ ಅದನ್ನು ಕೊಟ್ಟಿದ್ದೇನೆ. ವರಿಷ್ಠರು ಮಾಡುವ ತೀರ್ಮಾನದಂತೆ ನಾವು ಬದ್ಧರಿದ್ದೇವೆ.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋಗಬೇಕು ಅಂತಾ ಅಪೇಕ್ಷೆ ಆದರೆ ಅದನ್ನು ನಾವು ಸ್ವಾಗತಿಸುತ್ತೇವೆ.ದೇವೇಗೌಡರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಪ್ರಶ್ನೆ ಇಲ್ಲ.ದೊಡ್ಡಬಳ್ಳಾಪುರ ಪಟ್ಟಣ ಪಂಚಾಯತ್ ವಿಚಾರದಲ್ಲಿ ಜೆಡಿಎಸ್ ನಿಲುವು ಬಗ್ಗೆ ಮಾಹಿತಿ ಇಲ್ಲ. ರಾಜ್ಯದಲ್ಲಿ ಹೋರಾಟದಿಂದ ಮೇಲೆ ಬಂದವರು ಯಡಿಯೂರಪ್ಪನವರು ಮತ್ತು ದೇವೇಗೌಡರು ಮಾತ್ರ.ಯಡಿಯೂರಪ್ಪನವರಿಗೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವ ದೇವೇಗೌಡರಿಗೂ ಕೊಡುತ್ತೇವೆ.ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಇರಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ದೇವೇಗೌಡರು, ಕುಮಾರಸ್ವಾಮಿಯವರು ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
2028ಕ್ಕೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರಲ್ಲ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಅಂತಾ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಿರುತ್ತಾರೆ. ಸಿದ್ಧರಾಮಯ್ಯನವರಿಗೂ ಆ ಕೊರಗು ಇದೆ. ಆ ಕೊರಗು ನೀಗಿಸಬೇಕು ಎಂಬ ಆಸೆ ನನಗೂ ಇದೆ ಎಂದು ತಿಳಿಸಿದ್ದಾರೆ.











