ಬೆಂಗಳೂರು: ರಂಗಭೂಮಿ ಆಯ್ತು, ಸಿನಿಮಾ ಆಯ್ತು, ರಾಜಕೀಯ ಆಯ್ತು ಇದೀಗ ಯಕ್ಷಗಾನಕ್ಕೂ ಎಂಟ್ರಿಯಾದ ನಟಿ, ರಾಜಕಾರಣಿ ಉಮಾಶ್ರೀ ಕೊಟ್ಟಿದ್ದಾರೆ. ನಟಿ ಉಮಾಶ್ರೀ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಯಕ್ಷರಂಗ ಪ್ರವೇಶ ಮಾಡಿದ್ದಾರೆ. ಆ ಮೂಲಕ ಯಕ್ಷ ಮೇರು ಕಲಾವಿದ ಪದ್ಮಶ್ರೀ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತಿಮ ಆಸೆಯನ್ನು ನಟಿ ಉಮಾಶ್ರೀ ಈಡೇರಿಸಿದ್ದಾರೆ.
ಉಮಾಶ್ರೀ ಯಕ್ಷಗಾನದ ಮೇರು ಕಲಾವಿದನ ಅಂತಿಮ ಆಸೆಯಂತೆ ಯಕ್ಷಗಾನದ ವೇಷ ತೊಟ್ಟಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಸೈಂಟ್ ಅಂಥೋನಿ ಮೈದಾನದಲ್ಲಿ ನಡೆದ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷರಂಗವನ್ನು ಉಮಾಶ್ರೀ ಪ್ರವೇಶ ಮಾಡಿದ್ದಾರೆ. ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯಿಂದ ನಡೆದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನದಲ್ಲಿ ಉಮಾಶ್ರೀ ಅವರು ಇದೇ ಮೊದಲ ಬಾರಿಗೆ ಯಕ್ಷ ರಂಗದಲ್ಲಿ ಮಂಥರೆಯಾಗಿ ರಂಗ ಪ್ರವೇಶಿಸಿ ಯಕ್ಷ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ.
ಮುಖಕ್ಕೆ ಬಣ್ಣ ಹಚ್ಚಿ, ಜರಿಸೀರೆ ಉಟ್ಟು, ಗೂನು ಬೆನ್ನಿನ ಜತೆ ಕೈ ಸೊಂಟಕ್ಕೆ ಹಿಡಿದು ಮಂಥರೆಯಾಗಿ ರಂಗ ಪ್ರವೇಶ ಮಾಡಿದ್ದಾರೆ. ಖ್ಯಾತ ನಟಿ, ಎಂಎಲ್‌ಸಿ ಉಮಾಶ್ರೀ ಚೆಂಡೆಯ ಪೆಟ್ಟಿನ ಜತೆ ರಂಗಪ್ರವೇಶ ಮಾಡುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆ ಮೂಲಕ ಪ್ರೇಕ್ಷಕರನ್ನು ಅವರಿಗೆ ಭರ್ಜರಿ ಸ್ವಾಗತ ಕೋರಿದ್ರು. ಹಿರಿಯ- ಕಿರಿಯ ತೆರೆಯ ಮೇಲೆ ಪುಟ್ಟಕ್ಕನಾಗಿ, ಅಮ್ಮನಾಗಿ ನಟಿಸಿದ ಖ್ಯಾತ ನಟಿ, ಕಲಾವಿದೆ ಉಮಾಶ್ರೀ ಇಲ್ಲಿ ಮಂಥರೆಯಾಗಿ ಯಕ್ಷಗಾನ ವೇದಿಕೆಯಲ್ಲಿ ನೋಡುಗರ ನೆನಪಿನಂಗಳದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್ರು. 480ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ನಟಿಸಿದ್ದಲ್ಲದೇ, ನಾಟಕ ಕ್ಷೇತ್ರದಲ್ಲೂ ನಟಿಸಿ ಹೆಸರು ಗಳಿಸಿರುವ ಉಮಾಶ್ರೀ ಇದೀಗ ಯಕ್ಷಗಾನ ರಂಗದಲ್ಲೂ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ.
ಉಮಾಶ್ರೀಯವರು ಯಕ್ಷ ರಂಗ ಪ್ರವೇಶ ಮಾಡಿ ಪಾತ್ರ ಮಾಡಲು ಈ ಹಿಂದೆ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಹೇಳಿದ್ದರಂತೆ. ಈ ಹಿಂದೆ ಅವರ ಆಸೆ ನೆರವೇರಿಸಲು ಆಗದ್ದರಿಂದ ಇದೀಗ ಅವರ ಅಂತಿಮ ಆಸೆ ನೆರವೇರಿಸಲು ಯಕ್ಷಗಾನದಲ್ಲಿ ಉಮಾಶ್ರೀ ಮಂಥರೆ ಪಾತ್ರ ಮಾಡಿದ್ದಾರೆ. ಯಕ್ಷಗಾನದ ಯಾವುದೇ ತರಬೇತಿ ಪಡೆಯದಿದ್ರೂ ಮೊದಲಬಾರಿ ರಂಗ ಪ್ರವೇಶ ಮಾಡಿ ಉಮಾಶ್ರೀ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ. ರಾಮಾಯಣದಲ್ಲಿ ಪ್ರಮುಖ ಪಾತ್ರ ಹೊಂದಿರುವ ಒಂದು ವಿಶೇಷ ಪಾತ್ರ ಮಂಥರೆ. ಕುರೂಪಿಯಂತೆ ವರ್ಣಿಸಲಾದ ಮಂಥರೆ, ಅವಿವಾಹಿತೆ ಹಾಗೂ ಕೈಕೇಯಿಯ ನಂಬಿಗಸ್ಥ ಸೇವಕಿ, ಸಖಿ. ಅಯೋಧ್ಯೆಯ ಸಿಂಹಾಸನ ಕೈಕೇಯಿಯ ಪುತ್ರ ಭರತನಿಗೆ ಸೇರಿದ್ದೆಂದು ರಾಮನನ್ನು ಕಾಡಿಗೆ ಕಳುಹಿಸಲು ಕುತಂತ್ರ ಮಾಡಿದವಳು ಮಂಥರೆ. ರಾಣಿ ಕೈಕೇಯಿಗೆ ತಲೆ ಕೆಡಿಸಿದ್ದ ಮಂಥರೆ, ಶ್ರೀರಾಮನ ಪರಿವಾರವನ್ನೇ ಒಡೆದು ಹಾಕಿದ್ದಳು. ಇಂತಹ ಮಂಥರೆಯ ಪಾತ್ರದಲ್ಲಿ ಹಾಸ್ಯಭರಿತ ಮಾತುಗಳೊಂದಿಗೆ ಉಮಾಶ್ರೀ ಅದ್ಭುತವಾಗಿ ಅಭಿನಯಿಸಿ ಯಕ್ಷಪ್ರಿಯರ ಮನಸ್ಸು ಗೆದ್ದಿದ್ದಾರೆ.











