ಬೆಂಗಳೂರು; ರಾಜ್ಯ ಮತ್ತು ಕೇಂದ್ರ ನಡುವೆ ಯೂರಿಯಾ ಗೊಬ್ಬರ ಜಟಾಪಟಿ ವಿಚಾರದ ಬಗ್ಗೆ ಟ್ವೀಟ್ ಮೂಲಕ ಬಿ.ವೈ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ಅನ್ನದಾತ ರೈತನನ್ನು ಸಂಕಷ್ಟಕ್ಕೀಡು ಮಾಡುವ ಹಾಗೂ ವ್ಯವಸ್ಥೆಯಲ್ಲಿ ಶೋಷಣೆಗೊಳಪಡಿಸುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಈ ಬಾರಿ ಆಶಾದಾಯಕ ಮುಂಗಾರಿನ ಹಿನ್ನೆಲೆಯಲ್ಲಿ ಉತ್ತಮ ಬೆಳೆ ಬೆಳೆಯುವ ಉತ್ಸಾಹದಲ್ಲಿರುವ ರೈತ ಸಮುದಾಯವನ್ನು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಸುವ ಕಂಪನಿಗಳು ನಕಲಿ ಬೀಜಗಳನ್ನು ಪೂರೈಸುವ ಮೂಲಕ ಕೃಷಿ ಚಟುವಟಿಕೆಯನ್ನು ನಿಷ್ಕ್ರಿಯಗೊಳಿಸುವ ವಿಷಕಾರಕ ಕೃತ್ಯದಲ್ಲಿ ತೊಡಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಸರ್ಕಾರ ಈ ನಿಟ್ಟಿನಲ್ಲಿ ಅಂತಹ ಕಂಪನಿಗಳ ಮೇಲೆ ಕ್ರಿಮಿನಲ್ ಮುಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಸಕಾಲದಲ್ಲಿ ರೈತ ಸಮೂಹಕ್ಕೆ ಗುಣಮಟ್ಟದ ಬಿತ್ತನೆ ಬೀಜ, ಅಗತ್ಯ ರಸಗೊಬ್ಬರಗಳು ದೊರಕಲು ಸಾಧ್ಯವಿರುವ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಪ್ರಕೃತಿಯನ್ನು ನಂಬಿ ಬದುಕುವ ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ರೈತ ಸಮುದಾಯಕ್ಕೆ ಯಾವುದೇ ತೊಂದರೆಗಳು ಭಾದಿಸದಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಪ್ರೋತ್ಸಾಹ ಯೋಜನೆಗಳ ಜತೆಗೇ ರೈತ ರಕ್ಷಣೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಬದುಕಿಗೆ ಕಿಂಚಿತ್ತೂ ತೊಂದರೆಯಾಗದಂತೆ ಬದ್ಧತೆಯ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಕೃಷಿ ಇಲಾಖೆಗೆ ಪೂರಕ ಶಕ್ತಿ ತುಂಬಲು ರೈತರನ್ನು ವಂಚಿಸುವ ಜಾಲಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಜಾಗೃತ ದಳವನ್ನು ರಚಿಸಬೇಕು. ಈ ಬಾರಿ ಉತ್ತಮ ಮುಂಗಾರಿನ ಮೂಲಕ ರೈತರನ್ನು ಪ್ರಕೃತಿ ಮಾತೆ ಅಪ್ಪಿಕೊಂಡಿದ್ದಾಳೆ. ರೈತ ಅದರ ಪ್ರತಿಫಲ ಅನುಭವಿಸಲು ಭಂಗ ತರುವ ಯಾವುದೇ ವಂಚಕ ಯತ್ನಗಳನ್ನು ಹಿಮ್ಮಟ್ಟಿಸಲು ರಾಜ್ಯ ಸರ್ಕಾರ ಸರ್ಕಾರ ಸಾಧ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರೂರಾಗಿ ತೆಗೆದುಕೊಳ್ಳಲಿ ಎಂದು ಒತ್ತಾಯಿಸುವೆ ಎಂದಿದ್ದಾರೆ.