ಬೆಂಗಳೂರು; ನಾವು ಕರ್ನಾಟಕಕ್ಕೆ ಬಹಳಷ್ಟು ಅನುದಾನ ಕೊಟ್ಟಿದ್ದೇವೆ, ರಾಜ್ಯ ಸರ್ಕಾರ ಅದನ್ನು ಖರ್ಚು ಮಾಡಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಕೃಷಿ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರೊಂದಿಗೆ ಕೇಂದ್ರ ಕೃಷಿ ಸಚಿವ ಚೌಹಾಣ್ ಸಭೆ ನಡೆಸಿದರು.ಸಭೆಯಲ್ಲಿ ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಗುರಿ-ಸವಾಲುಗಳ ಬಗ್ಗೆ ಚರ್ಚೆ ನಡೆಯಿತು. ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದರು.
ರಾಜ್ಯದ ಕೃಷಿ ವಲಯದ ಸಮಸ್ಯೆ, ಸವಾಲುಗಳು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆ ,ರಾಜ್ಯದ ರೈತರ ಸಮಸ್ಯೆ ಕುಂದು ಕೊರತೆ, ಬೆಳೆ ಹಾನಿ ಸೇರಿದಂತೆ ಕೃಷಿ ವಲಯದ ಕುರಿತು ಕೇಂದ್ರ ಸಚಿವರ ಜೊತೆ ರಾಜ್ಯ ಸಚಿವರು ಚರ್ಚೆ ನಡೆಸಿದರು.
ಇನ್ನು ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರಧಾನಿಯವರ ನೇತೃತ್ವದಲ್ಲಿ ಕರ್ನಾಟಕ ವಿಕಾಸಕ್ಕೆ ಆದ್ಯತೆ ಕೊಡುತ್ತೇವೆ. ಬಿಡುಗಡೆ ಮಾಡಿರುವ ಹಾಗೂ ಘೋಷಣೆ ಮಾಡಿರುವ ಅನುದಾನವನ್ನು ಸದ್ಬಳಕೆ ಆಗಲಿ. ಅವರು ಅನುದಾನ ಕೇಳದಿದ್ರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದರು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ. ಆದಷ್ಟು ಬೇಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ನಮ್ಮ ಪಕ್ಷದಲ್ಲಿ ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಸಿ ಆಯ್ಕೆ ಮಾಡ್ತೇವೆ.ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡ್ತೇವೆ ಎಂದರು.
ಪ್ರತೀ ಬಡವನಿಗೂ ಮನೆ ಸಿಗಬೇಕು ಅನ್ನೋದು ಮೋದಿಯವರ ಸಂಕಲ್ಪ. ಕಳೆದ ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ವಿ, ಅನುದಾನವನ್ನೂ ಕೊಟ್ಟಿದ್ವಿ. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಟಾರ್ಗೆಟ್ ಹೆಚ್ಚಿಸಲಾಗಿದೆ. ಇದಕ್ಕಾಗಿ ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ. ಇಂದು ಅಡಿಕೆ ಬೆಳಗಾರರ ಸಮಸ್ಯೆಗಳ ಪರಿಹಾರಕ್ಕೆ ಅನುದಾನ ಕೋರಲಾಯ್ತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ 97 ಕೋಟಿ ರೂ ಬಿಡುಗಡೆ ಮಾಡುತ್ತಿದ್ದೇವೆ. ಮೂರೂ ಸಚಿವರೂ ಒಂದಷ್ಟು ಬೇಡಿಕೆ ಕೊಟ್ಟಿದ್ದಾರೆ. ಅದನ್ನೂ ಆದ್ಯತೆ ಮೇರೆಗೆ ಈಡೇರಿಸಲಾಗುವುದು ಎಂದು ತಿಳಿಸಿದರು.











