ಬೆಂಗಳೂರು; ಸಣ್ಣ ನೀರಾವರಿ ಇಲಾಖೆಯಲ್ಲಿ ಪಾರದರ್ಶಕವಾಗಿ ಎಲ್ಲಾ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಎನ್ ಎಸ್ ಭೋಸರಾಜು ಸ್ಪಷ್ಟನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಸ್ಪೆಷಲ್ ಎಲ್ಓಸಿ ಎನ್ನುವ ಪದ್ದತಿಯೇ ಇಲ್ಲ. ಇಲಾಖೆಯ ಆಡಳಿತದಲ್ಲಿ ಯಾರದ್ದೂ ಹಸ್ತಕ್ಷೇಪ ಇಲ್ಲ. ಕೆರೆಗಳ ಅಧುನಿಕರಣ ಲೆಕ್ಕ ಶೀರ್ಷಿಕೆಯಲ್ಲಿ 10 ಲಕ್ಷದ ವರೆಗೆ ಸಂಪೂರ್ಣ ಹಣ ಬಿಡುಗಡೆ ಮಾಲಾಗಿದೆ. ಅಣೆಕಟ್ಟು ಪಿಕ್ಅಪ್ ಲೆಕ್ಕ ಶೀರ್ಷಿಕೆಯಲ್ಲಿ 15 ಲಕ್ಷದ ವರೆಗೆ ಸಂಪೂರ್ಣ ಹಣ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಹಣ ಬಾಕಿ ಇರುವ ಕಾಮಗಾರಿ/ಗುತ್ತಿಗೆದಾರರಿಗೆ ಏಕರೂಪದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಯಾರೋ ಒಬ್ಬರಿಗೆ ಹೆಚ್ಚು ಯಾರೋ ಒಬ್ಬರಿಗೆ ಕಡಿಮೆ ಮಾಡಿಯೇ ಇಲ್ಲ. ಯಾವುದೇ ತಾರತಮ್ಯ, ಹಸ್ತಕ್ಷೇಪ ಇಲ್ಲದೇ ಅತಿ ಸಣ್ಣ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದೆ.ಕಳೆದೆರಡು ಆರ್ಥಿಕ ವರ್ಷದಲ್ಲಿ 1566 ಗುತ್ತಿಗೆದಾರರ/ ಕಾಮಗಾರಿಗಳ ಸಂಪೂರ್ಣ ಬಾಕಿ ಚುಕ್ತಾ ಆಗಿದೆ. ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿನ ಕಾಮಾಗಾರಿಗಳಿಗೆ ಹಾಗೂ ಗುತ್ತಿಗೆದಾರರರಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಅನುದಾನ ಬಿಡುಗಡೆಗೆ ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಲಾಗಿದ್ದು, ಕಳೆದ ಎರಡು ಆರ್ಥಿಕ ವರ್ಷದಲ್ಲಿ 1566 ಕಾಮಗಾರಿಗಳಿಗೆ ಸಂಪೂರ್ಣ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ/ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆಧಾರ ರಹಿತ ಆರೋಪ ಮಾಡಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ, ರಾಜ್ಯ ಗುತ್ತಿಗೆದಾರರಲ್ಲಿ ಉಂಟಾಗಿದ್ದ ಗೊಂದಲಗಳನ್ನು ಪರಿಹರಿಸಲಾಗಿದೆ ಎಂದರು
2023 – 24 ನೇ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಅನುದಾನದ ವಿವರ ಇಂತಿದೆ:
2023-24 ನೇ ಆರ್ಥಿಕ ವರ್ಷದಲ್ಲಿ ನಾವು ಬಿಜೆಪಿ ಸರಕಾರ, ಹಣಕಾಸಿನ ಲಭ್ಯತೆ ಇಲ್ಲದೇ ಇದ್ದರೂ ಪ್ರಾರಂಭಿಸಿದ್ದ, 12,693 ಕೋಟಿ ರೂಪಾಯಿ ಮೌಲ್ಯದ 15,549 ಕಾಮಾಗಾರಿಗಳನ್ನು ಮುಂದುವರೆಸಿದ್ದೇವೆ.ಈ ವರ್ಷದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸದೆ, ಹಳೆಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ.
ಬಿಜೆಪಿ ಸರಕಾರ ಬಿಟ್ಟು ಹೋಗಿದ್ದ ಅಗಾಧ ಪ್ರಮಾಣದ ಕಾಮಗಾರಿಗಳನ್ನು ನಿಭಾಯಿಸಲು ಹಾಗೂ ಹಣಕಾಸಿನ ಲಭ್ಯತೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾಡಿಕೊಂಡ ಮನವಿಯ ಮೇರೆಗೆ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಲಾಯಿತು.
2000 ಗುತ್ತಿಗೆದಾರರಲ್ಲಿ, 639 ಗುತ್ತಿಗೆದಾರರಿಗೆ ಬಾಕಿ ಇದ್ದ ಸಂಪೂರ್ಣ ಹಣವನ್ನು ಬಿಡುಗೆಡೆ ಮಾಡಲಾಗಿದೆ.
ಉಳಿದ 1361 ಗುತ್ತಿಗೆದಾರರಿಗೆ ಭಾಗಶಃ ಹಣವನ್ನು ಬಿಡುಗಡೆ ಮಾಡಲಾಗಿದೆ
ಪ್ರತಿಯೊಬ್ಬ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪದ ಪ್ರಶ್ನೆ ಎಲ್ಲಿಂದ ಸಾಧ್ಯ?