ವಯನಾಡ್: ಊಹಿಸಲಾಗದ ಜಲ ಸ್ಫೋಟಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದೆ. ಪ್ರವಾಸಿಗರ ಪಾಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಸ್ಮಶಾನವಾಗಿ ಬದಲಾಗಿದೆ. ಹುಡುಕಿದಲ್ಲೆಲ್ಲಾ ಹೆಣಗಳೇ ಪತ್ತೆಯಾಗುತ್ತಿವೆ.200ಕ್ಕೂ ಹೆಚ್ಚು ಜನ ಇದುವರೆಗೂ ಪತ್ತೆಯಾಗಿಲ್ಲ. ಇಡೀ ವಿಶ್ವವೇ ವಯನಾಡಿನ ಜನರಿಗಾಗಿ ಮರಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮಾನವೀಯತೆಯನ್ನೇ ಮರೆತ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ.
ಚೂರಲ್ಮಾಲ ಹಾಗೂ ಮುಂಡಕೈ ಗ್ರಾಮಗಳು ಭೂಕುಸಿತಕ್ಕೆ ಅಕ್ಷರಶಃ ಸ್ಮಶಾನಗಳಾದ್ರೆ ಭೂಕುಸಿತದ ಆತಂಕದಲ್ಲಿದ್ದ ಒಂದಷ್ಟು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದ್ದಾರೆ. ಮನೆ ಮಠ ಎಲ್ಲವನ್ನೂ ಬಿಟ್ಟು ಬಂದಿರುವ ಅವರು ಸದ್ಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ಕಳ್ಳರು ಗ್ರಾಮಗಳಲ್ಲಿರು ಅವರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ತಂಗಿರುವ ರೆಸಾರ್ಟ್ ಗಳಲ್ಲೂ ಕಳ್ಳತನವಾಗುತ್ತಿದ್ದು, ಗ್ರಾಮದಲ್ಲಿರುವ ನಮ್ಮ ಮನೆಗಳಿಗೆ ಹೋಗಿ ನೋಡಿದಾಗ ಅಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿರೋದು ನಮಗೆ ಗೊತ್ತಾಗಿದೆ ಅಂತಾ ಅವರೆಲ್ಲಾ ಹೇಳಿದ್ದಾರೆ. ಹಾಗಾಗಿ ಗ್ರಾಮಗಳಿಗೆ ಅಪರಿಚರಿತರಿಗೆ ಬರೋದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
ವಯನಾಡು ದುರಂತಕ್ಕೆ 360ಕ್ಕೂ ಹೆಚ್ಚು ಮಂದಿ ಬಲಿ
ವಯನಾಡ್: ಎಂದು ಕಂಡು ಕೇಳರಿಯದ ರಣ ಭೀಕರ ಭೂಕುಸಿತಕ್ಕೆ ದೇವರ ನಾಡು ಕೇರಳ ಅಕ್ಷರಶಃ ನಲುಗಿ ಹೋಗಿದೆ. ಹುಡುಕಿದ ಕಡೆಯೆಲ್ಲಾ ಮೃತದೇಹಗಳು ಪತ್ತೆಯಾಗುತ್ತಿದ್ದು ಕ್ಷಣ ಕ್ಷಣಕ್ಕೂ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಇಂದು ಕೂಡ ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ನಡೆಸಿದವು. ಸುಧಾರಿತ ತಾಂತ್ರಿಕ ಉಪಕರಣಗಳು ಹಾಗೂ ಶ್ವಾನಗಳನ್ನು ಬಳಸಿಕೊಂಡು ಬದುಕುಳಿದವರನ್ನು ರಕ್ಷಿಸುವ ಕಾರ್ಯಾಚರಣೆ ಹಾಗೂ ಅವಶೇಷಗಳಡಿ ಅಡಿ ಹುದುಗಿ ಹೋಗಿರುವ ಮೃತದೇಹಗಳ ಪತ್ತೆ ಹಚ್ಚುವಲ್ಲಿ ತೊಡಗಿಸಿಕೊಂಡಿದ್ರು.
ಇದುವರೆಗೂ 360 ಮೃತದೇಹಗಳು ಪತ್ತೆಯಾಗಿದ್ರೆ, ಸುಮಾರು 206 ಜನರು ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಅಧಿಕೃತ ಮೂಲಗಳ ಪ್ರಕಾರ, ಇದುವರೆಗೂ 341 ಮರಣೋತ್ತರ ಪರೀಕ್ಷೆಗಳು ಪೂರ್ಣಗೊಂಡಿವೆ ಮತ್ತು 146 ಮೃತದೇಹಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ.
ವೈಮಾನಿಕ ಡ್ರೋನ್ ಚಿತ್ರಗಳು ಮತ್ತು ಸೆಲ್ ಫೋನ್ಗಳಿಂದ ಜಿಪಿಎಸ್ ನಿರ್ದೇಶಾಂಕಗಳನ್ನು ಬಳಸಿಕೊಂಡು ರಕ್ಷಣಾ ತಂಡಗಳು ಸ್ಥಳೀಯರ ಸಹಕಾರದೊಂದಿಗೆ ಸೋಧ ಕಾರ್ಯ ನಡೆಸುತ್ತಿವೆ. ಇನ್ನು ಸೇನೆ ನಿರ್ಮಿಸಿರುವ 190 ಅಡಿ ಉದ್ದದ 24 ಟನ್ ತೂಕದ ಬೈಲಿ ಸೇತುವೆ ರಕ್ಷಣಾ ಕಾರ್ಯಾಚರಣೆಗೆ ಬಹುದೊಡ್ಡ ಶಕ್ತಿ ಅಂದರೆ ಅತಿಶಯೋಕ್ತಿಯಲ್ಲ.