ಬೆಂಗಳೂರು ; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ ಕುರಿತು ವಿಧಾನ ಮಂಡಲ ಪರಿಶೀಲನಾ ಸಮಿತಿಯಿಂದ ವರದಿ ಸಲ್ಲಿಕೆ ಹಿನ್ನೆಲೆ ವಿಧಾನಸೌಧದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸುದ್ದಿ ಗೋಷ್ಠಿ ನಡೆಸಿದ್ರು.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಇಂದು ನನಗೆ ವರದಿಯನ್ನು ಹಸ್ತಾಂತರ ಮಾತ್ರ ಮಾಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನ ಇನ್ನಷ್ಟು ಅಭಿವೃದ್ದಿ ಪಡಿಸಲು ಸರ್ಕಾರ ನಿರ್ಧರಿಸಿದೆ. ಗ್ರೇಟರ್ ಬೆಂಗಳೂರು ಅನ್ನೋ ಹೆಸರಲ್ಲಿ ಬೆಂಗಳೂರಿನ ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಸಮಿತಿ ರಚನೆ ಮಾಡಲಾಗಿತ್ತು.ಈ ಸಮಿತಿ ನನಗೆ ಇಂದು ವರದಿ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಮತ್ತು ತಂಡ ವರದಿಯನ್ನು ನೀಡಿದೆ. ಮುಂದಿನ ಸದನದಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.
ಇನ್ನು ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕದ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ ಸಮಿತಿ ವರದಿಯನ್ನು ಇಂದು ಸಲ್ಲಿಕೆ ಮಾಡಿದ್ದೇವೆ. ವರದಿ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಬರುವ ವಿಶ್ವಾಸವಿದೆ. ಬೆಂಗಳೂರು ನಗರಕ್ಕೆ ಅಗತ್ಯವಿರುವ ಸ್ಟ್ರಕ್ಚರ್ ರೆಡಿ ಮಾಡಬೇಕಿದೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ವೇಳೆ ಪರ್ಯಾಯ ವ್ಯವಸ್ಥೆ ಬೇಕು ಅಂತಾ ಅಭಿಪ್ರಾಯ ಬಂತು. ಸರ್ಕಾರ ತಂದಿರುವ ವಿಧೇಯಕ ಮತ್ತು ನಮ್ಮ ವರದಿಯಲ್ಲಿ ವ್ಯತ್ಯಾಸಗಳು ಆಗಿವೆ. ಆದರೆ ವಿಧೇಯಕದ ಉದ್ದೇಶ ಮಾತ್ರ ಅದೇ ಇದೆ. ವರದಿಯಲ್ಲಿ ನಾವು ಕೆಲವು ಅಂಶಗಳನ್ನು ಹೇಳಿದ್ದೇವೆ. ಬೆಂಗಳೂರು ಬೆಳೆಯುತ್ತಿರುವ ಕಾರಣ ಒಂದೇ ಸಂಸ್ಥೆಯಿಂದ ಆಡಳಿತ ಸಾಧ್ಯವಿಲ್ಲ.ಸಣ್ಣ ಪಾಲಿಕೆಗಳು ವಿಂಗಡಣೆ ಮಾಡಬೇಕು. ಏಳು ಪಾಲಿಕೆಗಳನ್ನು ಮಾಡುವುದಕ್ಕೂ ಅವಕಾಶ ಇದೆ. ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿಗೆ ಸಮನ್ವಯತೆ ಇಲ್ಲ. ತಳ ಹಂತದಲ್ಲಿ ಕೂಡಾ ಸಮನ್ವಯತೆ ಆಗಬೇಕು ಎಂದರು.
30 ತಿಂಗಳಿಗೆ ಮೇಯರ್ ಅವಧಿ, ೫ ವರ್ಷಕ್ಕೆ ಎರಡು ಮೇಯರ್ ಇರಬೇಕು. ಪಾಲಿಕೆಗಳು ಸ್ವಾಯತ್ತತೆ ಯಿಂದ ಕೆಲಸ ಮಾಡುತ್ತವೆ.ಗ್ರೇಟರ್ ಬೆಂಗಳೂರು ಅಥಾರಿಟಿ ಸಮನ್ವಯ ಸಮಿತಿ ಮಾತ್ರ ಆಗಿರುತ್ತದೆ. ಅಥಾರಿಟಿಗೆ ಸಿಎಂ ಅಧ್ಯಕ್ಷರಾಗಿರುವ ಕಾರಣ ಅಥಾರಿಟಿ ಮಟ್ಟದಲ್ಲೇ ತೀರ್ಮಾನಗಳು ಆಗುತ್ತವೆ.ಪಾಲಿಕೆ ವಿಂಗಡಣೆ ವೇಳೆ ಆದಾಯ ಮತ್ತು ಜನಸಂಖ್ಯೆ ಆಧರಿಸಿ ಮಾಡುವಂತೆ ಸಲಹೆ ಮಾಡಿದ್ದೇವೆ ಎಂದು ತಿಳಿಸಿದ್ರು. ಒಂದು ಪಾಲಿಕೆಗೆ 120 ವಾರ್ಡ್ ಗಳ ಮೇಲೆ ಬರುತ್ತವೆ. ಈ ಅಸೆಂಬ್ಲಿಯಲ್ಲಿ ವಿಧೇಯಕ ಅಂಗೀಕಾರ ಆಗುತ್ತದೆ. ಇದು ಆಡಳಿತಾತ್ಮಕ ರೀಸ್ಟ್ರಕ್ಚರ್ ಅಷ್ಟೇ. ಬೆಂಗಳೂರನ್ನು ಒಡೆಯುವ ಪ್ರಶ್ನೆ ಇಲ್ಲ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವಾಗ ಆಡಳಿತಾತ್ಮಕ ಹೊಸ ಸ್ವರೂಪ ಕೊಡಲೇಬೇಕು. ಕಾಲ ಕಾಲಕ್ಕೆ ಒಳ್ಳೆಯ ಆಡಳಿತ ಸಿಗಲಿ ಅಂತಾನೇ ಮಾಡಿದ್ದೇನೆ. ಪಾಲಿಕೆ ವಿಂಗಡಣೆ ಮಾಡುವಾಗ ಬೆಂಗಳೂರು ಉತ್ತರ, ದಕ್ಷಿಣ ಈ ರೀತಿ ಹೆಸರುಗಳೇ ಇರಬೇಕು. ಬೆಂಗಳೂರಿಗೆ ಬೇರೆ ಜಿಲ್ಲೆ ಸೇರಿಸುವ ಪ್ರಶ್ನೆಯೇ ಇಲ್ಲ. ಸಂಪೂರ್ಣ ಸ್ವಾಯತ್ತತೆಯಿಂದ ಪಾಲಿಕೆಗಳು ಆಗುತ್ತವೆ. ಬಿಬಿಎಂಪಿ ಮಾಡೆಲ್ ಈಗಾಗಲೇ ಫೈಲ್ ಆಗಿದೆ. ಮತ್ತೆ ಅದೇ ಮಾಡೆಲ್ ತೆಗೆದುಕೊಂಡು ಹೋಗಲು ಆಗಲ್ಲ.ಸಿಕ್ಕಿ ಸಿಕ್ಕಿದಂತೆ ಎಲ್ಲವನ್ನೂ ಸೇರಿಸಿಕೊಳ್ಳಲು ಆಗಲ್ಲ. ಎಲ್ಲಾ ಏಜೆನ್ಸಿಗಳು ತಿಂಗಳಿಗೆ ಒಂದು ಬಾರಿ ಸಭೆ ಸೇರಬೇಕು ಅಂತಾ ಷರತ್ತು ಹಾಕಿದ್ದೇವೆ.ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಕೂಡಾ ಸಮನ್ವಯ ಸಮಿತಿ ಸಲಹೆ ಮಾಡಿದ್ದೇವೆ ಎಂದರು.
ಬಿಜೆಪಿ, ಜೆಡಿಎಸ್ ಶಾಸಕರು ಒಳಗೊಂಡಂತೆ ಸಮಿತಿ ರಚನೆ ಮಾಡಲಾಗಿದೆ. ವರದಿಯಲ್ಲಿ ಎಲ್ಲರ ಸಲಹೆ, ಸೂಚನೆಗಳು ದಾಖಲಾಗಿವೆ .ಪ್ರತಿ ಪಾಲಿಕೆಗಳು ಕೂಡಾ ಸ್ವಾಯತ್ತೆಯಿಂದ ಕೆಲಸ ಮಾಡಲಿ ಎಂಬ ಸಲಹೆ ಅವರದ್ದು ಇತ್ತು. ಅಂತಿಮ ಸಭೆಯಲ್ಲಿ ವರದಿ ತಯಾರು ಮಾಡಿದ್ದೇವೆ . ಎಸ್.ಟಿ. ಸೋಮಶೇಖರ್ ಸೇರಿದಂತೆ ಬಿಜೆಪಿ ಸದಸ್ಯರು ಕೂಡಾ ವರದಿಗೆ ಸಹಿ ಮಾಡಿದ್ದಾರೆ ಎಂದು ತಿಳಿಸಿದ್ರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕದ ಜಂಟಿ ಪರಿಶೀಲನಾ ಸಮಿತಿ ವರದಿ ಹಸ್ತಾಂತರದ ಬಗ್ಗೆ ಮಾತನಾಡಿದ ಅವರು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಂದ ಹಸ್ತಾಂತರ ಆಗಿದೆ. ಪರಿಶೀಲನಾ ಸಮಿತಿ ಸದಸ್ಯರಾದ ಎಸ್.ಟಿ. ಸೋಮಶೇಖರ್, ಜವರಾಯಿಗೌಡ, ಪ್ರಿಯಾ ಕೃಷ್ಣ, ಶಿವಣ್ಣ ಉಪಸ್ಥಿತರಿದ್ದರು. ಜಂಟಿ ಪರಿಶೀಲನಾ ಸಮಿತಿ ವಿಧಾನಸೌಧದಲ್ಲಿ ವರದಿ ಹಸ್ತಾಂತರಿಸಿದ್ರು.











