ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 6 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಕರಣದ ಎ1 ಆರೋಪಿ ಪವಿತ್ರ ಗೌಡಗೆ ಡಿಸೆಂಬರ್ 13 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಶುಕ್ರವಾರ ಜಾಮೀನು ಮಂಜೂರಾಗಿದ್ರು ಪವಿತ್ರಗೌಡ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ. ಜಾಮೀನು ಸಿಕ್ರೂ ಕಳೆದ ನಾಲ್ಕು ದಿನಗಳಿಂದ ಪವಿತ್ರ ಗೌಡ ಜೈಲಿನಲ್ಲೇ ಕಳೆಯುವಂತಾಗಿದೆ.
ಅಂದ್ಹಾಗೆ ನಿನ್ನೆ ಪವಿತ್ರ ಗೌಡ ಅವರಿಗೆ ಷ್ಯೂರಿಟಿ ಸಿಕ್ಕಿದ್ರಿಂದ ಅವರು ನಿನ್ನೆನೇ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗ್ತಾರೆ ಅಂತಾ ಹೇಳಲಾಗಿತ್ತು. ಆದರೆ ನಿನ್ನೆ ಪವಿತ್ರ ಗೌಡಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ನಿನ್ನೆ ಪವಿತ್ರ ಗೌಡ ಷ್ಯೂರಿಟಿ ಪ್ರಕ್ರಿಯೆ ಮುಗಿದು, ಜೈಲಿಗೆ ಆರ್ಡರ್ ಪ್ರತಿ ತಡವಾಗಿ ದೊರೆತಿದೆ. ಹೀಗಾಗಿ ಬಿಡುಗಡೆ ಪ್ರಕ್ರಿಯೆ ಮುಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇವತ್ತು ಬೆಳಗ್ಗೆ 9 ಗಂಟೆ ಬಳಿಕ ರಿಲೀಸ್ ಮಾಡಲು ಜೈಲಾಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ. ಪವಿತ್ರಾಗೌಡ ಮತ್ತು ಪ್ರದೂಶ್ ಇಬ್ಬರೂ ಒಟ್ಟಿಗೆ ರಿಲೀಸ್ ಆಗುವ ಸಾಧ್ಯತೆಯಿದೆ. ಅನುಕುಮಾರ್‌ದು ಇವತ್ತು ಆರ್ಡರ್ ಪ್ರತಿ ಸಿಕ್ಕಿದ್ದಲ್ಲಿ ಅವರೂ ಕೂಡ ಇಂದು ರಿಲೀಸ್ ಆಗಬಹುದು ಎನ್ನಲಾಗಿದೆ.
ಕೋರ್ಟ್ ಗೆ ಬಂದು ಜಾಮೀನು ಪ್ರಕ್ರಿಯೆ ಮುಗಿಸಿದ ದರ್ಶನ್
ಇನ್ನು ನಿನ್ನೆ ನಟ ದರ್ಶನ್ ಅವರು ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ 57ನೇ ಸಿಸಿಹೆಚ್ ಕೋರ್ಟ್‌ಗೆ ತೆರಳಿದರು. ಅಲ್ಲಿ ಜಾಮೀನು ಪ್ರಕ್ರಿಯೆ ಮುಗಿಸಿ ದರ್ಶನ್ ಅವರು ಮರಳಿ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ.
ದರ್ಶನ್ 57 ಸಿಸಿಹೆಚ್ ಕೋರ್ಟ್ ಒಳಗೆ ಬಂದಾಗ ಜಡ್ಜ್ ಬೆಂಚ್‌ನಲ್ಲಿ ಇಲ್ಲದ ಕಾರಣ ಕೆಲ ಹೊತ್ತು ಕಾಯುವಂತಾಯಿತು. ಬೇರೆ ಪ್ರಕರಣದ ವಿಚಾರಣೆಯಲ್ಲಿದ್ದರಿಂದ ನ್ಯಾಯಾಧೀಶರು, ಅದು ಮುಗಿಯುವವರೆಗೂ ಇರಿ ಎಂದು ದರ್ಶನ್ ಅವರಿಗೆ ಕಾಯಲು ಹೇಳಿದ್ರು. ಹಾಗಾಗಿ ಜಡ್ಜ್ ಜೈ ಶಂಕರ್ ಎದುರು ಆರೋಪಿ ದರ್ಶನ್ ಅವರು ಕೆಲ ಹೊತ್ತು ನಿಂತೇ ಇರಬೇಕಾಯಿತು.
ಈ ವೇಳೆ ದರ್ಶನ್ ಪರ ವಕೀಲರು ಕೋರ್ಟ್ ಕೋರ್ಟ್ ಸುತ್ತಮುತ್ತ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರಿಂದ ಆರೋಪಿಯಿಂದ ಬೇಗ ಸಹಿ ಪಡೆಯಲು ಮನವಿ ಮಾಡಿದರು. ಈ ಮನವಿ ಸ್ವೀಕರಿಸಿದ ಜಡ್ಜ್, ಕೋರ್ಟ್ ಹಾಲ್ ಅಲ್ಲೇ ಸಹಿ ಪಡೆಯಲು ಸೂಚಿಸಿದರು. ಬಳಿಕ ಸಹಿ ಹಾಕಿ ದರ್ಶನ್ ಆಸ್ಪತ್ರೆಗೆ ತೆರಳಿದರು.
ಸಾಮಾನ್ಯವಾಗಿ ಆರೋಪಿಗಳು ಜಾಮೀನು ಬಾಂಡ್ ಸಹಿ ಹಾಕಲು ಪೆಂಡಿಂಗ್ ಬ್ರಾಂಚ್‌ಗೆ ತೆರಳಬೇಕಿತ್ತು. ಆದರೆ ಜನಸಾಗರ ಸೇರಿರುವ ಕಾರಣ ದರ್ಶನ್ ಪರ ವಕೀಲರು ಕೋರ್ಟ್ ಹಾಲ್‌ನಲ್ಲೇ ಸಹಿ ಹಾಕಲು ಮನವಿ ಮಾಡಿದ್ದು, ನ್ಯಾಯಾಲಯ ದರ್ಶನ್ ಮನವಿಯನ್ನ ಸ್ವೀಕಾರ ಮಾಡಿದರು. ಅಂತಿಮವಾಗಿ ಕೋರ್ಟ್ ಹಾಲ್‌ನಲ್ಲೇ ಸಹಿ ಮಾಡಿದ ದರ್ಶನ್ ಅವರು ಕೋರ್ಟ್‌ನಿಂದ ಬಹಳ ಕಷ್ಟಪಟ್ಟು ಹೊರಗಡೆ ಬಂದರು. ದರ್ಶನ್ ಗೆ ಆಪ್ತ ಮಿತ್ರ ಧನ್ವೀರ್ ಹಾಗೂ ಸಹೋದರ ದಿನಕ್ರ ತೂಗುದೀಪ್ ಈ ವೇಳೆ ಸಾಥ್ ನೀಡಿದ್ರು.