ಬೆಂಗಳೂರು; ಶಾಸಕರಾದವರು ಮಂತ್ರಿ ಆಗಬೇಕು ಅಂತ ಸ್ವಾಭಾವಿಕವಾಗಿ ಆಸೆ ಹೊಂದಿರುತ್ತಾರೆ, ಅದನ್ನು ತಪ್ಪು ಅಂತಾ ಹೇಳೋಕೆ ಆಗಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕರ ಸಭೆ ಹಾಗೂ ದೆಹಲಿಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಈ ವಿಚಾರವಾಗಿ ನಾನು ಮೊನ್ನೆಯೂ ಕೂಡ ತಿಳಿಸಿದ್ದೇನೆ. ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ಪ್ರತಿಯೊಬ್ಬರಿಗೂ ರಾಜಕಾರಣಕ್ಕೆ ಬಂದಾಗ ಶಾಸಕನಾಗಬೇಕು, ಸಚಿವನಾಗಬೇಕು ಮತ್ತೊಂದಾಗ್ಬೇಕು ಅಂತ ಆಸೆಗಳು ಇರುತ್ತವೆ.ಇಲ್ಲಾಂದ್ರೆ ರಾಜಕಾರಣಕ್ಕೆ ಯಾಕೆ ಬರುತ್ತಾರೆ ಹೇಳಿ.ಯಾವುದೇ ಹುದ್ದೆಗೆ ಸೇರಿದರೂ ಪ್ರಮೋಷನ್ ಗಳು ಇದ್ದೇ ಇರುತ್ತವೆ. ಸಬ್ ಇನ್ಸ್ಪೆಕ್ಟರ್ ನೇಮಕಾದ ನಂತರ ಇನ್ಸ್ಪೆಕ್ಟರ್ ಆಗುತ್ತಾರೆ .ನಂತರ ಡಿವೈಎಸ್ಪಿ ಆಗುತ್ತಾರೆ, ನಂತರ ಎಸ್ಪಿ ಆಗುತ್ತಾರೆ. ರಾಜಕಾರಣದಲ್ಲೂ ಕೂಡ ಇದೇ ರೀತಿ ಶಾಸಕರಾದವರು ಮಂತ್ರಿ ಆಗಬೇಕು ಅಂತ ಸ್ವಾಭಾವಿಕವಾಗಿ ಆಸೆ ಹೊಂದಿರುತ್ತಾರೆ. ಅದನ್ನು ತಪ್ಪು ಅಂತ ಹೇಳುವುದಿಲ್ಲ . ಅವರು ಸಭೆ ಮಾಡುವುದು, ಕೇಳುವುದು, ಹೈಕಮಾಂಡ್ ಬಳಿ ಭೇಟಿ ಮಾಡುವುದು ನಡೆಯುತ್ತಾ ಇರುತ್ತದೆ .ಇದು ರಾಜಕೀಯ ವ್ಯವಸ್ಥೆಯ ಪ್ರಕ್ರಿಯೆ ಎಂದಿದ್ದಾರೆ.
ವಾಣಿಜ್ಯ ಬಳಕೆ ಸಿಲಿಂಡರ್ ಅವ್ಯವಹಾರ ತಡೆಗಟ್ಟಲು ರಾಜ್ಯಕ್ಕೆ ಸಿಬಿಐ ಎಂಟ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಈಗಾಗಲೇ ನಮ್ಮ ಡಿಜಿ ಪ್ರತಿಯೊಂದು ಯೂನಿಟ್ ಗೂ ನಿರ್ದೇಶನ ನೀಡಿದ್ದಾರೆ. ಸರ್ಕಾರದ ವತಿಯಿಂದ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ. ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಅಥವಾ ಬೋರ್ಡಿಂಗ್ ಮಾಡುತ್ತಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ನಗರ ಪೊಲೀಸ್ ಆಯುಕ್ತರು ಈಗಾಗಲೇ ತಂಡಗಳನ್ನು ರಚಿಸಿದ್ದಾರೆ. ಕಾಳಸಂತೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ. ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಒರಿಸ್ಸಾ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಶಿಫ್ಟ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅವರ ಬರುತ್ತಿದ್ದಾರೆ ಅಂತ ಮಾಹಿತಿ ನನಗೆ ಮೊದಲೇ ಇತ್ತು. ಈಗ ಅವರು ಬಂದಿರುವುದು ಯಾಕೆ, ಅವರ ಉದ್ದೇಶ ಏನು ಬಹುಶಃ ನಮ್ಮ ಅಧ್ಯಕ್ಷರು ಅದನ್ನ ನೋಡಿಕೊಳ್ಳುತ್ತಿರುತ್ತಾರೆ ಎಂದ ಅವರು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ತೋರಿ ಸಿಎಂ ಗದ್ದುಗೆ ಏರಲು ಇದು ಕೂಡ ಟಾಸ್ಕ್ ಎಂಬ ಪ್ರಶ್ನೆಗೆ ಉತ್ತರಿಸಿ ಹೈಕಮಾಂಡ್ ಏನು ಸೂಚನೆ ಕೊಟ್ಟಿರುತ್ತಾರೆ ಯಾರ್ಯಾರಿಗೆ ಏನು ಸೂಚನೆ ಕೊಟ್ಟಿರುತ್ತಾರೆ ಅದರ ಮೇಲೆ ಪ್ರತಿಕ್ರಿಯೆಗಳು ಕೆಲಸಗಳು ಆಗುತ್ತಿರುತ್ತವೆ.ಹೈಕಮಾಂಡ್ ಏನಾದ್ರೂ ನಮ್ಮ ಅಧ್ಯಕ್ಷರಿಗೆ ಸೂಚನೆ ಕೊಟ್ಟು ಜವಾಬ್ದಾರಿ ವಹಿಸುವಂತೆ ತೆಗೆದುಕೊಳ್ಳಲು ಸೂಚಿಸಿದರೆ ಮಾಡುತ್ತಾರೆ ಎಂದಿದ್ದಾರೆ.
ಇಕ್ಬಾಲ್ ಹುಸೇನ್ರನ್ನ ಪಕ್ಷದಿಂದ ಹೊರಗಿಡಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾವೇನೇ ಮಾತನಾಡಿದರು ಕೂಡ ವ್ಯಕ್ತಿಗಳಾಗಿ ಮಾತ್ರ ಇರುತ್ತೇವೆ .ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತೇವೆ. ಅಭಿಪ್ರಾಯವನ್ನ ತಿಳಿಸುವ ಸಂದರ್ಭದಲ್ಲಿ ಪಕ್ಷದ ಇತಿಮಿತಿಯ ಒಳಗೆ ನೀಡಿದರೆ ಏನು ಆಗುವುದಿಲ್ಲ . ಪಕ್ಷದ ಇತಿಮಿತಿಯನ್ನು ಮೀರಿ ಹೇಳಿಕೆ ನೀಡಿದರೆ ಹೈ ಕಮಾಂಡ್ ಗಮನಿಸುತ್ತಾರೆ . ಯಾವ ಸಂದರ್ಭದಲ್ಲಿ ಅದನ್ನು ತೆಗೆಯುತ್ತಾರೆ ಅಂತ ನಮಗೆ ಗೊತ್ತೇ ಆಗುವುದಿಲ್ಲ . ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಬೇಕು. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು. ಆ ಸಂದರ್ಭದಲ್ಲಿ ಪಕ್ಷದ ಇತಿಮಿತಿಯನ್ನು ಮೀರಿದ್ದಾರೆ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.ಸ್ಕ್ರೀನಿಂಗ್ ಕಮಿಟಿ ಏನ್ರೀ ಈ ರೀತಿ ಮಾತನಾಡಿದ್ದೀರಿ ಹಿಂದೆ ಅಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಈ ಹಿನ್ನೆಲೆ ಅವರ ಅಭಿಪ್ರಾಯಗಳನ್ನು ವ್ಯಕ್ತಿಗಳಾಗಿ ನೀಡುವಾಗ ಎಚ್ಚರವಿರಲಿ ಎಂದಿದ್ದಾರೆ.











